ADVERTISEMENT

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:27 IST
Last Updated 4 ಫೆಬ್ರುವರಿ 2023, 15:27 IST
   

ಉಡುಪಿ: ನಾಲ್ಕು ವರ್ಷಗಳ ಹಿಂದೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಪಡುಬಿದ್ರಿಯ ಉಮೇಶ್ ಬಂಗೇರ(45) ಶಿಕ್ಷೆಗೆ ಗುರಿಯಾದವ. ಕರಾಟೆ ತರಗತಿ ನಡೆಸುತ್ತಿದ್ದ ಆರೋಪಿಯು 2020 ಫೆ.12ರಂದು ಕರಾಟೆ ತರಗತಿಗೆ ಬಂದಿದ್ದ 12 ವರ್ಷದ ಬಾಲಕಿ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದ.

ಬಾಲಕಿಯ ತಾಯಿ‌ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಕಾಪು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಪೊಕ್ಸೋ ಕಾಯ್ದೆಯಡಿ 10 ವರ್ಷ ಜೈಲು, ₹ 10 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಾದ ಸಜೆ, ಲೈಂಗಿಕ ದೌರ್ಜನ್ಯ ಪ್ರಕರಣದಡಿ 10 ವರ್ಷ ಜೈಲು ಮತ್ತು ₹ 10 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಾದ ಸಜೆ, ಕೊಲೆ ಬೆದರಿಕೆ ಪ್ರಕರಣದಡಿ ಒಂದು ವರ್ಷ ಸಜೆ ಮತ್ತು ₹ 1 ಸಾವಿರ ದಂಡ, ತಪ್ಪಿದಲ್ಲಿ ಒಂದು ತಿಂಗಳ ಸಾದ ಸಜೆ, ಲೈಂಗಿಕ ಕಿರುಕುಳ ಪ್ರಕರಣದಡಿ ಒಂದು ವರ್ಷ ಜೈಲು, ₹ 1 ಸಾವಿರ ದಂಡ ವಿಧಿಸಿದ್ದಾರೆ.

ದಂಡದ 22,000 ಮೊತ್ತದಲ್ಲಿ 17,000 ನೊಂದ ಬಾಲಕಿಗೆ ಪರಿಹಾರ ಮತ್ತು ₹ 5000 ಸರ್ಕರಕ್ಕೆ ಪಾವತಿಸುವಂತೆ ಸೂಚಿಸಿದ್ದಾರೆ. ನೊಂದ ಬಾಲಕಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ₹ 1 ಲಕ್ಷ ಪರಿಹಾರ ನೀಡಲು ಸಹ ಆದೇಶಿಸಿದ್ದಾರೆ.

ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.