ADVERTISEMENT

ಉಡುಪಿ | ‘ಅಳಿವಿನಂಚಿನ ಮತ್ಸಗಳನ್ನು ರಕ್ಷಿಸಿ’

ವೇಲ್ ಶಾರ್ಕ್‌ ರಕ್ಷಿಸಿದ ಮಲ್ಪೆಯ ಮೀನುಗಾರರಿಗೆ ‌ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:34 IST
Last Updated 6 ಅಕ್ಟೋಬರ್ 2024, 5:34 IST
ವೇಲ್‌ ಶಾರ್ಕ್‌ ರಕ್ಷಿಸಿದ ಮೀನುಗಾರರ ತಂಡವನ್ನು ಸನ್ಮಾನಿಸಲಾಯಿತು
ವೇಲ್‌ ಶಾರ್ಕ್‌ ರಕ್ಷಿಸಿದ ಮೀನುಗಾರರ ತಂಡವನ್ನು ಸನ್ಮಾನಿಸಲಾಯಿತು   

ಉಡುಪಿ: ಅಳಿವಿನಂಚಿನಲ್ಲಿರುವ ಮತ್ಸಗಳನ್ನು ಹಿಡಿಯದೆ, ರಕ್ಷಿಸುವ ಕಾರ್ಯಕ್ಕೆ ಮೀನುಗಾರರು ಮುಂದಾಗಬೇಕು ಎಂದು ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಸುಜಿತಾ ಥಾಮಸ್‌ ಹೇಳಿದರು.

ಸಮುದ್ರದಲ್ಲಿ ಬಲೆಗೆ ಬಿದ್ದ ವೇಲ್ ಶಾರ್ಕ್‌ (ಬೊಟ್ಟು ತಾಟೆ) ಅನ್ನು ರಕ್ಷಿಸಿದ ಮೀನುಗಾರರಿಗೆ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರ, ಮೀನುಗಾರಿಕೆ ಇಲಾಖೆ ಮತ್ತು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವತಿಯಿಂದ ಮಲ್ಪೆಯ ಮೀನುಗಾರರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೇಲ್‌ ಶಾರ್ಕ್‌, ಗಿಟಾರ್‌ ಫಿಶ್‌, ಡಾಲ್ಫಿನ್‌ ಸೇರಿದಂತೆ 12 ಪ್ರಭೇದದ ಮತ್ಸಗಳನ್ನು ಹಿಡಿಯುವುದಕ್ಕೆ ನಿರ್ಬಂಧವಿದೆ. ಇಂತಹ ಮೀನುಗಳು ಬಲೆಗೆ ಬಿದ್ದರೆ ಅವುಗಳನ್ನು ಮರಳಿ ಸಮುದ್ರಕ್ಕೆ ಬಿಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಮಲ್ಪೆಯ ಪರ್ಸಿನ್‌ ಬೋಟ್‌ನ ಬಲೆಗೆ ಬಿದ್ದ ವೇಲ್‌ ಶಾರ್ಕ್‌ ಅನ್ನು ಮರಳಿ ಸಮುದ್ರಕ್ಕೆ ಬಿಟ್ಟಿರುವ ಮೀನುಗಾರರ ಕಾರ್ಯ ಶ್ಲಾಘನೀಯ. ವೇಲ್‌ ಶಾರ್ಕ್‌ 1ರಿಂದ 2ಟನ್‌ ಭಾರ ಇರುತ್ತದೆ. ಅವುಗಳು ಅಳಿವಿನಂಚಿನಲ್ಲಿದೆ. ಅವುಗಳನ್ನು ಹಿಡಿದರೆ ಜೈಲು ಶಿಕ್ಷೆಗೆ ಕೂಡ ಗುರಿಯಾಗಬೇಕಾದೀತು ಎಂದು ಹೇಳಿದರು.

ವೇಲ್‌ ಶಾರ್ಕ್‌ ಅನ್ನು ರಕ್ಷಿಸಿದ್ದ ಬೋಟ್‌ನ ಮಾಲೀಕ ಸದಾಶಿವ ಎಸ್‌. ಮೆಂಡನ್‌ ಮಾತನಾಡಿ, ದಡದಿಂದ 15 ನಾಟಿಕಲ್‌ ಮೈಲು ದೂರದಲ್ಲಿ ನಮ್ಮ ಪರ್ಸಿನ್‌ ಬೊಟ್‌ನ ಬಲೆಗೆ ವೇಲ್‌ ಶಾರ್ಕ್‌ ಬಿದ್ದಿದೆ. ಅಂದಾಜು ಎರಡು ಟನ್‌ನಷ್ಟು ಬಾರದ ಮೀನನ್ನು ಬಲೆಯಿಂದ ಬಿಡಿಸಿ, ನಾವು ಕಡಲಿಗೆ ಬಿಟ್ಟಿದ್ದೇವೆ. ಇಂತಹ ಅಪರೂಪದ ಮೀನುಗಳನ್ನು ನಾವ್ಯಾರೂ ಹಿಡಿಯುವುದಿಲ್ಲ. ಅವುಗಳ ರಕ್ಷಣೆ ಮೀನುಗಾರರಾದ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಸುವರ್ಣ ಮಾತನಾಡಿ, ಪ್ಲ್ಯಾಸ್ಟಿಕ್‌ ಕಸ ಕಡಲು ಸೇರುವುದರಿಂದ ಮೀನುಗಳ ಸಂತತಿಯು ನಾಶವಾಗುವುದರ ಮೂಲಕ ಮೀನುಗಾರಿಕೆಯೂ ಅಳಿವಿನಂಚಿಗೆ ತಲುಪಿದೆ ಎಂದು ಪ್ರತಿಪಾದಿಸಿದರು.

ಸರ್ಕಾರ ನಿರ್ಬಂಧಿಸಿರುವ ಯಾವುದೇ ಮೀನುಗಳನ್ನು ನಮ್ಮ ಮೀನುಗಾರರು ಹಿಡಿಯುವುದಿಲ್ಲ. ಜೊತೆಗೆ ಪ್ಲ್ಯಾಸ್ಟಿಕ್ ಕಸ ಕಡಲು ಸೇರದಂತೆ ಮೀನುಗಾರರು ಸೇರಿದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್‌ ಆರ್‌. ಆಳ್ವ, ಉಪ ನಿರ್ದೇಶಕಿ ಅಂಜನಾ ದೇವಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಪರ್ಸಿನ್‌ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಮೃದುಲಾ ರಾಜೇಶ್ ಇದ್ದರು.

ಕಾರ್ಯಕ್ರಮದಲ್ಲಿ ವೇಲ್‌ ಶಾರ್ಕ್‌ ರಕ್ಷಿಸಿದ ಮೀನುಗಾರರ ತಂಡವನ್ನು ಸನ್ಮಾನಿಸಲಾಯಿತು.

ಈ ಬಾರಿ ಮತ್ಸಕ್ಷಾಮ ಎದುರಾಗಿಲ್ಲ. ಹವಾಮಾನ ವೈಪರೀತ್ಯದಿಂದಾಗಿ ದೋಣಿಗಳು ಕಡಲಿಗಿಳಿಯದೆ ಮೀನುಗಳ ಕ್ಷಾಮ ತಲೆದೋರಿದೆ

-ಸುಜಿತಾ ಥಾಮಸ್‌ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥೆ

ಅಳಿವಿನಂಚಿನ ಮೀನುಗಳನ್ನು ಹಿಡಿಯದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ತಿಂಗಳ ಹಿಂದೆ ಹಮ್ಮಿಕೊಂಡಿದ್ದೆವು. ಇನ್ನಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಸ

-ವಿತಾ ಖಾದ್ರಿ ಬಂದರು ಉಪ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.