ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಹಾಗೂ ಡ್ರಗ್ಸ್ ಸೇವನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಮಾದಕ ವಸ್ತುಗಳ ಸೇವನೆ ಸಂಬಂಧ ಬರೋಬ್ಬರಿ 100 ಮಂದಿಯ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಿಗಾ ಇರಿಸಲಾಗಿದೆ.
ಆಗಸ್ಟ್ 17ರಂದು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಹಾಕೆ ಅಕ್ಷಯ್ ಮಚ್ಚಿಂದ್ರ ಜಿಲ್ಲೆಯಲ್ಲಿ ಡ್ರಗ್ ಮಾಫಿಯಾ ಮಟ್ಟಹಾಕುವ ಭರವಸೆ ನೀಡಿದ್ದರು. ಅದರಂತೆ, ಅಧಿಕಾರ ಸ್ವೀಕರಿಸಿ ಒಂದು ತಿಂಗಳಲ್ಲಿ ಎನ್‌ಡಿಪಿಎಸ್ ಪ್ರಕರಣಗಳ ಸಂಖ್ಯೆ ಶತಕದ ಗಡಿ ತಲುಪಿದೆ.
ಎಲ್ಲೆಲ್ಲಿ ಪ್ರಕರಣ ದಾಖಲು:
ಆ.20ರಂದು ಕುಂದಾಪುರ ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ, ಕೋಡಿ ಬೀಚ್, ಹೆಮ್ಮಾಡಿ, ಉಡುಪಿಯ ಅನಂತಕೃಷ್ಣ ನಗರ, ಬೋರ್ಡ್ ಹೈಸ್ಕೂಲ್, ಸುನಾಗ್ ಆಸ್ಪತ್ರೆಯ ಎದುರು, ಶಿರ್ವ ಠಾಣೆ ವ್ಯಾಪ್ತಿಯ ಬೆಳಪು, ಬೈಂದೂರಿನ ಶಿರೂರು ಮಾರುಕಟ್ಟೆ, ಟೋಲ್‌ಗೇಟ್, ತ್ರಾಸಿ ಪ್ರವಾಸಿ ಮಂದಿರದ ಬಳಿಯ ಬೀಚ್‌ನಲ್ಲಿ ಗಾಂಜಾ ಸೇವಿಸಿ ಮೋಜು ಮಾಡುತ್ತಿದ್ದ ಯುವಕರನ್ನು ವಶಕ್ಕೆ ಪಡೆಯಲಾಗಿತ್ತು. ಒಂದೇ ದಿನ 11 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 16 ಮಂದಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಆ.21ರಂದು ಬೈಂದೂರಿನ ಶಿರೂರು ರೈಲ್ವೆ ನಿಲ್ದಾಣ, ಮಾರುಕಟ್ಟೆ, ಮಲ್ಪೆಯ ಮೂಡುತೋನ್ಸೆ ಗ್ರಾಮದ ನೇಜಾರು ಜಂಕ್ಷನ್, ಕಾರ್ಕಳದ ರಾಮಸಮುದ್ರ ಕೆರೆಯ ಬಳಿ 6 ಮಂದಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿತ್ತು.
22ರಂದು ಬೆಳಪು ಗ್ರಾಮದ ಪಣಿಯೂರು, ಉಳಿಯಾರಗೋಳಿ ಗ್ರಾಮದ ಪೊಲಿಪು ಜಂಕ್ಷನ್, ಮಣಿಪಾಲದ ಆರ್‌ಟಿಓ ಕಚೇರಿ ರಸ್ತೆ, ಕಾಯಿನ್ ಸರ್ಕಲ್, ಮಣಿಪಾಲ ಪೆರಂಪಳ್ಳಿ ರಸ್ತೆ, ಕಾಪು ತಾಲ್ಲೂಕು ನಡ್ಸಾಲು ಗ್ರಾಮದ ಕಂಚಿನಡ್ಕ ಸುಬ್ಬಪ್ಪನ ಕಾಡು, ಬ್ರಹ್ಮಾವರ ತಾಲ್ಲೂಕಿನ ಮಣೂರು ಬಳಿ ಗಾಂಜಾ ಸೇವನೆ ಮಾಡಿದವರನ್ನು ವಶಕ್ಕೆ ಪಡೆಯಲಾಗಿತ್ತು.
23ರಂದು 92ನೇ ಹೇರೂರು, ಮಣಿಪಾಲದ ಶೀಂಬ್ರಾ ಪ್ರಗತಿ ನಗರ, 24ರಂದು ಪೆರಂಪಳ್ಳಿ ಶೀಂಬ್ರ ಸೇತುವೆ, ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಬಳಿ, ಹೆರ್ಗಾ ಗ್ರಾಮದ ಈಶ್ವರ ನಗರ, 26ರಂದು ಬೈಂದೂರಿನ ಶಿರೂರು ಸಮುದ್ರ ತೀರ, ಸೊಮೇಶ್ವರ ಬೀಚ್, ಕಾರ್ಕಳದ ಬಂಗ್ಲೆಗುಡ್ಡೆ ಪರನೀರು ಮೈದಾನ, 27ರಂದು ಉಡುಪಿಯ ಕುಕ್ಕಿಕಟ್ಟೆ, ಮಂಚಿಕೆರೆ, ಗಂಗೊಳ್ಳಿಯ ತ್ರಾಸಿ ಪ್ರವಾಸಿ ಮಂದಿರ ಬಳಿಯ ಬೀಚ್, 28ರಂದು ಬೈಂದೂರಿನ ಶಿರೂರು ಸಮುದ್ರ ಕಿನಾರೆ, ಹಡವಿನಕೋಣೆ ಶಾಲೆಯ ಬಳಿ, 29ರಂದು ಕಾಪು ಪಡುವಿನ ಬಂಗ್ಲೆಗುಡ್ಡೆ, 30ರಂದು ತ್ರಾಸಿ ಬೀಚ್, ಉಡುಪಿಯ ಕಡಿಯಾಳಿ ದೇವಸ್ಥಾನ ಸಮೀಪ, ಕಾಪುವಿನ ಬಡಾ, ನಾಡ್ಸಾಲು ಕಂಚಿನಡ್ಕ ಸಮೀಪ ಕಾರ್ಯಾಚರಣೆ ನಡೆಸಲಾಗಿತ್ತು.
ಸೆ.7ರಂದು ತ್ರಾಸಿ ಪ್ರವಾಸಿ ಮಂದಿರ, ಬೀಚ್‌ನ ಪಾರ್ಕ್, 8ರಂದು ಕಾರ್ಕಳದ ನಿಟ್ಟೆ ಗರಡಿ, ಕುಂದಾಪುರದ ಫೇರಿ ರಸ್ತೆ, ಬೈಂದೂರಿನ ಶಿರೂರು ಮಾರುಕಟ್ಟೆ, 9ರಂದು ಸಾಲಿಗ್ರಾಮ ಬಸ್ ನಿಲ್ದಾಣ, ಪೆರಂಪಳ್ಳಿ, ಹೆಜಮಾಡಿ ಕೋಡಿ, ಹಿರಿಯಡ್ಕ ಬಸ್ ನಿಲ್ದಾಣ, 52ನೇ ಹೇರೂರು ಗ್ರಾಮದ ಕೆ.ಇ.ಬಿ ಕ್ವಾಟ್ರಸ್, ಉಪ್ಪೂರು ಗ್ರಾಮದ ಕೊಳಲಗಿರಿ, ತೆಂಕನಿಡಿಯೂರಿನ ಗರಡಿಮಜಲು, 10ರಂದು ಕಾರ್ಕಳ ಸಾಲ್ಮರ ಗ್ಯಾಲಕ್ಸಿ ಹಾಲ್, 12ರಂದು ವಾರಂಬಳ್ಳಿ, ನೀಲಾವರ ಚರ್ಚ್, ನೀಲಾವರ ಜಂಕ್ಷನ್, 13ರಂದು ಆತ್ರಾಡಿ ಗ್ರಾಮದ ಶ್ರೀನಿಧಿ ಬಾರ್, ಬೈಂದೂರಿನ ಶಿರೂರು ಮಾರ್ಕೆಟ್ ಬಳಿ ಕಾರ್ಯಾಚರಣೆ ನಡೆಸಲಾಗಿತ್ತು.
14ರಂದು ಗುಡ್ಡೆಯಂಗಡಿ ಪೂಪಾಡಿಕಲ್ಲು ಬಸ್ ನಿಲ್ದಾಣ, ಮಣಿಪುರ ಸೇತುವೆ ಬಳಿ, 15ರಂದು ತ್ರಾಸಿ ಬೀಚ್, ಕುಂದಾಪುರ ತಾಲ್ಲೂಕಿನ ಕಂದಾವರ ಗ್ರಾಮದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದ ಬಳಿ, ಮೂಡ್ಲಕಟ್ಟೆ ಕಾಲೇಜು, ಹೂಡೆ ಜಂಕ್ಷನ್ ಬಳಿ ಗಾಂಜಾ ಸೇವಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿ ನಿಲ್ಲುವುದಿಲ್ಲ: ಎಸ್‌ಪಿ
ಜಿಲ್ಲೆಯಲ್ಲಿ ಗಾಂಜಾ ಪೂರೈಕೆ, ಮಾರಾಟ ಹಾಗೂ ಸೇವನೆ ತಡೆಯಲು ನಿರಂತರ ದಾಳಿಗಳು ನಡೆಯುತ್ತಿದೆ. ಗಾಂಜಾ ಸೇವನೆ ತಡೆದರೆ ಸಹಜವಾಗಿ ಗಾಂಜಾ ಪೂರೈಕೆ ಹಾಗೂ ಮಾರಾಟವೂ ನಿಲ್ಲಲಿದೆ. ಗಾಂಜಾ ಪೂರೈಕೆ ಜಾಲ ಬೇಧಿಸುವ ಕಾರ್ಯವೂ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಗಾಂಜಾ ಮಾಫಿಯಾ ಸಂಪೂರ್ಣ ನಿಯಂತ್ರಣಕ್ಕೆ ತರಬೇಕು ಎಂಬುದು ಇಲಾಖೆಯ ಗುರಿ.
–ಹಾಕೆ ಅಕ್ಷಯ್ ಮಚ್ಚಿಂದ್ರ, ಎಸ್‌ಪಿ
ಡಿಸೈನರ್ ಡ್ರಗ್ಸ್ ಹಾವಳಿ
ಉಡುಪಿ ಜಿಲ್ಲೆಯಲ್ಲಿ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಾಂಗ ಮಾಡುತ್ತಿದ್ದು ಗಾಂಜಾ ಪೂರೈಕೆ ಹಾಗೂ ಸೇವನೆ ಹೆಚ್ಚಾಗಿದೆ. ಗಾಂಜಾ ಸೊಪ್ಪಿನಿಂದ ಹಿಡಿದು ಡಿಸೈನರ್ ಡ್ರಗ್ಸ್ ಎಂದು ಕರೆಸಿಕೊಳ್ಳುವ ಎಂಡಿಎಂಎ ಎಕ್ಸಟಸಿ ಮಾತ್ರೆ, ಎಲ್‌ಎಸ್‌ಡಿ ಸ್ಟಾಂಪ್, ಬ್ರೌನ್ ಶುಗರ್, ಹೈಡ್ರೊ ವೀಡ್ ಸೇವನೆ ಮಾಡಲಾಗುತ್ತದೆ. ಈ ಹಿಂದೆ ದಾಳಿ ನಡೆಸಿದಾಗ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಂಥೆಡಿಕ್ ಡ್ರಗ್ಸ್ ಪತ್ತೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.