ADVERTISEMENT

ಉಡುಪಿ | ಬಿಸಿಲು ಬಂದರೂ ರಸ್ತೆಗಿಲ್ಲ ದುರಸ್ತಿ ಭಾಗ್ಯ

ಅಂಬಲಪಾಡಿ ಸರ್ವಿಸ್‌ ರಸ್ತೆ ದುರವಸ್ಥೆ: ನಿತ್ಯ ವಾಹನ ದಟ್ಟಣೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 6:46 IST
Last Updated 10 ಅಕ್ಟೋಬರ್ 2025, 6:46 IST
ಕರಾವಳಿ ಬೈಪಾಸ್‌ ಬಳಿ ಸರ್ವಿಸ್‌ ರಸ್ತೆ ಹದಗೆಟ್ಟಿರುವುದು
ಕರಾವಳಿ ಬೈಪಾಸ್‌ ಬಳಿ ಸರ್ವಿಸ್‌ ರಸ್ತೆ ಹದಗೆಟ್ಟಿರುವುದು   

ಉಡುಪಿ: ಹಲವು ದಿನಗಳಿಂದ ಬಿಸಿಲಿನ ವಾತಾವರಣವಿದ್ದರೂ ಹದಗೆಟ್ಟಿರುವ ಸರ್ವಿಸ್‌ ರಸ್ತೆ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಉಡುಪಿಯ ಕಿನ್ನಿಮುಲ್ಕಿಯಿಂದ ಕರಾವಳಿ ಬೈಪಾಸ್‌ವರೆಗೆ ಹಾಗೂ ಕರಾವಳಿ ಬೈಪಾಸ್‌ನಿಂದ ಕಿನ್ನಿಮುಲ್ಕಿವರೆಗಿನ ಸರ್ವಿಸ್‌ ರಸ್ತೆ ಸಂಪೂರ್ಣ ಹದಗೆಟ್ಟು ತಿಂಗಳುಗಳೇ ಕಳೆದರೂ ಇನ್ನೂ ದುರಸ್ತಿ ಕಾರ್ಯ ನಡೆದಿಲ್ಲ.

ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಎಲ್ಲಾ ವಾಹನಗಳು ಈ ಸರ್ವಿಸ್‌ ರಸ್ತೆಯಲ್ಲೇ ಸಾಗುತ್ತಿವೆ.

ADVERTISEMENT

ಮಳೆಗಾಲದಲ್ಲಿ ರಸ್ತೆ ಹೊಂಡಗಳಲ್ಲಿ ಮಳೆನೀರು ನಿಂತು ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸಿದ್ದರು. ಈಗ ಮಳೆ ನಿಂತರೂ ವಾಹನಗಳು ಗುಂಡಿಗಳಿಗೆ ಬಿದ್ದು, ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಸರ್ವಿಸ್‌ ರಸ್ತೆಗಳಲ್ಲಿ ಬೃಹದಾಕಾರದ ಹೊಂಡಗಳು ನಿರ್ಮಾಣವಾಗಿದ್ದು, ಅವುಗಳಿಗೆ ತೇಪೆ ಕಾರ್ಯ ಮಾಡುವ ಬದಲು ಸಂಬಂಧಪಟ್ಟವರು ದೊಡ್ಡ ದೊಡ್ಡ ಜಲ್ಲಿ ಕಲ್ಲುಗಳನ್ನು ಸುರಿದಿದ್ದಾರೆ. ಇದರಿಂದ ನಿತ್ಯ ದ್ವಿಚಕ್ರವಾಹನ ಸವಾರರು ಆಯತಪ್ಪಿ ಬಿಳುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಅಂಬಲಪಾಡಿ ಬೈಪಾಸ್‌ನಲ್ಲಿ ಮೂರು ರಸ್ತೆ ಸೇರುವಲ್ಲಿ ಸರ್ವಿಸ್‌ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸಬೇಕಾಗಿದೆ.

ಕಿರಿದಾದ ಸರ್ವಿಸ್‌ ರಸ್ತೆಗಳಲ್ಲಿ ನಿತ್ಯ ಟ್ರಕ್‌ ಸೇರಿದಂತೆ ಘನವಾಹನಗಳು ಸಂಚರಿಸುತ್ತಿದ್ದು, ರಸ್ತೆ ಹೊಂಡಗಳಿಗೆ ಸುರಿದಿರುವ ದೊಡ್ಡ ಜಲ್ಲಿಕಲ್ಲುಗಳಿಗೆ ಸಿಲುಕಿ ದ್ವಿಚಕ್ರ ವಾಹನ ಸವಾರರು ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದೆ ಅಂಬಲಪಾಡಿಯ ಸರ್ವಿಸ್‌ ರಸ್ತೆಯಲ್ಲಿ ರಸ್ತೆ ಹೊಂಡದಿಂದಾಗಿ ಬೈಕ್‌ ಮಗುಚಿ, ಸವಾರರೊಬ್ಬರು ಟ್ರಕ್‌ ಚಕ್ರಗಳ ಅಡಿಗೆ ಬಿದ್ದು ಮೃತಪಟ್ಟಿದ್ದರು. ಆದರೂ ಅಧಿಕಾರಿಗಳಾಗಲಿ, ಮೇಲ್ಸೇತುವೆ ಕಾಮಗಾರಿ ನಡೆಸುವವರಾಗಲಿ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸರ್ವಿಸ್‌ ರಸ್ತೆಯ ಹೊಂಡಗಳಿಗೆ ಜಲ್ಲಿ ಕಲ್ಲುಗಳನ್ನು ಸುರಿದಿರುವುದರಿಂದ ಬಿಸಿಲಿನ ವಾತಾವರಣವಿರುವಾಗ ದೂಳಿನಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸರ್ವಿಸ್‌ ರಸ್ತೆಗೆ ಡಾಂಬರು ಹಾಕಬೇಕು. ಹದಗೆಟ್ಟಿರುವ ರಸ್ತೆಯಲ್ಲಿ ರಾಂಗ್‌ಸೈಡ್‌ ಸಂಚಾರ ಮಾಡುವವರಿಂದಲೂ ಸಮಸ್ಯೆಗಳು ಉಂಟಾಗುತ್ತಿದ್ದು, ಅವರಿಗೂ ಸಂಬಂಧಪಟ್ಟವರು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಅಂಬಲಪಾಡಿ ಬೈಪಾಸ್‌ ಬಳಿ ಸರ್ವಿಸ್‌ ರಸ್ತೆಯ ದುರವಸ್ಥೆ

ರಾಂಗ್‌ಸೈಡ್‌ ಸಂಚಾರದಿಂದಲೂ ಸಮಸ್ಯೆ ದ್ವಿಚಕ್ರ ವಾಹನ ಸವಾರರಿಗೆ ನಿತ್ಯ ತೊಂದರೆ

ಹದಗೆಟ್ಟಿರುವ ಸರ್ವಿಸ್‌ ರಸ್ತೆಯಲ್ಲಿ ವಾಹನಗಳು ತೆವಳಿಕೊಂಡು ಹೋಗಬೇಕಾದ ಕಾರಣ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ. ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ

- ಪ್ರಶಾಂತ್‌ ಕಡೇಕಾರ್‌

‘ದೊಡ್ಡ ಮಟ್ಟದಲ್ಲಿ ಹೋರಾಟ’

ಅಂಬಲಪಾಡಿಯ ಸರ್ವಿಸ್‌ ರಸ್ತೆ ಹದಗೆಟ್ಟು ತಿಂಗಳುಗಳೇ ಕಳೆದರೂ ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಿಲ್ಲ ಇನ್ನಾದರೂ ದುರಸ್ತಿಗೆ ಮುಂದಾಗದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ. ಈ ಸರ್ವಿಸ್‌ ರಸ್ತೆಯಲ್ಲಿ ಅಪಘಾತ ಸಂಭವಿಸಿ ಪ್ರಾಣಾಪಾಯವಾಗಿದ್ದರೂ ಸಂಬಂಧಪಟ್ಟವರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ರಸ್ತೆ ತೀರಾ ಹದಗೆಟ್ಟಿರುವುದರಿಂದ ಆಂಬುಲೆನ್ಸ್‌ಗಳಿಗೂ ಸಂಚರಿಸಲು ಸಮಸ್ಯೆಯಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.