ADVERTISEMENT

ಉಡುಪಿ| ಸಿಗದ 108 ಆಂಬುಲೆನ್ಸ್‌: ಟೆಂಪೊದಲ್ಲಿ ರೋಗಿ ಆಸ್ಪತ್ರೆಗೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:32 IST
Last Updated 9 ಡಿಸೆಂಬರ್ 2025, 4:32 IST
ರೋಗಿಯನ್ನು ಟೆಂಪೊದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು
ರೋಗಿಯನ್ನು ಟೆಂಪೊದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು   

ಉಡುಪಿ: 108 ಆಂಬುಲೆನ್ಸ್‌ ಸಕಾಲಕ್ಕೆ ಸಿಗದ ಕಾರಣ ಉದ್ಯಾವರದಲ್ಲಿ ಅಸ್ವಸ್ಥಗೊಂಡಿದ್ದ ರೋಗಿಯೊಬ್ಬರನ್ನು ಸಾಮಾಜಿಕ ಕಾರ್ಯಕರ್ತ ವಿಷು ಶೆಟ್ಟಿ ಅಂಬಲಪಾಡಿ ಅವರು ಗೂಡ್ಸ್‌ ಟೆಂಪೊದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

‘ರೋಗಿಯ ಸಂಬಂಧಿಕರು 108 ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸಿಗಲಿಲ್ಲ. ಆಗ ನನಗೆ ಕರೆ ಮಾಡಿದರು. ಖಾಸಗಿ ಆಂಬುಲೆನ್ಸ್‌ ಕೂಡ ಸಿಗಲಿಲ್ಲ. ಕೂಡಲೇ ಗೂಡ್ಸ್ ಟೆಂಪೊದಲ್ಲಿ ಮಂಚ ಇರಿಸಿ ಅದರಲ್ಲಿ ರೋಗಿಯನ್ನು ಮಲಗಿಸಿ ಕರೆದೊಯ್ದೆವು’ ಎಂದು ವಿಷು ಶೆಟ್ಟಿ ತಿಳಿಸಿದರು.

‘108 ಆಂಬುಲೆನ್ಸ್‌ಗೆ ಸಂಬಂಧಿಸಿ ಕಳೆದ ಒಂದು ವರ್ಷದಿಂದ ಸಮಸ್ಯೆ ಇದ್ದರೂ ಪರಿಹಾರ ಸಿಕ್ಕಿಲ್ಲ. ಇನ್ನಾದರೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ 108 ಆಂಬುಲೆನ್ಸ್ 18 ಇದ್ದರೂ ಸೇವೆಗೆ ಸಿಗುವುದು ಐದರಿಂದ ಆರು ಮಾತ್ರ’ ಎಂದೂ ಅವರು ಹೇಳಿದ್ದಾರೆ.

‘ರೋಗಿಗಳ ಜೀವದೊಂದಿಗೆ ಚೆಲ್ಲಾಟ’

'ತುರ್ತು ಸಂದರ್ಭದಲ್ಲಿ ರೋಗಿ 2 ಗಂಟೆ ಕಾದರೂ 108 ಸೇವೆ ಲಭ್ಯವಾಗದೆ ಸಮಾಜಸೇವಕ ವಿಶು ಶೆಟ್ಟಿ ಅವರು ರೋಗಿಯನ್ನು ಗೂಡ್ಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು ರಾಜ್ಯ ಸರ್ಕಾರ ಜಿಲ್ಲೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿದ್ದು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

‘2 ವರ್ಷಗಳಲ್ಲಿ ಹಲವಾರು ಬಾರಿ 108 ಸೇವೆ ವ್ಯತ್ಯಯವಾಗಿ ರೋಗಿಗಳು ಸಮಸ್ಯೆ ಎದುರಿಸಿದ್ದಾರೆ. ಹಲವು ಬಾರಿ ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ 108 ಸೇವೆಯನ್ನು ವ್ಯವಸ್ಥಿತವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.