ADVERTISEMENT

ಅಮೃತ ಯುವ ಕಲೋತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 13:52 IST
Last Updated 29 ಜನವರಿ 2023, 13:52 IST

ಉಡುಪಿ: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಮಾಹೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಜ.30ರಿಂದ ಫೆ.1ರವರೆಗೆ ಮಣಿಪಾಲದಲ್ಲಿ ಯುವ ಸಾಂಸ್ಕೃತಿಕ ಉತ್ಸವ ‘ಅಮೃತ ಯುವ ಕಲೋತ್ಸವ’ ಆಯೋಜಿಸಿದೆ.

ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಡಾ.ಸಂಧ್ಯಾ ಪುರೇಚ ಮಾಹೆ ವಿವಿಯ ಡಾ.ಟಿಎಂಎ.ಪೈ ಸಭಾಂಗಣದಲ್ಲಿ ಜ.30ರಂದು ಸಂಜೆ 5.30ಕ್ಕೆ ಕಲೋತ್ಸವ ಉದ್ಘಾಟಿಸಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮತ್ತು ಮಾಹೆಯ ಯುನೆಸ್ಕೋ ಶಾಂತಿ ಪೀಠದ ಪ್ರೊ.ಎಂ.ಡಿ.ನಲಪತ್ ಭಾಗವಹಿಸಲಿದ್ದಾರೆ.

'ಕಾಮನಬಿಲ್ಲಿನ' ಕಲಾವರ್ಣತೆಯನ್ನು ಪ್ರತಿನಿಧಿಸುವಂತೆ ದೇಶದ ವಿವಿಧ ಭಾಗಗಳ ಕಲಾವಿದರು ವೈವಿಧ್ಯತೆಯನ್ನು ಪ್ರತಿನಿಧಿಸುತ್ತಿದ್ದಾರೆ. ಯುವ ಜನತೆಯೊಂದಿಗೆ ಬಾಂಧವ್ಯ ಸಾಧಿಸುವ ಮಹೋನ್ನತ ಉದ್ದೇಶದೊಂದಿಗೆ ಕಲೋತ್ಸವ ನಡೆಯುತ್ತಿದೆ. ದೇಶದ ಹಲವು ಸ್ಥಳಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಮೊದಲ ಸ್ಥಳ ಮಣಿಪಾಲವಾಗಿದೆ ಎಂದು ಅಕಾಡೆಮಿ ಉಪ ಕಾರ್ಯದರ್ಶಿ ಹೆಲೆನ್ ಆಚಾರ್ಯ ಹಾಗೂ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.

ADVERTISEMENT

ಫೆ.1ರಂದು ಸಂಜೆ 5.30ಕ್ಕೆ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಮಾಹೆಯ ಕುಲಸಚಿವ ಡಾ.ಗಿರಿಧರ್ ಕಿಣಿ, ಮಗಧ ವಿಶ್ವವಿದ್ಯಾಲಯದ ಪ್ರೊ.ಅಶೋಕ್ ಕುಮಾರ್ ಸಿನ್ಹಾ, ಮಾಹೆ ಸಂಸ್ಕೃತಿ ಸಮಿತಿ ಅಧ್ಯಕ್ಷೆ ಡಾ.ಶೋಭಾ ಯು.ಕಾಮತ್ ಉಪಸ್ಥಿತರಿರಲಿದ್ದಾರೆ. ಯೂಟ್ಯೂಬ್‌ನಲ್ಲಿಯೂ ಕಾರ್ಯಕ್ರಮ ನೇರಪ್ರಸಾರ ಇರಲಿದೆ ಎಂದರು.

ಕಲೋತ್ಸವದಲ್ಲಿ ಡೊಳ್ಳು ಕುಣಿತ, ಕಲರಿಪಯಟ್ಟು, ಭರತನಾಟ್ಯ, ವಾದ್ಯ ಸಂಗೀತ, ಯಕ್ಷಗಾನ, ನಾಟಕ, ಸಿದ್ಧಿ ಧಮಾಮಿ ನೃತ್ಯ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ, ಕೂಚುಪುಡಿ, ಕರಡಿ ಮಜಲು ಪ್ರದರ್ಶಗೊಳ್ಳಲಿವೆ. ಡಾ.ಎಚ್.ಎಸ್.ಶಿವಪ್ರಕಾಶ್, ಕೆರೆಮನೆ ಶಿವಾನಂದ ಹೆಗ್ಡೆ, ಡಾ.ಪ್ರಭಾಕರ ಜೋಶಿ, ಡಾ.ವಸಂತ ಭಾರಧ್ವಾಜ್, ಡಾ.ಆರತಿ ಶೆಟ್ಟಿ ಮತ್ತು ಮಧು ನಟರಾಜ್ ಅವರ ಕಲಾವಿಮರ್ಶೆಯ ಕಾರ್ಯಾಗಾರ ನಡೆಯಲಿದೆ.

ಸಂಗೀತ ನಾಟಕ ಅಕಾಡೆಮಿಯು ದೇಶದಾದ್ಯಂತ ಯುವ ಕಲಾವಿದರು ಹಾಗೂ ಅಸಂಖ್ಯಾತ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಉತ್ಸವಗಳ ಸರಣಿಯಾಗಿರುವ ‘ಅಮೃತ ಯುವ ಕಲೋತ್ಸವ’ವನ್ನು ಆಯೋಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.