ADVERTISEMENT

ಉಡುಪಿ: ಇಳುವರಿ ಕುಸಿತ ಭೀತಿಯಲ್ಲಿ ಅಡಿಕೆ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 5:27 IST
Last Updated 8 ಜೂನ್ 2025, 5:27 IST
ಅಡಿಕೆ ತೋಟ 
ಅಡಿಕೆ ತೋಟ    

ಉಡುಪಿ: ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಳೆಗೆ ಈ ಬಾರಿ ಅವಧಿ ಪೂರ್ವದಲ್ಲಿ ನಿರಂತರ ಮಳೆ ಸುರಿದ ಕಾರಣ ಇಳುವರಿಯಲ್ಲಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ.

ಕೆಲ ದಿನಗಳ ಕಾಲ ಭಾರಿ ಮಳೆ ಸುರಿದ ಕಾರಣ ಅಡಿಕೆಯ ಹಿಂಗಾರದಲ್ಲಿ ನೀರು ನಿಂತು ಕೊಳೆತು ಹೋಗಿ, ನಳ್ಳಿ ಉದುರಿ ಹೋಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಕಾರ್ಕಳ ಸೇರಿದಂತೆ ವಿವಿಧ ಭಾಗದಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿದೆ. ಬಯಲು ಪ್ರದೇಶ ಮತ್ತು ಗುಡ್ಡ ಪ್ರದೇಶಗಳಲ್ಲೂ ಅಡಿಕೆ ಕೃಷಿ ಮಾಡಲಾಗುತ್ತಿದೆ. ಇವುಗಳಲ್ಲಿ ಬಯಲು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ ಮೊದಲಾದವುಗಳು ಹೆಚ್ಚಾಗಿ ಕಾಡುತ್ತಿರುತ್ತವೆ.

ADVERTISEMENT

ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವುದರಿಂದ ಮೇ ತಿಂಗಳ ಕೊನೆಯವರೆಗೂ ಅಡಿಕೆ ಮರಗಳಲ್ಲಿ ಹಿಂಗಾರ ಹಿಡಿಯುತ್ತಿದೆ. ಆದರೆ, ಈ ಬಾರಿ ಮೇ ತಿಂಗಳ ಮಧ್ಯಭಾಗದಲ್ಲಿ ಸುಮಾರು 10 ದಿನಗಳವರೆಗೆ ನಿರಂತರವಾಗಿ ಮಳೆ ಸುರಿದ ಕಾರಣ ಹಿಂಗಾರಕ್ಕೆ ಹಾನಿಯಾಗಿದೆ ಎನ್ನುತ್ತಾರೆ ರೈತರು.

ಅಡಿಕೆಗೆ ಕೊಳೆರೋಗ ಬಾರದಿರಲು ಜೂನ್ 15ರ ನಂತರ ಸಾಮಾನ್ಯವಾಗಿ ಬೋರ್ಡೋ ದ್ರಾವಣ ಸಿಂಪಡಿಸಲಾಗುತ್ತಿತ್ತು. ಆದರೆ, ಈ ಬಾರಿ ಜಿಲ್ಲೆಯ ಬಹುತೇಕ ರೈತರು ಈಗಾಗಲೇ ಬೋರ್ಡೋ ದ್ರಾವಣವನ್ನು ಸಿಂಪಡಿಸಿದ್ದಾರೆ.

ಬಯಲು ಪ್ರದೇಶದಲ್ಲಿ ಅಡಿಕೆ ತೋಟ ಹೊಂದಿರುವ ರೈತರು ಮೂರು ನಾಲ್ಕು ಸಲ ಬೋರ್ಡೋ ದ್ರಾವಣ ಸಿಂಪಡಿಸುತ್ತಾರೆ. ಗುಡ್ಡ ಪ್ರದೇಶದಲ್ಲಿ ಅಡಿಕೆ ತೋಟ ಹೊಂದಿರುವವರು ಮಳೆಗಾಲದಲ್ಲಿ ಎರಡು ಬಾರಿ ಸಿಂಪಡಿಸುತ್ತಾರೆ ಎನ್ನುತ್ತಾರೆ ಕಾರ್ಕಳದ ಕಾಂತಾವರದ ರೈತ ಶ್ರೀಧರ್ ಪೂಜಾರಿ.

ಪ್ರತಿವರ್ಷ ನಾವು ಜೂನ್‌ ತಿಂಗಳ ಕೊನೆಗೆ ಅಡಿಕೆ ಗೊನೆಗೆ ಬೋರ್ಡೋ ದ್ರಾವಣ ಸಿಂಪಡಿಸುತ್ತಿದ್ದೆವು. ಈ ಬಾರಿ ಈಗಲೇ ಬೋರ್ಡೋ ದ್ರಾವಣ ಸಿಂಪಡಿಸಲು ಆರಂಭಿಸಿದ್ದೇವೆ. ಈ ಬಾರಿ ಮೇ ತಿಂಗಳಲ್ಲಿ ನಿರಂತರ ಮಳೆ ಸುರಿದ ಕಾರಣ ಕೊಯ್ದ ಅಡಿಕೆಯನ್ನು ಒಣಗಿಸಲು ಕೂಡ ಸಮಸ್ಯೆಯಾಗಿತ್ತು. ಅಡಿಕೆಯು ಸರಿಯಾಗಿ ಒಣಗದಿದ್ದರೆ ಅದರ ಗುಣಮಟ್ಟ ಕುಸಿದು ದರ ಕಡಿಮೆಯಾಗುತ್ತದೆ ಎನ್ನುತ್ತಾರೆ ಅವರು.

ಎಂಟು ದಿವಸ ಒಣಗಿಸಿದ ನಂತರ ಅಡಿಕೆ ಮಳೆಗೆ ಒದ್ದೆಯಾದರೆ ಅದರ ಬಣ್ಣ ಮಸುಕಾಗಿ ಗುಣಮಟ್ಟ ಕುಸಿಯುತ್ತದೆ. ಜೋರು ಮಳೆ ಸುರಿದ ಕಾರಣ ಡ್ರೈಯರ್‌ಗಳಲ್ಲೂ ಅಡಿಕೆ ಒಣಗಿಸಲು ಸಮಸ್ಯೆಯಾಗಿತ್ತು ಎಂದು ಅವರು ತಿಳಿಸಿದರು.

ಈ ಬಾರಿ ಮೇ ತಿಂಗಳ ಕೊನೆಗೆ ಬಿಡುವ ಅಡಿಕೆ ಹಿಂಗಾರ ಮಳೆಯಿಂದಾಗಿ ನಷ್ಟವಾಯಿತು. ಮೇ ತಿಂಗಳಲ್ಲಿ ಬಿಡುವ ಹಿಂಗಾರವು ಬಲಿತು ಜನವರಿ ತಿಂಗಳಲ್ಲಿ ಕೊಯ್ಲಿಗೆ ಬರುತ್ತಿತ್ತು ಎಂದು ಅವರು ಹೇಳಿದರು.

ಜೋರು ಮಳೆ ಬಂದ ಬಳಿಕ ಬಸವನ ಹುಳುಗಳ ಕಾಟದಿಂದಲೂ ಅಡಿಕೆಯ ಹಿಂಗಾರಕ್ಕೆ ಹಾನಿಯಾಗುತ್ತದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ತೇವಾಂಶ ಹೆಚ್ಚಿರುವ ಕಾರಣ ಕೊಳೆರೋಗ ತಡೆಗಾಗಿ ಜೂನ್‌ ಆರಂಭದಲ್ಲೇ ಬೋರ್ಡೋ ದ್ರಾವಣ ಸಿಂಪಡಿಸುತ್ತೇವೆ. ಆದರೆ, ಈ ಸಲ ಹೆಚ್ಚಿನ ಅಡಿಕೆ ಬೆಳೆಗಾರರು ಈಗಾಗಲೇ ಸಿಂಪಡಿಸಿದ್ದಾರೆ ಎಂದು ಕಾರ್ಕಳದ ಈದುವಿನ ಅಡಿಕೆ ಬೆಳೆಗಾರ ಶೈಲೇಶ್ ಮರಾಠೆ ತಿಳಿಸಿದರು.

ಕೆಲವೆಡೆ ಅಡಿಕೆ ಮರಕ್ಕೆ ಹತ್ತುವ ಕಾರ್ಮಿಕರ ಕೊರತೆ ಇರುವುದರಿಂದ ಕೆಲವೊಮ್ಮೆ ಬೋರ್ಡೋ ದ್ರಾವಣ ಸಿಂಪಡಿಸಲು ವಿಳಂಬವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೊಳೆ ರೋಗ ಉಂಟಾಗುವ ಸಾಧ್ಯತೆಯೂ ಇದೆ
ಶ್ರೀಧರ ಪೂಜಾರಿ ಅಡಿಕೆ ಬೆಳೆಗಾರ ಕಾಂತಾವರ
ಅತಿಯಾದ ಬಿಸಿಲಿಗೂ ಅಡಿಕೆಯ ಹಿಂಗಾರ ಉದುರುತ್ತದೆ. ಈ ಬಾರಿ ಮೇ ತಿಂಗಳಲ್ಲೇ ಧಾರಾಕಾರ ಮಳೆ ಸುರಿದ ಕಾರಣ ಹಿಂಗಾರ ಕೊಳೆತು ಹೋಗಿದ್ದು ಇಳುವರಿ ಕುಸಿಯುವ ಆತಂಕ ಕಾಡುತ್ತಿದೆ
ಶೈಲೇಶ್ ಮರಾಠೆ ಅಡಿಕೆ ಬೆಳೆಗಾರ ಈದು ಕಾರ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.