ಉಡುಪಿ: ಭಾರತೀಯ ಜ್ಞಾನ ಪರಂಪರೆಯು ಅತ್ಯಂತ ಆಳವಾಗಿದ್ದು, ಇಡೀ ಜಗತ್ತಿನಲ್ಲಿ ಅದಕ್ಕೆ ಸದೃಶವಾದ ಇನ್ನೊಂದು ಜ್ಞಾನ ಪರಂಪರೆ ಇಲ್ಲ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ವಿಭಾಗ ಮತ್ತು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತೀಯ ಜ್ಞಾನ ಪರಂಪರಾ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಭಾರತೀಯ ಜ್ಞಾನ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಜ್ಞಾನ ಪರಂಪರೆಯಲ್ಲಿ ಆಧ್ಯಾತ್ಮಿಕತೆಗೆ ಹೆಚ್ಚು ಪ್ರಶಸ್ತ್ಯ ನೀಡಲಾಗಿದೆ. ಆದರೆ ಪಾಶ್ಚಾತ್ಯ ಚಿಂತನೆಗಳಲ್ಲಿ ಭೌತಿಕವಾದುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ ಎಂದರು.
ಭೌತಿಕವಾದ ವಿಚಾರಗಳಲ್ಲೇ ಮುಳುಗಿದರೆ ನಮ್ಮ ಜೀವನ ಅಪರಿಪೂರ್ಣವಾಗುತ್ತದೆ. ಜೀವನ ಎಂದರೆ ಕೇವಲ ಜನನ ಮರಣದ ಮಧ್ಯದ ಕಾಲವಲ್ಲ. ನಾವು ಮಾಡುವ ಎಲ್ಲಾ ಕಾರ್ಯಗಳು ಅನಂತ ಕಾಲದಲ್ಲಿ ಫಲ ನೀಡುವಂತಿರಬೇಕು ಎಂದು ಹೇಳಿದರು.
ನಮ್ಮ ಜ್ಞಾನ ಪರಂಪರೆಯನ್ನು ಗುರುತಿಸುವುದು ಮತ್ತು ತಿಳಿದುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯುವ ಜನರಲ್ಲಿ ನಮ್ಮ ಜ್ಞಾನ ಪರಂಪರೆಯ ಬಗ್ಗೆ ಗೌರವ ಮೂಡಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಯಾವುದೇ ದೊಡ್ಡ ಸಾಧನೆ ಮಾಡಲು ಆಧ್ಯಾತ್ಮಿಕತೆ ಅಗತ್ಯ. ಅಧ್ಯಾತ್ಮದಿಂದ ವಿಮುಖರಾದವರಿಗೆ ದೊಡ್ಡ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಎಂ.ಎಸ್. ಮೂಡಿತ್ತಾಯ ಮಾತನಾಡಿ, ಧ್ರುವೀಕರಣ, ಹವಾಮಾನ ಬದಲಾವಣೆ, ಸಾಂಸ್ಕೃತಿಕ ಸಂಘರ್ಷದ ಇಂದಿನ ಪರಿಸ್ಥಿತಿಯಲ್ಲಿ ಜಗತ್ತಿಗೆ ಭಾರತದ ಜ್ಞಾನ ಪರಂಪರೆಯ ಅಗತ್ಯವಿದೆ ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಆಸ್ಥಾನ ವಿದ್ವಾಂಸ ಅಮೆರಿಕ ನಿವಾಸಿ ಕೇಶವ್ ರಾವ್ ತಾಡಿಪತ್ರಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದ ಪ್ರಾಚೀನ ಜ್ಞಾನ ಪರಂಪರೆಯು ಅತ್ಯಂತ ಅನನ್ಯವಾದುದು ಎಂದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ವಿಜ್ಞಾನಿ ಪ್ರಹ್ಲಾದ್ ರಾಮ್ ರಾವ್, ವಿದ್ವಾಂಸ ಗೋಪಿನಾಥಾಚಾರ್ ಗಲಗಲಿ, ಸಂಶೋಧಕ ಶ್ರೀಪತಿ ತಂತ್ರಿ ಉಪಸ್ಥಿತರಿದ್ದರು. ಸುಧೀರ್ ರಾಜ್ ಸ್ವಾಗತಿಸಿದರು.
ಸಂಶೋಧಕ ಶ್ರೀಪತಿ ತಂತ್ರಿಗೆ ಸನ್ಮಾನ 50 ಪ್ರಬಂಧಗಳನ್ನೊಳಗೊಂಡ ಕೃತಿ ಲೋಕಾರ್ಪಣೆ
- ನಮ್ಮನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು. ಇನ್ನೊಬ್ಬರಿಗೆ ಅವಲಂಬಿತರಾಗಬಾರದು ಎಂಬ ಸಂದೇಶವನ್ನು ಶ್ರೀಕೃಷ್ಣ ನೀಡಿದ್ದಾನೆ. ಅದನ್ನೇ ಮುಂದಿಟ್ಟುಕೊಂಡು ಇಂದು ಆತ್ಮ ನಿರ್ಭರ ಭಾರತ ಪರಿಕಲ್ಪನೆಯಲ್ಲಿ ನಾವು ಸಾಗುತ್ತಿದ್ದೇವೆಸುಗುಣೇಂದ್ರ ತೀರ್ಥ ಸ್ವಾಮೀಜಿ ಪರ್ಯಾಯ ಪುತ್ತಿಗೆ ಮಠಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.