ADVERTISEMENT

ಉಡುಪಿ | ಲಂಚ: ಸಹಾಯಕ ಅಭಿಯೋಜಕ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 16:01 IST
Last Updated 26 ಮಾರ್ಚ್ 2025, 16:01 IST
ಗಣಪತಿ ನಾಯ್ಕ್
ಗಣಪತಿ ನಾಯ್ಕ್   

ಉಡುಪಿ: ಮರಳು ಸಾಗಣೆ ವಾಹನದ ಬಿಡುಗಡೆಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸುವ ವಿಷಯವಾಗಿ ಲಂಚ ಪಡೆದ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆ.ಎಂ.ಎಫ್. ಸಿ. ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಗಣಪತಿ ನಾಯ್ಕ್ ಎಂಬುವವರನ್ನು ಬುಧವಾರ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ದೂರುದಾರ ವ್ಯಕ್ತಿಯು ಪರಿಚಯದ ವ್ಯಕ್ತಿಯೊಬ್ಬರ ವಾಹನದಲ್ಲಿ ಮೂಲ್ಕಿಯಿಂದ ಉಡುಪಿಗೆ ಮರಳು ಸಾಗಿಸುತ್ತಿದ್ದರು.  ಉಡುಪಿ ನಗರ ಪೊಲೀಸರು, ಅಕ್ರಮವಾಗಿ ಮರಳು ಸಾಗಿಸುತ್ತಿರುವ ಆರೋಪದಲ್ಲಿ ನಿಟ್ಟೂರು ಬಳಿ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಾಲಿಸಿದ್ದರು.

ವಾಹನದ ಬಿಡುಗಡೆಯ ಮುಂದಿನ ಕ್ರಮಗಳಿಗಾಗಿ ಜಿ.ಪಿ.ಎ. ಹೊಂದಿದ್ದ ದೂರುದಾರ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆ.ಎಂ.ಎಫ್. ಸಿ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವಾಹನ ಬಿಡುಗಡೆಗಾಗಿ ಆಕ್ಷೇಪಣೆ ಸಲ್ಲಿಸುವ ವಿಷಯವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಗಣಪತಿ ನಾಯ್ಕ್ ಅವರು ದೂರದಾರರ ಬಳಿ ₹2 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಈ ವ್ಯಕ್ತಿ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗಣಪತಿ ನಾಯ್ಕ್ ಅವರು ಲಂಚದ ಹಣವನ್ನು ಪಡೆಯುವಾಗ ನ್ಯಾಯಾಲಯದ ಸಂಕೀರ್ಣದಲ್ಲಿರುವ ಎ.ಪಿ.ಪಿ. ಅವರ ಕೊಠಡಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್‌.ಪಿ. ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಪ್ರಭಾರ ಡಿವೈಎಸ್‌ಪಿ ಮಂಜುನಾಥ, ರಾಜೇಂದ್ರ ನಾಯ್ಕ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಗಣಪತಿ ನಾಯ್ಕ್  ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮಾ.27 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಲೋಕಾಯುಕ್ತ ವಿಶೇಷ ಅಭಿಯೋಜಕ ಟಿ.ವಿಜಯ್ ಕುಮಾರ್ ಶೆಟ್ಟಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.