ADVERTISEMENT

ಉಡುಪಿ: ಸಾರ್ವಜನಿಕರ ಕಣ್ಗಾವಲಿಗೆ ಪೊಲೀಸರ ದಿಟ್ಟ ಕ್ರಮ

‘ಶ್ಯೇನ ದೃಷ್ಟಿ’ ಸಿ.ಸಿ.ಟಿ.ವಿ. ಕ್ಯಾಮೆರಾ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆಯಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:27 IST
Last Updated 15 ಆಗಸ್ಟ್ 2025, 5:27 IST
ಉಡುಪಿಯಲ್ಲಿ ಉದ್ಘಾಟನೆಗೊಂಡ ‘ಶ್ಯೇನ ದೃಷ್ಟಿ’ ಸಿ.ಸಿ.ಟಿ.ವಿ. ಕ್ಯಾಮೆರಾ ಕೇಂದ್ರ
ಉಡುಪಿಯಲ್ಲಿ ಉದ್ಘಾಟನೆಗೊಂಡ ‘ಶ್ಯೇನ ದೃಷ್ಟಿ’ ಸಿ.ಸಿ.ಟಿ.ವಿ. ಕ್ಯಾಮೆರಾ ಕೇಂದ್ರ   

ಉಡುಪಿ: ಸಾರ್ವಜನಿಕರ ಹಿತದೃಷ್ಟಿಯಿಂದ ಉಡುಪಿ ನಗರ, ಗ್ರಾಮೀಣ ಪ್ರದೇಶ ಹಾಗೂ ಗಡಿ ಭಾಗಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆಗೆ ಮುಂದಾಗಿರುವ‌ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯ‌ ನಿಜಕ್ಕೂ ಶ್ಲಾಘನೀಯ ಎಂದು ‌ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಉಡುಪಿಯ ಚೇಂಬರ್ ಆಫ್ ಕಾಮರ್ಸ್ ಸಹಕಾರದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಅಳವಡಿಸಲು ಉದ್ದೇಶಿಸಲಾಗಿರುವ ಶ್ಯೇನ ದೃಷ್ಟಿ ಕೇಂದ್ರಕ್ಕೆ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆಯಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆಗಳನ್ನು ತಡೆಗಟ್ಟಬಹುದು ಎಂದರು.

ಜಿಲ್ಲೆಯ 207 ಜಂಕ್ಷನ್‌ಗಳಲ್ಲಿ 621 ನೈಟ್ ವಿಷನ್ ಕ್ಯಾಮೆರಾಗಳನ್ನು ಮತ್ತು 10 ಜಿಲ್ಲಾ ಗಡಿ ರಸ್ತೆಗಳಲ್ಲಿ 20 ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಯೋಜನೆಗೆ ಸುಮಾರು ₹2.50 ಕೋಟಿಯಿಂದ ₹3 ಕೋಟಿ‌‌ ವೆಚ್ಚವಾಗಲಿದೆ. ಅದನ್ನು ಸಂಪೂರ್ಣವಾಗಿ ಚೆಂಬರ್ ಆಫ್ ಕಾಮರ್ಸ್ ನೀಡಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ ಉಪಸ್ಥಿತರಿದ್ದರು.

ಬಳಿಕ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಸಂಜೀವಿನಿ ಯೋಜನೆಯಡಿ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೂತನವಾಗಿ ಆರಂಭಿಸಲಾಗಿರುವ ಅಕ್ಕ ಕೆಫೆಗೆ ಸಚಿವೆ ಚಾಲನೆ ನೀಡಿದರು. ‌

‘ಗೃಹಲಕ್ಷ್ಮಿ ಹಣ ಸಂದಾಯ’

ಗೃಹಲಕ್ಷ್ಮಿ ಯೋಜನೆಯ ಜೂನ್ ಹಾಗೂ ಜುಲೈ ತಿಂಗಳ ಹಣ ಬಿಡುಗಡೆಯಾಗಿರಲಿಲ್ಲ. ಈಗ ಆ ಹಣವನ್ನು ಬಿಡುಗಡೆ ಮಾಡಿ ಉಡುಪಿಗೆ ಬಂದಿದ್ದೇನೆ. ಹಣ ಬಿಡುಗಡೆಯಾಗಿ ಐದಾರು ದಿನಗಳು ಕಳೆದಿವೆ. ಎಲ್ಲರಿಗೂ ಹಣ ತಲುಪಲಿದೆ ಎಂದು ಸಚಿವೆ ಲಕ್ಷಿ ಹೆಬ್ಬಾಳಕರ ಹೇಳಿದರು. ಸುದ್ದಿಗಾರರೊಂದಿಗೆ ಉಡುಪಿಯಲ್ಲಿ ಮಾತನಾಡಿದ ಅವರು ಜೂನ್ ತಿಂಗಳಿನ ಬಾಕಿ ಹಣ ಸಂದಾಯವಾಗಿದೆ. ಜುಲೈ ಹಣ ಕೆಲವೇ ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಬರಲಿದೆ. ಗಣೇಶ ಚತುರ್ಥಿಯ ಒಳಗೆ ಜುಲೈ ತಿಂಗಳ ಹಣ ಬಿಡುಗಡೆ ಮಾಡಬೇಕೆನ್ನುವ ಆಸೆ ಇದೆ ಎಂದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಏಳು ಸಹಚರರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ಸಚಿವೆ ನ್ಯಾಯಾಲಯ ತೀರ್ಪು ಕೊಟ್ಟ ನಂತರ ನಾವೆಲ್ಲರೂ ಅದಕ್ಕೆ ತಲೆಬಾಗಲೇಬೇಕು ಎಂದರು. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರನಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಮನವಿ ಕುರಿತು ಪ್ರತಿಕ್ರಿಯಿಸಿದ ಅವರು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಅಧಿಕಾರವಿದೆ. ಆದರೆ ನಮ್ಮ ಪಕ್ಷ ಹೈಕಮಾಂಡ್ ಇರುವ ಪಕ್ಷ.‌ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದೇ ಅಂತಿಮ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.