ಕಾರ್ಕಳ: ತಾಲ್ಲೂಕಿನ ನಿಟ್ಟೆ ಡಾ. ಎನ್.ಎಸ್.ಎ.ಎಂ. ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ಹೊಸತನದ ಹುಡುಕಾಟದ ಪುಟ್ಟ ಹೆಜ್ಜೆ. ಈ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಮತ್ತು ಯುವಜನರಲ್ಲಿ ದೇಶವನ್ನು ಪುನರ್ ನಿರ್ಮಿಸುವ ಜವಬ್ದಾರಿ ಇದೆ. ಪುನರ್ ನಿರ್ಮಿಸುವುದು ಅಂದರೆ ಸ್ವಾತಂತ್ರ್ಯ ಪೂರ್ವದ ಹೋರಾಟವಲ್ಲ. ಬದಲಿಗೆ ಕರ್ತೃತ್ವ ಶಕ್ತಿಯ ಮೂಲಕ ಮರು ನಿರ್ಮಾಣ ಮಾಡುವುದು. ಇದಕ್ಕೆ ಪೂರಕ ಶಿಕ್ಷಣ ಸಿಗುವಂತಾಗಬೇಕು ಎಂದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರು ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಕಾರ್ಯಪ್ರವತ್ತರಾಗಬೇಕು. ಅಂಕ ಗಳಿಕೆಗೆ ಸೀಮಿತವಾಗದೆ, ಸಮಗ್ರ ಅಭ್ಯುದಯದ ಕಡೆಗೆ ಗಮನಹರಿಸಬೇಕು. ಪರೀಕ್ಷೆಯ ಅಂಕಗಳು ವಿದ್ಯಾರ್ಥಿಯ ಕಾರ್ಯಕ್ಷಮತೆ, ಶ್ರದ್ಧೆ, ಏಕಾಗ್ರತೆ ಪ್ರತಿನಿಧಿಸುತ್ತವೆ ಎಂದರು.
ಅಂಕ ಗಳಿಕೆಯು ವ್ಯಕ್ತಿಯನ್ನು ಅಳೆಯುವ ಅಂತಿಮ ಮಾನದಂಡವಲ್ಲ. ಕೌಶಲ, ದೇಶಭಕ್ತಿ, ಸಾಮಾಜಿಕ ಜವಾಬ್ದಾರಿಗಳ ಕಡೆಗೂ ಗಮನ ಕೊಡಬೇಕು. ಪ್ರತಿಯೊಬ್ಬರೂ ನಮ್ಮ ದೇಶ, ನಮ್ಮ ಸಮಾಜ ಎನ್ನುವ ಅಭಿಮಾನವನ್ನು ರೂಢಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ವೀಣಾ ಕುಮಾರಿ ಬಿ.ಕೆ ಮಾತನಾಡಿ, ವಾಣಿಜ್ಯ ಮತ್ತು ವಿಜ್ಞಾನ ಮಾದರಿಗಳ ಪ್ರದರ್ಶನವು ವಿದ್ಯಾರ್ಥಿಗಳ ಪ್ರಾಯೋಗಿಕ ಕೌಶಲವನ್ನು ಬಿಂಬಿಸುತ್ತದೆ. ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವ ಜೊತೆಗೆ ಹೊಸ ರೀತಿಯ ಆಲೋಚನೆಗೆ ದಿಕ್ಕು ತೋರುತ್ತವೆ ಎಂದರು.
ಉಡುಪಿ ಜಿಲ್ಲೆಯ 20 ಪದವಿ ಪೂರ್ವ ಕಾಲೇಜುಗಳ 1,750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಣೆ ಮಾಡಿದರು. ಐಕ್ಯೂಎಸಿ ಸಂಯೋಜಕ ಪ್ರಕಾಶ್ ಸ್ವಾಗತಿಸಿದರು. ಉಪನ್ಯಾಸಕಿ ನಿಶ್ಮಿತಾ ವಂದಿಸಿದರು. ಉಪನ್ಯಾಸಕಿ ಮೀನಾಕ್ಷಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.