ADVERTISEMENT

ಉಡುಪಿ | ರೇಷ್ಮೆ ಕೃಷಿಗೆ ಜಿಲ್ಲೆಯ ರೈತರ ನಿರಾಸಕ್ತಿ

ಗೂಡು ಮಾರಾಟಕ್ಕೆ ಹಾಸನಕ್ಕೆ ತೆರಳಬೇಕಾದ ಅನಿವಾರ್ಯತೆ

ನವೀನ್‌ಕುಮಾರ್‌ ಜಿ.
Published 4 ಮೇ 2025, 6:21 IST
Last Updated 4 ಮೇ 2025, 6:21 IST
ಹಿಪ್ಪುನೇರಳೆ ತೋಟ
ಹಿಪ್ಪುನೇರಳೆ ತೋಟ   

ಉಡುಪಿ: ಲಾಭದಾಯಕ ಹಾಗೂ ಸರ್ಕಾರದಿಂದ ಸಹಾಯಧನ ಲಭ್ಯವಿದ್ದರೂ ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ರೈತರು ನಿರಾಸಕ್ತಿ ತೋರುತ್ತಿದ್ದಾರೆ.

50ಕ್ಕೂ ಹೆಚ್ಚು ರೇಷ್ಮೆ ಕೃಷಿಕರಿದ್ದ ಜಿಲ್ಲೆಯಲ್ಲಿ ಸದ್ಯ 35 ಮಂದಿ ರೈತರು ಮಾತ್ರ ಈ ಕೃಷಿಯಲ್ಲಿ ಮುಂದುವರಿದಿದ್ದಾರೆ. ಅದರಲ್ಲೂ ಬೆರಳೆಣಿಕೆಯಷ್ಟು ರೈತರಷ್ಟೇ ಈ ಬಾರಿ ಕೃಷಿ ಮಾಡಿದ್ದಾರೆ ಎನ್ನುತ್ತವೆ ರೇಷ್ಮೆ ಇಲಾಖೆಯ ಮೂಲಗಳು.

ಜಿಲ್ಲೆಯಲ್ಲಿ ಖರೀದಿ ಕೇಂದ್ರ ಇಲ್ಲದಿರುವುದೇ ಈ ಕೃಷಿಯಿಂದ ರೈತರು ಹಿಂದೆ ಸರಿಯಲು ಕಾರಣ ಎನ್ನುತ್ತಾರೆ ಬೆಳೆಗಾರರು. ಹಿಂದೆ ಕಾರ್ಕಳದ ನಕ್ರೆಯಲ್ಲಿ ಇಲಾಖೆಯ ವತಿಯಿಂದ ರೇಷ್ಮೆ ಗೂಡು ಖರೀದಿ ಕೇಂದ್ರವಿತ್ತು. ಆದರೆ, ಈಗ ಅದು ಬಾಗಿಲು ಮುಚ್ಚಿದೆ.

ADVERTISEMENT

ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಮಾಡಿದವರು ಗೂಡುಗಳನ್ನು ಮಾರಾಟ ಮಾಡಲು ಹಾಸನಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ. ಸದ್ಯ ಈ ಕೃಷಿಯಲ್ಲಿ ಮುಂದುವರಿದಿರುವ ಕೃಷಿಕರು ಸಾಗಾಟಕ್ಕೆ ವೆಚ್ಚ ಮಾಡಿ, ಹಾಸನದಲ್ಲಿ ಗೂಡುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಕರಾವಳಿಯ ಹವಾಮಾನವು ಕೆಲವೊಮ್ಮ ರೇಷ್ಮೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅತಿಯಾದ ಮಳೆ, ಅತಿಯಾದ ಉಷ್ಣಾಂಶದ ಸಂದರ್ಭದಲ್ಲಿ ಕೃಷಿ ನಾಶವಾಗುತ್ತದೆ ಎನ್ನುತ್ತಾರೆ ಬೆಳೆಗಾರರು.

ಅಡಿಕೆಗೆ ದರ ಏರಿಕೆಯಾದ ಬಳಿಕ ಇಲ್ಲಿನ ರೇಷ್ಮೆ ಬೆಳೆಗಾರರು ಅದರತ್ತ ಚಿತ್ತ ಹರಿಸಿದ್ದಾರೆ. ಈ ಕಾರಣಕ್ಕೆ ರೇಷ್ಮೆ ಕೃಷಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ವಿವರಿಸುತ್ತಾರೆ ಬೆಳೆಗಾರರು.

ರೇಷ್ಮೆ ಬೆಳೆಗಾರರಿಗೆ ಹುಳುಗಳ ಮೊಟ್ಟೆಯನ್ನು ಇಲಾಖೆಯ ಮೂಲಕವೇ ಈಗಲೂ ಪೂರೈಸಲಾಗುತ್ತಿದೆ.

‘ಮೊಟ್ಟೆಯಿಂದ ಹೊರಬರುವ ಹುಳುಗಳನ್ನು 25 ದಿನಗಳ ಕಾಲ ಹಿಪ್ಪು ನೇರಳೆ ಸೊಪ್ಪು ಕೊಟ್ಟು ಅವುಗಳು ಕೋಶ ಅವಸ್ಥೆಗೆ ಬಂದಾಗ ಅವುಗಳನ್ನು ಚಂದ್ರಿಕೆಯಲ್ಲಿ ಬಿಡಬೇಕಾಗುತ್ತದೆ. ಅದರಲ್ಲಿ ಅವುಗಳು ಗೂಡು ಕಟ್ಟುತ್ತವೆ’ ಎನ್ನುತ್ತಾರೆ ಕಾರ್ಕಳದ ಕಾಂತಾವರದ ರೇಷ್ಮೆ ಬೆಳೆಗಾರ ಶ್ರೀಧರ್‌ ಪೂಜಾರಿ.

‘ಮೂವತ್ತೈದು ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿದ್ದೇನೆ. ರೇಷ್ಮೆ ಗೂಡುಗಳಿಗೆ ಈಗ ಕೆ.ಜಿ.ಗೆ ₹600ರಿಂದ ₹700 ಇದೆ. ಆದರೆ ಹಾಸನಕ್ಕೆ ಮಾರಾಟಕ್ಕೆ ಕೊಂಡೊಯ್ಯಲು ಸಾಗಾಟ ವೆಚ್ಚ ತಗಲುತ್ತದೆ. ರೇಷ್ಮೆ ಕೃಷಿಯ ಜೊತೆಗೆ ಅಡಿಕೆ ಕೃಷಿಯನ್ನೂ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕಾರ್ಕಳದ ಕಾಂತಾವರದ ರೇಷ್ಮೆ ಕೃಷಿಕ ಶ್ರೀಧರ್‌ ಪೂಜಾರಿ.

‘ಕೆಲವೊಮ್ಮ ಹವಾಮಾನದಲ್ಲಿ ವ್ಯತ್ಯಾಸವಾದಾಗ ಹುಳುಗಳು ಸಾಯುತ್ತವೆ. ಅವುಗಳಿಗೆ ಮೂರು ತರಹದ ರೋಗಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ನಾಜೂಕಿನಿಂದ ನಿರ್ವಹಣೆ ಮಾಡಬೇಕಾಗುತ್ತೆ. ಹಿಪ್ಪುನೇರಳೆ ತೋಟದ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕಾಗುತ್ತದೆ’ ಎಂದು ಹೇಳುತ್ತಾರೆ ಅವರು.

‘ಜಿಲ್ಲೆಯಲ್ಲಿ ಹೆಬ್ರಿ, ಕಾಂತಾವರ, ರೆಂಜಳ, ಮರ್ಣೆ ಮೊದಲಾದೆಡೆಯ ಕೃಷಿಕರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಕೃಷಿಕರಿಗೆ ಒಂದು ಎಕರೆಗೆ ₹54 ಸಾವಿರ ಸಹಾಯಧನ ನೀಡಲಾಗುತ್ತದೆ’ ಎಂದು ರೇಷ್ಮೆ ಇಲಾಖೆಯ ರೇಷ್ಮೆ ನಿರೀಕ್ಷಕ ಶರತ್‌ ತಿಳಿಸಿದರು.

ರೇಷ್ಮೆ ಗೂಡು
ಶ್ರೀಧರ್‌ ಪೂಜಾರಿ
ಒಂದು ಎಕರೆ ಜಾಗದಲ್ಲಿ ಕೃಷಿ ಮಾಡುವ ರೇಷ್ಮೆ ಬೆಳೆಗಾರರಿಗೆ ₹45 ಸಾವಿರ ಸಹಾಯಧನವನ್ನು ಇಲಾಖೆಯಿಂದ ನೀಡಲಾಗುತ್ತದೆ. ಹುಳುಗಳಿಗೆ ರೋಗ ಬರದಂತೆ ತಡೆಗಟ್ಟುವ ಔಷಧಗಳನ್ನು ಉಚಿತವಾಗಿ ನೀಡುತ್ತೇವೆ
ಶರತ್‌ ರೇಷ್ಮೆ ನಿರೀಕ್ಷಕ
ಅಡಿಕೆ ಕೃಷಿ ಹೈನುಗಾರಿಕೆ ಮೊದಲಾದವುಗಳ ಜೊತೆಗೆ ಮಿಶ್ರ ಕೃಷಿಯಾಗಿ ರೇಷ್ಮೆ ಕೃಷಿಯನ್ನು ಮಾಡಬಹುದು. ಇದು ಕಡಿಮೆ ಅವಧಿಯಲ್ಲಿ ಅಧಿಕ ಲಾಭ ತಂದುಕೊಡುವ ಕೃಷಿಯದರೂ ನಿರ್ವಹಣೆ ಹೆಚ್ಚಿದೆ
ಗುಣಕರ ರೇಷ್ಮೆ ಕೃಷಿಕ ಕಾಂತಾವರ
ಜಿಲ್ಲೆಯಲ್ಲಿ ರೇಷ್ಮೆ ಕೃಷಿಯತ್ತ ಹೆಚ್ಚಿನ ಕೃಷಿಕರು ಒಲವು ತೋರಬೇಕಾದರೆ ಇಲ್ಲಿ ಇಲಾಖೆ ವತಿಯಿಂದ ಖರೀದಿ ಕೇಂದ್ರವನ್ನು ಆರಂಭಿಸುವ ಅಗತ್ಯ ಇದೆ
ಶ್ರೀಧರ ಪೂಜಾರಿ ರೇಷ್ಮೆ ಕೃಷಿಕ ಕಾಂತಾವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.