
ಉಡುಪಿ: ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲಗಳನ್ನು ಕೇವಲ ವೈಯಕ್ತಿಕ ಯಶಸ್ಸಿಗಾಗಿ ಬಳಸದೆ, ಸಾಮಾಜಿಕ ಪ್ರಗತಿಗಾಗಿಯೂ ಬಳಸಬೇಕು ಎಂದು ಗೂಗಲ್ ಕ್ಲೌಡ್‌ನ ಏಷ್ಯಾ ಪೆಸಿಫಿಕ್ ಕಾರ್ಯತಂತ್ರ ಕಾರ್ಯಕ್ರಮಗಳ ಉಪಾಧ್ಯಕ್ಷ ಬಿಕ್ರಂ ಸಿಂಗ್ ಬೇಡಿ ಹೇಳಿದರು.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶನಿವಾರ ನಡೆದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ (ಮಾಹೆ) 33ನೇ ಘಟಿಕೋತ್ಸವದ ಎರಡನೇಯ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಿನ್ನವಾಗಿ ಪ್ರಶ್ನಿಸುವ ಪ್ರಜ್ಞೆ, ಹಳೆಯ ಅತಾರ್ತಿಕ ನಿಲವುಗಳನ್ನು ಪ್ರಶ್ನಿಸುವ ಧೈರ್ಯವನ್ನು ಬೆಳೆಸಿಕೊಳ್ಳುವ ಜೊತೆಗೆ ನಮ್ಮ ಕಲ್ಪನೆಗೂ ಮೀರಿದ ಪರಿಹಾರ ಸೂಚಿಸುವ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ ಎಂ. ಡಿ. ವೆಂಕಟೇಶ್ ಮಾತನಾಡಿ, ಹೊಸ ಆವಿಷ್ಕಾರಗಳು, ಉದ್ಯಮಶೀಲ ಮನೋಭಾವ ಮತ್ತು ಅತ್ಯುನ್ನತ ಗುಣಮಟ್ಟದ ಶಿಕ್ಷಣದ ಆಶಯವನ್ನೊಳಗೊಂಡ ಭವಿಷ್ಯದ ಮಾರ್ಗಸೂಚಿಯನ್ನು ಮಾಹೆ ಹೊಂದಿದೆ ಎಂದರು.
ಮಾಹೆಯು ಸಂಶೋಧನೆಗೆ ಪ್ರಮುಖ್ಯತೆ ನೀಡುವುದರ ಜೊತೆಗೆ, ಎಲ್ಲರನ್ನೂ ಒಳಗೊಳ್ಳುವ, ಸ್ಥಳೀಯ ಸಮುದಾಯಕ್ಕೆ ಬೆಂಬಲಿಸುವ ಮತ್ತು ತಂತ್ರಜ್ಞಾನ ಕೇಂದ್ರಗಳ ಸ್ಥಾಪನೆ ಬಗ್ಗೆಯೂ ಗಮನ ಹರಿಸಿದೆ ಎಂದು ಹೇಳಿದರು.
ಎಐ ಕ್ರಾಂತಿಯಿಂದ ಎದುರಾಗುತ್ತಿರುವ ಸವಾಲು ಮತ್ತು ಅವಕಾಶಗಳ ನಡುವೆ ಜಾಗ್ರತೆಯಿಂದ ಉತ್ತಮ ಮತ್ತು ಪರಿಸರ ಸ್ನೇಹಿ ನಾಳೆಗಳನ್ನು ಕಟ್ಟುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಹಿರಿದಾಗಿದೆ ಎಂದರು.
ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.