ADVERTISEMENT

ಕ್ವಾರಂಟೈನ್‌ ವ್ಯವಸ್ಥೆ: ರಾಜ್ಯಕ್ಕೆ ಉಡುಪಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 21:04 IST
Last Updated 24 ಜೂನ್ 2020, 21:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಉಡುಪಿ: ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ 2,891 ಜನರನ್ನು ಜಿಲ್ಲಾಡಳಿತ ಹೋಂ ಕ್ವಾರಂಟೈನ್‌ನಲ್ಲಿರಿಸಿದ್ದು, ಈ ಪೈಕಿ ಶೇ 50ರಷ್ಟು ಮಂದಿ ಪ್ರತಿದಿನ ಸೆಲ್ಫಿ ಕಳುಹಿಸುತ್ತಿದ್ದಾರೆ. ಈ ಪ್ರಮಾಣ ರಾಜ್ಯದಲ್ಲೇ ಅತಿ ಹೆಚ್ಚು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾಹಿತಿ ನೀಡಿದರು.

ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ಇರಿಸಲು ಗ್ರಾಮ ಹಾಗೂ ವಾರ್ಡ್‌ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿದಿನ ಪಿಡಿಒ, ಗ್ರಾಮ ಲೆಕ್ಕಿಗ ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದಾರೆ.

ಕ್ವಾರಂಟೈನ್‌ನಲ್ಲಿರುವವರ ಮೊಬೈಲ್‌ಗೆ ಜಿಯೊ ಫೆನ್ಸಿಂಗ್ ಆ್ಯಪ್ ಹಾಕಲಾಗಿದ್ದು, ಮನೆಬಿಟ್ಟು ಹೊರಬಂದರೆ, ಕಾಲ್‌ಸೆಂಟರ್‌ಗೆ ಸಂದೇಶ ಬರುತ್ತದೆ. ಇದರ ಆಧಾರದ ಮೇಲೆ ಇದುವರೆಗೂ 500ಕ್ಕೂ ಹೆಚ್ಚು ಮಂದಿಗೆ ಎಚ್ಚರಿಕೆ ನೀಡಲಾಗಿದೆ. ಪದೇ ಪದೇ ನಿಯಮ ಉಲ್ಲಂಘಿಸಿದ
ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಡಿಸಿ ತಿಳಿಸಿದರು.

ADVERTISEMENT

ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳಿಂದ ಹೋಂ ಕ್ವಾರಂಟೈನ್ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ. ಸಮುದಾಯಕ್ಕೆ ಸೋಂಕು ಹರಡುವ ಅಪಾಯವೂ ತಪ್ಪಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.