ADVERTISEMENT

ರಸ್ತೆ ನಿರ್ವಹಣೆ ಮರೆತ ಲೋಕೋಪಯೋಗಿ ಇಲಾಖೆ: ವಿಕಾಸ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 10:50 IST
Last Updated 22 ಜೂನ್ 2022, 10:50 IST
ಕೆ.ವಿಕಾಸ್ ಹೆಗ್ಡೆ.
ಕೆ.ವಿಕಾಸ್ ಹೆಗ್ಡೆ.   

ಕುಂದಾಪುರ: ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದರೂ, ಬಸ್ರೂರನ್ನು ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಮಳೆಗಾಲದ ಪೂರ್ವದಲ್ಲಿ ನಡೆಸಬೇಕಾದ ಅಗತ್ಯ ಕಾಮಗಾರಿಯನ್ನು ನಡೆಸದೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಹಿತವನ್ನು ಕಡೆಗಣಿಸಿದ್ದಾರೆ ಎಂದು ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು ‘ಮಳೆಗಾಲ ಪ್ರಾರಂಭವಾಗುವ ಮೊದಲು ರಾಜ್ಯ ಹೆದ್ದಾರಿಯ ಇಕ್ಕೆಲಗಳ ಗಿಡ ಗಂಟಿಗಳನ್ನು ತೆರವುಗೊಳಿಸುವ, ಚರಂಡಿಯ ಹೂಳೆತ್ತುವ, ಯಾರಾದರೂ ಸಾರ್ವಜನಿಕರು ಲೋಕೋಪಯೋಗಿ ರಸ್ತೆಯ ಚರಂಡಿಯನ್ನು ಅತಿಕ್ರಮಿಸಿದ್ದರೆ ಅದನ್ನು ತೆರವು ಮಾಡುವ, ರಸ್ತೆಗಳಲ್ಲಿ ಗುಂಡಿಗಳಿದ್ದರೆ ಅದನ್ನು ಮುಚ್ಚುವ ಕೆಲಸವನ್ನು ಇಲಾಖೆ ಸಂಪೂರ್ಣವಾಗಿ ಮರೆತಿದೆ. ಪ್ರಥಮ ಮಳೆಗೆ ರಸ್ತೆ ಈಜು ಕೊಳದಂತೆ ಆಗಿದ್ದರೂ, ಲೋಕೋಪಯೋಗಿ ಇಲಾಖೆ ಗಾಢ ನಿದ್ರೆಯಿಂದ ಎಚ್ಚೆತ್ತಿಲ್ಲ. ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಇಂತಹ ಕೆಲಸವನ್ನು ನಿರ್ವಹಿಸಲು ಗ್ಯಾಂಗ್ ಕೂಲಿ ನೌಕರರು, ಅದಕ್ಕೊಬ್ಬ ಗ್ಯಾಂಗ್ ಮ್ಯಾನ್, ರಸ್ತೆ ನಿರ್ವಹಣೆಗೆ ಬೇಕಾದ ಸಲಕರಣೆಗಳು, ರೋಡ್ ರೋಲರ್, ಲಾರಿಗಳು ಎಲ್ಲವೂ ಇದ್ದವು, ಈಗ ಅದ್ಯಾವುದೂ ಇಲ್ಲಾ. ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ರಸ್ತೆಗೆ ಖರ್ಚು ಮಾಡುವ ಸರ್ಕಾರ ಈ ರಸ್ತೆಗಳ ಗುಣಮಟ್ಟ ಹಾಗೂ ನಿರ್ವಹಣೆಗಳ ಬಗ್ಗೆಯೂ ಗಮನಹರಿಸಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT