ADVERTISEMENT

ಉಡುಪಿ | ಮಂಜುಗಡ್ಡೆ ಘಟಕಗಳಿನ್ನು ಸ್ತಬ್ಧ

ಟ್ರಾಲಿಂಗ್‌ ನಿಷೇಧ ಜಾರಿಗೆ ಬರುತ್ತಿದ್ದಂತೆ ಐಸ್‌ ಪ್ಲಾಂಟ್‌ಗಳಲ್ಲಿ ಕಾರ್ಯಾಚರಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 6:43 IST
Last Updated 20 ಜೂನ್ 2025, 6:43 IST
ಮಲ್ಪೆಯ ಮಂಜುಗಡ್ಡೆ ಘಟಕ   
ಮಲ್ಪೆಯ ಮಂಜುಗಡ್ಡೆ ಘಟಕ      

ಉಡುಪಿ: ಮಳೆಗಾಲ ಆರಂಭವಾಗಿ ಟ್ರಾಲಿಂಗ್ ನಿಷೇಧ ಜಾರಿಗೆ ಬರುತ್ತಿದ್ದಂತೆ ಮಲ್ಪೆಯ ಮಂಜುಗಡ್ಡೆ ಘಟಕಗಳು (ಐಸ್ ಪ್ಲಾಂಟ್) ಸ್ತಬ್ಧಗೊಂಡಿವೆ.

ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಬೇಡಿಕೆ ಇಲ್ಲದ ಕಾರಣ ಪ್ರತಿವರ್ಷ ಮಂಜುಗಡ್ಡೆ ಘಟಕಗಳು ಕಾರ್ಯಾಚರಣೆ ನಿಲ್ಲಿಸುತ್ತವೆ. ಈ ಘಟಕಗಳಲ್ಲಿ ದುಡಿಯುವ ಉತ್ತರ ಭಾರತದ ಹೆಚ್ಚಿನ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಾರೆ. ಇನ್ನು ಕೆಲವು ಕಾರ್ಮಿಕರು ಪರ್ಯಾಯ ವೃತ್ತಿಯ ಮೊರೆ ಹೊಗುತ್ತಾರೆ.        

ಕಳೆದ ಮೀನುಗಾರಿಕಾ ಋತುವಿನಲ್ಲಿ ತೀವ್ರ ಮತ್ಸ್ಯಕ್ಷಾಮ ತಲೆದೋರಿದ ಕಾರಣ ದೋಣಿ ಮಾಲೀಕರಿಗೆ ನಷ್ಟ ಉಂಟಾಗಿತ್ತು. ಈ ಕಾರಣಕ್ಕೆ ಮಂಜುಗಡ್ಡೆ ಖರೀದಿಸಿದ ಹಣವನ್ನು ಕೆಲವು ದೋಣಿಯವರು ಇನ್ನೂ ನೀಡಿಲ್ಲ ಎನ್ನುತ್ತಾರೆ ಮಂಜುಗಡ್ಡೆ ಘಟಕಗಳ ಮಾಲೀಕರು.

ADVERTISEMENT

ಮಂಜುಗಡ್ಡೆ ಘಟಕಗಳಲ್ಲಿ ಕೆಲಸ ಮಾಡಲು ಸ್ಥಳೀಯರು ಬರುವುದಿಲ್ಲ. ಈ ಕಾರಣಕ್ಕೆ ಉತ್ತರ ಭಾರತದ ಕಾರ್ಮಿಕರನ್ನೇ ಹೆಚ್ಚಾಗಿ ಕೆಲಸಕ್ಕೆ ನೇಮಿಸಿಕೊಳ್ಳುತ್ತೇವೆ. ಘಟಕಗಳು ಸ್ತಬ್ಧವಾಗುವ ಸಂದರ್ಭದಲ್ಲಿ ಅವರಲ್ಲಿ ಕೆಲವರು ಊರಿಗೆ ಹೋದರೆ ಮರಳಿ ಬರುವುದೇ ಇಲ್ಲ. ಈ ಕಾರಣಕ್ಕೆ ಕೆಲಸ ಇಲ್ಲದಿದ್ದರೂ ಮಳೆಗಾಲದಲ್ಲೂ ಸಂಬಳ ಕೊಟ್ಟು ಕೆಲವು ಕಾರ್ಮಿಕರನ್ನು ಕೆಲಸಕ್ಕಿರಿಸಿಕೊಳ್ಳುವ ಅನಿವಾರ್ಯತೆ ಇದೆ ಎನ್ನುತ್ತಾರೆ ಅವರು.

ಮೀನುಗಾರಿಕಾ ಋತುವಿನಲ್ಲಿ  ಮಂಜುಗಡ್ಡೆ ಕರಗದಂತೆ ಕಾಪಾಡಲು ಘಟಕಗಳನ್ನು ನಿರಂತರ ಚಾಲನೆಯಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಈ ಕಾರಣಕ್ಕೆ ದೊಡ್ಡ ಮೊತ್ತದ ವಿದ್ಯುತ್ ಬಿಲ್‌ ಬರುತ್ತದೆ ಎಂದೂ ಅವರು ಅಳಲು ತೋಡಿಕೊಳ್ಳುತ್ತಾರೆ.

ಜಿಲ್ಲೆಯಲ್ಲಿ ಅಂದಾಜು 90ರಷ್ಟು ಮಂಜುಗಡ್ಡೆ ಘಟಕಗಳಿದ್ದು, ಅದರಲ್ಲಿ 70ರಷ್ಟು ಮಲ್ಪೆಯಲ್ಲಿವೆ. ಕೆಲ ವರ್ಷಗಳ ಹಿಂದೆ ಮಲ್ಪೆಯಲ್ಲಿ ನೂರಕ್ಕೂ ಹೆಚ್ಚು ಐಸ್‌ ಪ್ಲಾಂಟ್‌ಗಳಿದ್ದವು. ನಿರ್ವಹಣೆ ಸಾಧ್ಯವಾಗದೆ ಬಹುತೇಕ ಪ್ಲಾಂಟ್‌ಗಳು ಬಾಗಿಲು ಮುಚ್ಚಿವೆ ಎಂದು ಮಲ್ಪೆಯ ಮಂಜುಗಡ್ಡೆ ಘಟಕವೊಂದರ ಮಾಲೀಕರೊಬ್ಬರು ತಿಳಿಸಿದರು.

ಮಂಜುಗಡ್ಡೆ ಉತ್ಪಾದನಾ ವೆಚ್ಚವೇ ಅಧಿಕವಾಗಿ ಲಾಭ ಕನಿಷ್ಠವಾಗಿದೆ. ಹಲವಾರು ವರ್ಷಗಳಿಂದ ಇದೇ ಉದ್ಯಮ ನಡೆಸುತ್ತಿರುವುದರಿಂದ ಇದರಲ್ಲೇ ಮುಂದುವರಿದಿದ್ದೇವೆ. ಮುಂಬರುವ ಮೀನುಗಾರಿಕಾ ಋತುವಿನಲ್ಲೂ ಮತ್ಸ್ಯಕ್ಷಾಮ ತಲೆದೋರಿದರೆ ನಮ್ಮ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಹೇಳಿದರು.

ಕಾರ್ಮಿಕರ ಕೂಲಿ, ಅಮೋನಿಯಾ ಸಿಲಿಂಡರ್‌ಗಳ ವೆಚ್ಚ ಕೂಡ ನಮಗೆ ಹೊರೆಯಾಗಿ ಪರಿಣಮಿಸಿದೆ. ಮೀನುಗಾರಿಕೆ ಉತ್ತಮವಾಗಿ ನಡೆದರೆ ಮಾತ್ರ ನಮಗೂ ಲಾಭವಾಗುತ್ತದೆ ಎಂದೂ ಅವರು ತಿಳಿಸಿದರು.

ಮೀನುಗಾರಿಕಾ ಋತುವಿನಲ್ಲಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಯಾಂತ್ರೀಕೃತ ದೋಣಿಗಳು ಸಮುದ್ರದಲ್ಲಿ ಹಿಡಿದ ಮೀನುಗಳು ಕೆಡದಂತೆ ಇರಿಸಿಕೊಳ್ಳಲು ಟನ್‌ಗಟ್ಟಲೆ ಮಂಜುಗಡ್ಡೆಯನ್ನು ಹೇರಿಕೊಂಡು ಹೋಗುತ್ತವೆ. ಇದರಿಂದ ಮಂಜುಗಡ್ಡೆ ಉದ್ಯಮಕ್ಕೂ ಲಾಭವಾಗುತ್ತದೆ.     

ಮಲ್ಪೆಯ ಮಂಜುಗಡ್ಡೆ ಘಟಕ   

ಮತ್ಸ್ಯಕ್ಷಾಮ ತಲೆದೋರಿದರೆ ಮಂಜುಗಡ್ಡೆಗೂ ಬೇಡಿಕೆ ಕುಸಿತ ವಿದ್ಯುತ್‌ ಬಿಲ್‌ ಪಾವತಿಗೆ ಪರದಾಟ ಲಾಭವಿಲ್ಲದೆ ಬಾಗಿಲು ಮುಚ್ಚುತ್ತಿರುವ ಘಟಕಗಳು

ಪ್ರತಿವರ್ಷ ಮಳೆಗಾಲದಲ್ಲಿ ಊರಿಗೆ ಹೋಗುತ್ತಿದ್ದೆ. ಈ ವರ್ಷ ಹೋಗಿಲ್ಲ. ಮಂಜುಗಡ್ಡೆ ಉತ್ಪಾದನೆ ನಡೆಯದಿದ್ದರೂ ಘಟಕದಲ್ಲಿ ಸಣ್ಣಪುಟ್ಟ ಕೆಲಸಗಳಿರುತ್ತವೆ
ಸಮರೇಶ್‌ ಮಂಜುಗಡ್ಡೆ ಘಟಕದ ಕಾರ್ಮಿಕ

‘ಸಹಾಯಧನ ಹೆಚ್ಚಿಸಬೇಕು’ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಮಂಜುಗಡ್ಡೆ ಘಟಕಗಳು ಕಾರ್ಯಾಚರಿಸುವುದಿಲ್ಲ. ಈ ವೇಳೆ ಘಟಕಗಳ ನಿರ್ವಹಣಾ ಕೆಲಸಗಳನ್ನು ನಡೆಸುತ್ತೇವೆ ಎನ್ನುತ್ತಾರೆ ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ರಾಜ್ಯ ಘಟಕ ಕಾರ್ಯದರ್ಶಿ ಉದಯ ಕುಮಾರ್‌. ವಿದ್ಯುತ್‌ ಬಿಲ್‌ ಪಾವತಿಯೇ ನಮಗೆ ದುಬಾರಿಯಾಗಿ ಕಾಡುತ್ತಿದೆ. ವಿದ್ಯುತ್‌ ಬಿಲ್‌ಗೆ ಸರ್ಕಾರದಿಂದ ವರ್ಷಕ್ಕೆ ₹ 2 ಲಕ್ಷ ಸಹಾಯ ಧನ ಸಿಗುತ್ತದೆ. ಆದರೆ ಅದು ಯಾವುದಕ್ಕೂ ಸಾಲದು. ಒಂದೊಂದು ಘಟಕಗಳು ಪ್ರತಿ ತಿಂಗಳು ₹ 5 ಲಕ್ಷದಷ್ಟು ವಿದ್ಯುತ್‌ ಬಿಲ್‌ ಪಾವತಿಸುತ್ತವೆ. ಸರ್ಕಾರ ಸಹಾಯಧನ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.