ADVERTISEMENT

ಇಂದಿನಿಂದ 16 ಗ್ರಾ.ಪಂ. ಲಾಕ್‌ಡೌನ್

ಕೋವಿಡ್‌ –19, 3ನೇ ಅಲೆ ಎದುರಿಸಲು ತಯಾರಿ: ಜಿಲ್ಲಾಧಿಕಾರಿ ಜಗದೀಶ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 7:24 IST
Last Updated 9 ಜೂನ್ 2021, 7:24 IST

ಉಡುಪಿ: 50 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವಜಿಲ್ಲೆಯ 16 ಗ್ರಾಮ ಪಂಚಾಯಿತಿಗಳನ್ನು ಇದೇ 9 ರಿಂದ 14 ರವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದರು.

ಜಿಲ್ಲೆಯ 40 ಗ್ರಾಮ ಪಂಚಾಯಿತಿಗಳ ಪೈಕಿ 24 ಪಂಚಾಯಿತಿಗಳಲ್ಲಿ ಲಾಕ್‌ಡೌನ್‌ನಿಂದ ಕೋವಿಡ್ ಸೋಂಕಿತರ ಸಂಖ್ಯೆ 50 ಕ್ಕಿಂತ ಕಡಿಮೆಯಾಗಿದೆ. ಇದೀಗ ಮತ್ತೆ ಉಳಿದ 16 ಪಂಚಾಯಿತಿಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಆಗಿದೆ. ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಮತ್ತೆ 5 ದಿನಗಳ ವರೆಗೆ ಸಂಪೂರ್ಣ ಲಾಕ್‌ಡೌನ್ ಮುಂದುವ ರೆಯಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರತಿನಿತ್ಯ 3,500 ರಷ್ಟು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ವೆಂಟಿಲೇಟರ್ ಮತ್ತು ಹಾಸಿಗೆ ಕೊರತೆಯಿಲ್ಲ. ಮುಂದಿನ ಅಲೆಗೆ ಸಂಪೂರ್ಣ ಸಿದ್ಧತೆ ಈಗಿನಿಂದಲೇ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ADVERTISEMENT

ಮುಂದಿನ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ತೊಂದರೆ ಆಗುವ ಸಂಭವ ಇರುವ ಬಗ್ಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಕ್ಕಳಿಗೆ ಪ್ರತ್ಯೇಕವಾಗಿ ವೆಂಟಿಲೇಟರ್ ವ್ಯವಸ್ಥೆ ಮತ್ತು ಅವರನ್ನು ನೋಡಿಕೊಳ್ಳಲು ಬರುವ ಪೋಷಕರಿಗೆ ಇರಲು ವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು. 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆ ಆಗಿಲ್ಲ ಎಂದು ತಿಳಿಸಿದರು.

ಪ್ರತಿ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರಲ್ಲಿ ಅರಿವು, ಜಾಗೃತಿ ಮೂಡಿಸಿರುವುದರಿಂದ ಮತ್ತು ಗ್ರಾಮ ಪಂಚಾಯಿತಿ ಸಹಕಾರದಿಂದ ಕೋವಿಡ್ ಸಂಖ್ಯೆ ಇಳಿಮುಖವಾಗಿದೆ. ಹೆಚ್ಚು ಸೋಂಕಿನ ಪ್ರಕರಣಗಳಿರುವ ಗ್ರಾಮ ಪಂಚಾಯಿತಿಗಳನ್ನು ಕೋವಿಡ್‌ ಮುಕ್ತ ಮಾಡಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.