ADVERTISEMENT

ನಾರಾಯಣ ಗುರುಗಳ ಬಗ್ಗೆ ಸರ್ಕಾರಕ್ಕೆ ಅಪಾರ ಗೌರವ ಇದೆ: ಸಚಿವ ಅಂಗಾರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 12:20 IST
Last Updated 26 ಜನವರಿ 2022, 12:20 IST
ಅಂಗಾರ, ಸಚಿವ
ಅಂಗಾರ, ಸಚಿವ   

ಉಡುಪಿ: ನಾರಾಯಣ ಗುರುಗಳಿಗೆ ಸಂಬಂಧಿಸಿದ ವಿಚಾರವನ್ನು ರಾಜಕೀಯಗೊಳಿಸಲಾಗಿದ್ದು ರಾಜಕೀಯ ಪ್ರೇರಿತ ಪ್ರತಿಭಟನೆಗೆ ವಿರೋಧವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಹೇಳಿದರು.

ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು ‘ನಾರಾಯಣ ಗುರುಗಳ ಬಗ್ಗೆ ಅಪಾರ ಗೌರವವಿದ್ದು, ಅವರ ಚಿಂತನೆಗಳನ್ನು ಸಾಕಾರಗೊಳಿಸಲು ಒತ್ತು ನೀಡಲಾಗುವುದು ಎಂದರು.

ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಗೊಂದಲ ಹಾಗೂ ಅಸಮಾಧಾನವಿಲ್ಲ. ವಹಿಸಿದ ಕರ್ತವ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ಸರ್ಕಾರದಲ್ಲಿ ಎಲ್ಲರನ್ನೂ ತೃಪ್ತಿಪಡಿಸಲಾಗುವುದಿಲ್ಲ ಎಂದು ಅಂಗಾರ ಹೇಳಿದರು.

ADVERTISEMENT

ಹಿಜಾಬ್ ವಿವಾದ ಸಂಬಂಧ ಪ್ರತಿಕ್ರಿಯಿಸಿದ ಸಚಿವರು ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಇಚ್ಛೆಯಂತೆ ವರ್ತಿಸಲು ಸಾಧ್ಯವಿಲ್ಲ. ಕಾಲೇಜುಗಳಲ್ಲಿ ಸಮಾನತೆ ಜಾರಿಗೊಳಿಸುವ ದೃಷ್ಟಿಯಿಂದ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ವರದಿ ನೀಡಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಸಿದ್ದರಾಮಯ್ಯ ಅವರಿಗೆ ಯಾವ ವಿಚಾರದಲ್ಲೂ ಸ್ಪಷ್ಟತೆ ಇಲ್ಲ. ಸ್ವತಃ ಅವರೇ ಮುಳುಗುವ ಹಂತ ತಲುಪಿರುವುದರಿಂದ ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಟೀಕಿಸುತ್ತಿದ್ದಾರೆ ಎಂದರು.

ಪ್ರತಿ ಸೋಮವಾರ ಬೆಳಿಗ್ಗೆ ಉಡುಪಿಯಲ್ಲಿ ಲಭ್ಯವಿದ್ದು ಸಾರ್ವಜನಿಕರ ಅಹವಾಲು ಆಲಿಸುತ್ತೇನೆ. ಸೋಮವಾರ ಮಧ್ಯಾಹ್ನ ಮಂಗಳೂರು ಮೀನುಗಾರಿಕಾ ಇಲಾಖೆಯ ಕಚೇರಿಯಲ್ಲಿ ಇರುತ್ತೇನೆ, ಮಂಗಳವಾರ ಸುಳ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಲಭ್ಯನಿರುತ್ತೇನೆ ಎಂದು ಅಂಗಾರ ಹೇಳಿದರು.

ಮೀನುಗಾರಿಕಾ ಇಲಾಖೆಯ ಸಚಿವನಾದ ಬಳಿಕ ಇಡೀ ರಾಜ್ಯ ಸುತ್ತಿದ್ದೇನೆ. ಆತ್ಮನಿರ್ಭರ ಯೋಜನೆಯಡಿ ಸ್ವ ಉದ್ಯೋಗ ಸೃಷ್ಟಿಗೆ ಒತ್ತುನೀಡಲು ಮೀನು ಕೃಷಿಗೆ ಸಂಬಂಧಿಸಿದಂತೆ 5 ಕಡೆಗಳಲ್ಲಿ ಕಾರ್ಯಾಗಾರ ಮಾಡಲಾಗಿದೆ. ಮೀನು ತಳಿಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಈ ಸಂದರ್ಭ ಶಾಸಕ ರಘುಪತಿ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.