ಉಡುಪಿ: ಕೈಗಾರಿಕೆಗಳ ಸ್ಥಾಪನೆಗೆ ನಿವೇಶನ ಮಂಜೂರಾಗಿರುವ ಕೈಗಾರಿಕೋದ್ಯಮಿಗಳು ಘಟಕಗಳನ್ನು ಕೂಡಲೇ ಸ್ಥಾಪಿಸಬೇಕು. ಹೆಚ್ಚುವರಿ ಕಾಲಾವಕಾಶ ಕಲ್ಪಿಸುವುದಿಲ್ಲ. ನಿವೇಶನವನ್ನು ಮರುಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಹಾಗೂ ಇತರ ಸಮಿತಿಗಳ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲು ನಿವೇಶನವನ್ನು ನೀಡಿದರೂ ಸಹ ಕೈಗಾರಿಕಾ ಯೋಜನೆಗಳ ಅನುಷ್ಠಾನವನ್ನು ಕಾಲಮಿತಿಯೊಳಗೆ ಪ್ರಾರಂಭಿಸಿರುವುದಿಲ್ಲ. ಘಟಕಗಳ ಸ್ಥಾಪನೆಗೆ ಸಮರ್ಪಕ ಕಾರಣಗಳು ಕಂಡುಬರದೇ ಇದ್ದಲ್ಲಿ ಅಂತಹ ನಿವೇಶನಗಳನ್ನು ಹೊಸದಾಗಿ ಅರ್ಜಿ ಸಲ್ಲಿಸಿರುವ ಇತರರಿಗೆ ಮರು ಹಂಚಿಕೆ ಮಾಡಲು ಕ್ರಮ ವಹಿಸಬೇಕು ಎಂದು ಹೇಳಿದರು.
ಹೆಬ್ರಿ ತಾಲ್ಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ನಿಟ್ಟೆಯಲ್ಲಿ 50.42 ಎಕ್ರೆ ಸೇರಿದಂತೆ ಒಟ್ಟು 165.98 ಎಕ್ರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಹೊಸ ಕೈಗಾರಿಕೆ ಪ್ರದೇಶಗಳ ವಿಸ್ತರಣೆಗೆ ಎಲ್ಲೂರು ಹಾಗೂ ಸಾಂತೂರಿನಲ್ಲಿ 941.98 ಎಕ್ರೆ ಜಮೀನಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದರು.
ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಆದ್ಯತೆಯ ಮೇಲೆ ಕೈಗೊಂಡು ರಸ್ತೆ ಕಾಮಗಾರಿಯನ್ನು ಅಭಿವೃದ್ಧಿಪಡಿಸಬೇಕು. ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆಯ ಕೈಗಾರಿಕಾ ಪ್ರದೇಶದಲ್ಲಿನ ನಿವೇಶನಗಳ ನಮೂನೆ 9/11 ದಾಖಲೆಗಳನ್ನು ಈಗಾಗಲೇ 16 ಘಟಕಗಳಿಗೆ ನೀಡಿದ್ದು, ಬಾಕಿ ಉಳಿದ 8 ಘಟಕಗಳಿಗೆ ಕೂಡಲೇ ನೀಡುವಂತೆ ಸೂಚಿಸಿದರು.
ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಕೈಗಾರಿಕಾ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಮಾಡಲು ಅಳವಡಿಸಿರುವ 100 ಕೆ.ವಿ. ವಿದ್ಯುತ್ ಪರಿವರ್ತಕವನ್ನು 250 ಕೆ.ವಿ.ಗೆ ಹೆಚ್ಚಿಸುವ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಕಾರ್ಯವನ್ನು ಒಂದು ವಾರದೊಳಗೆ ಕೈಗೊಳ್ಳಬೇಕೆಂದು ಮೆಸ್ಕಾಂ ಇಲಾಖೆಯ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.
ಸಾಗರೋತ್ಪನ್ನಗಳ ರಫ್ತಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಸೆಂಟ್ರಲೈಸ್ಡ್ ಸೀ ಫುಡ್ ಪಾರ್ಕ್‌ಗಳ ನಿರ್ಮಾಣ ಹಾಗೂ ಎಕ್ಸ್‌ಪೋರ್ಟ್ ಇನ್‌ಸ್ಪೆಕ್ಷನ್ ಏಜೆನ್ಸಿಗಳನ್ನು ಹೆಚ್ಚುವರಿಯಾಗಿ ನೇಮಿಸಲು ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ಖಾಸಿಯಾ ಪ್ರತಿನಿಧಿ ಹರೀಶ್ ಕುಂದರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿ, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ರಫ್ತು ಉದ್ಯಮವನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ರಫ್ತು ಹೆಚ್ಚಿಸಲು ಕ್ರಮ ವಹಿಸಬೇಕುಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ
‘6274 ಫಲಾನುಭವಿಗಳಿಗೆ ತರಬೇತಿ’
ಕೌಶಲಾಭಿವೃದ್ಧಿ ಇಲಾಖೆಯ ವತಿಯಿಂದ ಪಿ.ಎಂ. ವಿಶ್ವಕರ್ಮ ಯೋಜನೆಯ 6274 ಫಲಾನುಭವಿಗಳಿಗೆ ಈಗಾಗಲೇ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. 3916 ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲು ಸಾಲ ಸೌಲಭ್ಯ ಮಂಜೂರಾಗಿದ್ದು 3573 ಫಲಾನುಭವಿಗಳ ಖಾತೆಗೆ ಸಹಾಯಧನವನ್ನು ಪಾವತಿಸಲಾಗಿದೆ. ಈ ಯೋಜನೆಯಡಿ ಆಯ್ಕೆಯಾದವರಿಗೆ ಕೌಶಲ ತರಬೇತಿಗಳನ್ನು ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ನೀಡುವುದರ ಜೊತೆಗೆ ಬ್ಯಾಂಕ್‌ಗಳು ಆರ್ಥಿಕ ಸೌಲಭ್ಯವನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.