
ಉಡುಪಿ: ಜಿಲ್ಲಾಡಳಿತ ವಿಧಿಸಿದ್ದ ನಿಷೇಧಾಜ್ಞೆಯ ನಡುವೆಯೇ 80 ಬಡಗಬೆಟ್ಟು ಗ್ರಾಮದಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಉಡುಪಿ ಕಂಬಳದ ಕರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ಪೋಸ್ಟರ್ ಅನಾವರಣ ಕಾರ್ಯಕ್ರಮವು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಶನಿವಾರ ಜರುಗಿತು.
ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ ಉಡುಪಿ ಕಂಬಳದ ಶಂಕುಸ್ಥಾಪನೆಯನ್ನು ಮಾರ್ಚ್ 4 ರಂದು ನಡೆಸಲು ಜಿಲ್ಲಾಡಳಿವು ದಿನಾಂಕ ನಿಗದಿಪಡಿಸಿತ್ತು. ಅದರ ನಡುವೆಯೇ ಶಂಕುಸ್ಥಾಪನೆ ನೆರವೇರಿದೆ.
ಕಂಬಳದ ಶಂಕುಸ್ಥಾಪನೆ ಕಾರ್ಯಕ್ರಮದ ಕುರಿತು ಗೊಂದಲ ಉಂಟಾದ ಕಾರಣ 80 ಬಡಗಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿರುವ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 6.30 ಎಕರೆ ಜಮೀನಿನ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ‘80 ಬಡಗಬೆಟ್ಟು ಗ್ರಾಮದಲ್ಲಿ ಜನರ ಒತ್ತಾಯದ ಮೇರೆಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಂಬಳ ನಡೆಸಲು ಮುಂದಾಗಿದ್ದರು. ಕಳೆದೆರಡು ದಿನಗಳಿಂದ ಈ ವಿಚಾರವಾಗಿ ಬೇರೆ ಬೇರೆ ವ್ಯಕ್ತಿಗಳ ರಂಗಪ್ರವೇಶವಾಗಿದೆ’ ಎಂದರು.
‘ಮಾ.4 ರಂದು ಮತ್ತೊಮ್ಮೆ ಶಂಕುಸ್ಥಾಪನೆಗೆ ದಿನಾಂಕ ನಿಗದಿಯಾಗಿದೆ. ಮೊದಲು ಮಾಡಿದ ಶಂಕುಸ್ಥಾಪನೆಯೇ ಅಧಿಕೃತ. ಕಾರ್ಯಕ್ರಮಕ್ಕೆ ಅಡ್ಡಿ ಮಾಡುವವರು ಕಳೆದ ಮೂರು ವರ್ಷದಲ್ಲಿ ತಮ್ಮ ಸರ್ಕಾರ ಕಂಬಳಕ್ಕೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಮೊದಲು ಹೇಳಲಿ’ ಎಂದು ಹೇಳಿದರು.
‘ಜಿಲ್ಲಾಡಳಿತವು 4ನೇ ತಾರೀಕು ಶಂಕುಸ್ಥಾಪನೆ ನೆರವೇರಿಸುವುದಾದರೆ , ಎಷ್ಟು ಅನುದಾನ ನೀಡುತ್ತದೆ ಎಂದು ಮೊದಲು ಹೇಳಲಿ’ ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.
ರಾಜ್ಯ ಕಂಬಳ ಆಸೋಸಿಯೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ‘ಕಂಬಳದ ಜನಪ್ರಿಯತೆ ಹೆಚ್ಚುತ್ತಿದೆ. ಕಂಬಳದಲ್ಲಿ ರಾಜಕೀಯ ಮಾಡುವುದು ಶೋಭೆಯಲ್ಲ. ಕ್ಷೇತ್ರದ ಶಾಸಕರು ಕಂಬಳದ ಅಧ್ಯಕ್ಷರಾಗಿರುತ್ತಾರೆ. ಶಿಷ್ಟಾಚಾರದಂತೆ ಕಂಬಳ ನಡೆಯಲಿ, ಅದಕ್ಕೆ ಚ್ಯುತಿ ತರಬಾರದು’ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ರಾಜೇಶ್ ನಾಯಕ್, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ, ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿಯ ಸದಸ್ಯ ನಂದಳಿಕೆ ಶ್ರೀಕಾಂತ್ ಭಟ್, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮುಖಂಡರಾದ ಹರಿಕೃಷ್ಣ ಬಂಟ್ವಾಳ ರಾಜ್ಯ ಕಂಬಳ ಆಸೋಸಿಯೇಶನ್ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.