ADVERTISEMENT

ಕಾರ್ಕಳದಲ್ಲಿ ಬಸ್ ಅಪಘಾತ: ಐದು ಮಂದಿಯ ಸ್ಥಿತಿ ಗಂಭೀರ

24 ಮಂದಿಗೆ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 13:32 IST
Last Updated 16 ಫೆಬ್ರುವರಿ 2020, 13:32 IST
   

ಉಡುಪಿ: ಕಾರ್ಕಳ ತಾಲ್ಲೂಕಿನ ಅಬ್ಬಾಸ್‌ ಕಟ್ಟಿಂಗೇರಿ ಬಳಿ ಶನಿವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ 24 ಮಂದಿಗೆ ಕಾರ್ಕಳದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಬ್ಬರಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಅಪಘಾತದಲ್ಲಿ ಒಟ್ಟು 9 ಮಂದಿ ಅಸುನೀಗಿದ್ದು, ಆರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತರ ವಿವರ:ಆರ್‌.ಯೋಗೀಂದ್ರ (24) ಮೈಸೂರಿನ ಚಾಮುಂಡಿಬೆಟ್ಟ, ಇ.ವಿನುತಾ (28) ಶ್ರೀರಂಗಪಟ್ಟಣದ ಮೊಗೇರಳ್ಳಿ, ರಕ್ಷಿತಾ (27) ಮೈಸೂರಿನ ಬೋಗಾದಿ, ಅನುಜ್ಞಾ (26) ಮೈಸೂರಿನ ಜೆಎಸ್‌ಎಸ್‌ ಲೇಔಟ್‌, ಬಸವರಾಜ್‌ (24), ಮಹೇಶ್‌ (38) ನಂಜನಗೂಡಿನ ಅಂಬ್ಲೆ, ಪ್ರೀತಮ್‌(21), ರಾಧಾರವಿ (22), ಮಾರುತಿ ಅವರ ವಿಳಾಸ ತಿಳಿದುಬಂದಿಲ್ಲ.

ಐಸಿಯು, ಎಮರ್ಜೆನ್ಸಿಯಲ್ಲಿ ಚಿಕಿತ್ಸೆ:ಯಮುನಾ (ಕೊಳ್ಳೆಗಾಲದ ಉತ್ತರಹಳ್ಳಿ), ಲಕ್ಷ್ಮೀ, ಪ್ರದೀಪ (ಟಿ. ನರಸೀಪುರದ ಭೈರಪುರ), ಆರ್‌.ಕಾವ್ಯ, ಜಿ.ಎನ್‌.ಕಾವ್ಯ (ಮೈಸೂರಿನ ಮಾತಳ್ಳಿ), ಎಂ.ವಿ.ಕಾವ್ಯ (ಕೊಡಗಿನ ಕುಶಾಲನಗರ), ರಘುವೀರ್‌, ಸಿ. ಸತೀಶ್‌, ವಿ.ಜಿ.ರಂಜಿತಾ (ಮೈಸೂರಿನ ಹೆಬ್ಬಾಳ 1ನೇ ಹಂತ) ಐಸಿಯು ಹಾಗೂ ಎಮರ್ಜೆನ್ಸಿ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಕಳ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ:ಮೇಘಶ್ರೀ, ದಿವ್ಯಶ್ರೀ, ವಿದ್ಯಾ, ಸುಷ್ಮಾ, ಪೂರ್ಣಿಮಾ, ಹರ್ಷಿತಾ, ನಂಜುಡಸ್ವಾಮಿ, ದೀಪಿಕಾ, ಅಂಬಿಕಾ, ಮಂಜುಳಾಗೆ ಕಾರ್ಕಳದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ:ಮಾನಸ, ಶ್ವೇತ, ಕೆ.ಎಸ್‌. ಸುಷ್ಮಾ, ನಳಿನಿ, ಸಿ. ಸುನೀಲ್‌, ಮುತ್ತುರಾಜ್‌, ಜಗದೀಶ್‌ ಅವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣ ದಾಖಲು:ಅಪಘಾತ ಸಂಬಂಧ ಡಿಬಿ ಟ್ರಾವೆಲ್ಸ್‌ನ ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಅವಘಡದಲ್ಲಿ ಬಸ್‌ ಚಾಲಕ ಕೂಡ ಮೃತಪಟ್ಟಿದ್ದಾನೆ. ಶೃಂಗೇರಿ ಕಡೆಯಿಂದ ಮಾಳ ಮಾರ್ಗವಾಗಿ ಬಸ್‌ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿರ್ಲಕ್ಷ್ಯ ಕಾರಣ

ಮಾಳ ಭೀಕರ ಬಸ್‌ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಕಾರಣ ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಪಘಾತಕ್ಕೂ ಕೆಲವೇ ಕ್ಷಣಗಳು ಮುನ್ನ ಬಸ್‌ನ ಡಿಕ್ಕಿಯ ಬಾಗಿಲು ತೆರೆದುಕೊಂಡು ಅದರಲ್ಲಿದ್ದ ಅಡುಗೆ ಸಾಮಾಗ್ರಿಗಳು ರಸ್ತೆಗೆ ಬಿದ್ದಿದ್ದವು. ಇದನ್ನು ನೋಡಿ ಬಸ್‌ನೊಳಗಿದ್ದ ಪ್ರಯಾಣಿಕರು ಜೋರಾಗಿ ಕಿರುಚಿದಾಗ, ಚಾಲಕ ಹೆದರಿ ಹಿಂತಿರುಗಿ ನೋಡಿದ್ದಾನೆ. ಅಷ್ಟರಲ್ಲಿ ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಬಂಡೆಗೆ ಬಡಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಪ್ಪಿದ ಘೋರ ದುರಂತ

ಅಪಘಾತಕ್ಕೂ ಕೆಲವೇ ನಿಮಿಷಗಳ ಮುನ್ನ ಅದೇ ಜಾಗದಲ್ಲಿ ಮತ್ತೊಂದು ಬಸ್‌ ಸಾಗಿತ್ತು. ಒಂದುವೇಳೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿದ್ದರೆ ಘೋರ ದುರಂತ ಸಂಭವಿಸುತ್ತಿತ್ತು. ಜತೆಗೆ ಅಪಘಾತವಾದ ಸ್ಥಳದಿಂದ 15 ಮೀಟರ್‌ ದೂರದಲ್ಲಿ ಪ್ರಪಾತವಿದ್ದು, ಬಸ್‌ ಉರುಳಿ ಬಿದ್ದಿದ್ದರೆ ಸಾವು–ನೋವುಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಬಸ್‌ ಬಂಡೆಗೆ ಡಿಕ್ಕಿಯಾಗಿ ಹಲವು ಮೀಟರ್‌ಗಳವರೆಗೆ ಉಜ್ಜಿಕೊಂಡು ಹೋಗಿದೆ. ಇದರಿಂದ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸೇರಿದಂತೆ ಮುಂಭಾಗದಲ್ಲಿ ಕುಳಿತಿದ್ದವರು ಮೃತಪಟ್ಟಿದ್ದಾರೆ. ಬಸ್‌ನೊಳಗೆ ಸಿಲುಕಿದ್ದ ದೇಹಗಳನ್ನು ಕ್ರೇನ್ ತರಿಸಿ ಹೊರಗೆಳೆಯಬೇಕಾಯಿತು ಎಂದು ಸ್ಥಳದಲ್ಲಿದ್ದ ಸಿಬ್ಬಂದಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.