
ಹೆಬ್ರಿ: ತಾಲ್ಲೂಕಿನ ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಅಕ್ರಮ ಸಾಗುವಳಿದಾರರಿಗೆ ತಮ್ಮ ಜಮೀನಿ ಹಕ್ಕುಪತ್ರ ಪಡೆಯಲು ಕಾನೂನು ಸಮಸ್ಯೆಯಾಗಿದ್ದು ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಜಂಟಿ ಸರ್ವೆಯನ್ನು ನಡೆಸಿ ಹಕ್ಕುಪತ್ರ ನೀಡುವಂತೆ ಹೆಬ್ರಿ ತಹಶೀಲ್ದಾರ್ ಅವರಿಗೆ ಗೋಪಾಲ ಅಭಿಮಾನಿ ವೇದಿಕೆ ಮತ್ತು ಹೆಬ್ರಿ ಕಾರ್ಕಳ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ನೇತೃತ್ವದಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.
ಹೆಬ್ರಿ ವಲಯ ಅರಣ್ಯಾಧಿಕಾರಿಗೂ ಮನವಿ ಸಲ್ಲಿಸಲಾಯಿತು. ನಾಡ್ಪಾಲು ಗ್ರಾಮದಲ್ಲಿ 150 ಮತ್ತು ಹೆಬ್ರಿ ಗ್ರಾಮದಲ್ಲಿ 100ಕ್ಕಿಂತ ಹೆಚ್ಚು ಅರ್ಜಿಗಳು ಅಕ್ರಮ– ಸಕ್ರಮಕ್ಕೆ ಸಲ್ಲಿಕೆಯಾಗಿವೆ. 50, 53 ಮತ್ತು 57ರ ಫಲಾನುಭವಿಗಳಿಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿಯ ಜಂಟಿ ಸರ್ವೆ ನಡೆಸಿ ಹಕ್ಕುಪತ್ರ ದೊರೆಯುವಂತೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪರಬಾಧಿತ ಅರಣ್ಯ ಪ್ರದೇಶವಿದ್ದಲ್ಲಿ, ಅದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳಲ್ಲಿ ಗೊಂದಲ ಇದ್ದರೆ ಕಂದಾಯ ಇಲಾಖೆಯಿಂದ ಪ್ರಸ್ತಾವವನ್ನು ನಿಯಮಾನುಸಾರ ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಕಳುಹಿಸಲು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಈಗಾಗಲೇ ನಿರ್ದೇಶನ ನೀಡಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸರ್ವೆ ನಂಬರ್ 126ರಲ್ಲಿ 28,205 ಎಕರೆ, ಹೆಬ್ರಿ ಗ್ರಾಮದ ಸರ್ವೆ ನಂಬರ್ 210ರಲ್ಲಿ 2,238 ಎಕರೆ ಸೇರಿ ಒಟ್ಟು 30,343 ಎಕರೆ ಭೂಮಿ ಇದೆ. ಆದರೆ ಹೆಬ್ರಿ ವಲಯದ ಅರಣ್ಯ ದಾಖಲೆಗಳ ಪ್ರಕಾರ 26,653 ಎಕರೆ ಮಾತ್ರ ಅರಣ್ಯ ಪ್ರದೇಶವಾಗಿದ್ದು ಉಳಿದ 1,550 ಎಕರೆಗೂ ಹೆಚ್ಚಿನ ಕಂದಾಯ ಅನಾಧೀನ ಭೂಮಿ 2 ಸರ್ವೆ ನಂಬರ್‌ಗಳಲ್ಲಿ ಅಡಕವಾಗಿವೆ. ಹೆಬ್ರಿ ಮತ್ತು ನಾಡ್ಪಾಲು ಗ್ರಾಮದ ಸರ್ವೆ ನಂಬರ್‌ಗಳ ಜಮೀನನ್ನು ಜಂಟಿ ಸರ್ವೆ ನಡೆಸಬೇಕು. ತಾಂತ್ರಿಕ ಸಮಸ್ಯೆಯಿಂದ 50- 60 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ತಮ್ಮ ಜಾಗದ ಹಕ್ಕುಪತ್ರಕ್ಕಾಗಿ ಎದುರು ನೋಡುತ್ತಿರುವ ಜನರಿಗೆ ನ್ಯಾಯ ದೊರೆಯಬೇಕು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್ ಕಾರ್ಯದರ್ಶಿ ದೀಪಾ ಭಂಡಾರಿ, ವೇದಿಕೆಯ ಪ್ರಮುಖರಾದ ವಾದಿರಾಜ ಶೆಟ್ಟಿ, ರಾಜೇಶ್ ಭಂಡಾರಿ, ಎಚ್. ಜನಾರ್ದನ್, ಮೋಹನದಾಸ್ ನಾಯಕ್, ಜಗನಾಥ್ ಕುಲಾಲ್, ವೆಂಕಟೇಶ ಶೆಟ್ಟಿ ಸೋಮೇಶ್ವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.