ADVERTISEMENT

ಉಡುಪಿ| ಮಹಿಷಾಸುರ ಮೂಲ ನಿವಾಸಿಗಳ ಅಸ್ಮಿತೆ: ನಟ ಚೇತನ್ ಅಹಿಂಸಾ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:31 IST
Last Updated 22 ಸೆಪ್ಟೆಂಬರ್ 2025, 5:31 IST
ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮ ಜರುಗಿತು
ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮ ಜರುಗಿತು   

ಉಡುಪಿ: ಮಹಿಷಾಸುರ ಚಾತುರ್ವರ್ಣ ಧರ್ಮಕ್ಕೆ ಸೇರಿದವನಲ್ಲ. ಮಹಿಷ ಮತ್ತು ಚಾಮುಂಡಿ ಮುಖಾಮುಖಿಯಾಗಿಲ್ಲ. ಭೌಗೋಳಿಕವಾಗಿ ಮಹಿಷಾಸುರ ಬೌದ್ಧ ಧರ್ಮ ಪ್ರಚಾರಕ ಮತ್ತು ಅಸ್ಮಿತೆಯಾಗಿ ನಮ್ಮ ನಡುವೆ ಕಂಗೊಳಿಸುವ ಇತಿಹಾಸ ಪುರುಷರಾಗಿದ್ದಾರೆ ಎಂದು ನಟ ಚೇತನ್ ಅಹಿಂಸಾ ಹೇಳಿದರು.

ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಭಾನುವಾರ ಆಯೋಜಿಸಿದ್ದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂ ಪುರಾಣಗಳಲ್ಲಿ ಅವಾಸ್ತವಿಕ, ಅಮಾನವೀಯ ಮತ್ತು ಅವೈಜ್ಞಾನಿಕ ಸಂಗತಿಗಳನ್ನು ಮಂಡಿಸಿ ವೈದಿಕಶಾಹಿ, ಮೂಲನಿವಾಸಿಗಳ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾರ್ವಭೌಮತ್ವಗಳನ್ನು ಕಸಿದುಕೊಂಡಿದ್ದಾರೆ ಎಂದ ಅವರು, ಭಾರತದಲ್ಲಿ ಮನುವಾದಿಗಳು ಪುರಾಣ ಮತ್ತು ಮಹಾಕಾವ್ಯವನ್ನೇ ಇತಿಹಾಸವೆಂದು ಬಣ್ಣಿಸಿ ದಾರಿತಪ್ಪಿಸಿದ್ದಾರೆ ಎಂದರು.

ADVERTISEMENT

ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಬಲಿ ಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ಚಿತ್ರಿಸುವ ಮೂಲಕ ಬೌದ್ಧ ಧರ್ಮವನ್ನು ನಾಶಮಾಡುವ ಪಿತೂರಿಯನ್ನು ಮನುವಾದಿಗಳು ಮಾಡಿದ್ದಾರೆ. ಮಹಿಷಾಸುರ ಎಂದರೆ ಪ್ರಾಣವನ್ನು ರಕ್ಷಿಸುವ ಮಹಾರಕ್ಷಕ ಮತ್ತು ಮಹಿಷಮಂಡಲವನ್ನು ಕಟ್ಟಿ ಬೆಳೆಸಿದ ದೊರೆ ಎಂದು ಹೇಳಿದರು.

ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿದರು. ಅಂಬೇಡ್ಕರ್ ಯುವಸೇನೆಯ ಮುಖಂಡಡರಾದ ಹರೀಶ್ ಸಲ್ಯಾನ್, ದಯಾಕರ್ ಮಲ್ಪೆ, ಅರುಣ್ ಸಾಲ್ಯಾನ್, ಭಗವಾನ್ ಮಲ್ಪೆ, ಪ್ರಶಾಂತ್‍ಬಿ.ಎನ್., ರವಿರಾಜ್ ಲಕ್ಷ್ಮಿನಗರ, ನವೀನ್ ಬನ್ನಂಜೆ, ಶಶಿಕಾಂತ್ ನೇಜಾರು, ಸಾಧು ಚಿಟ್ಪಾಡಿ, ವಿನಯ ಕೊಡಕೂರು, ರಾಜೇಶ್ ಮಲ್ಪೆ, ಅಶೋಕ್ ನಿಟ್ಟೂರು, ಸುಕೇಶ್ ಪುತ್ತೂರು, ರಾಜೇಶ್ ಸಂತೆಕಟ್ಟೆ, ಜೀವನ್ ಕೊಡವೂರು, ವಿಘ್ನೇಶ್ ಉಡುಪಿ ಭಾಗವಹಿಸಿದ್ದರು.

ಸತೀಶ್ ಕಪ್ಪೆಟ್ಟು ಸ್ವಾಗತಿಸಿದರು. ಗುಣವಂತ ತೊಟ್ಟಂ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.