ADVERTISEMENT

ಉಡುಪಿ: ಮಲ್ಪೆ ಬೀಚ್‌ ಪ್ರವಾಸಿಗರಿಗೆ ಮುಕ್ತ– ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವೇಶ

ಪ್ರಜಾವಾಣಿ ವಿಶೇಷ
Published 20 ಸೆಪ್ಟೆಂಬರ್ 2022, 13:13 IST
Last Updated 20 ಸೆಪ್ಟೆಂಬರ್ 2022, 13:13 IST
ಮಲ್ಪೆ ಬೀಚ್‌
ಮಲ್ಪೆ ಬೀಚ್‌   

ಉಡುಪಿ: ವಿಶ್ವಪ್ರಸಿದ್ಧ ಮಲ್ಪೆ ಬೀಚ್‌ ಹಾಗೂ ಸೇಂಟ್ ಮೇರಿಸ್ ಐಲ್ಯಾಂಡ್ ಮತ್ತೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸೆ.22ರಿಂದ ಮಲ್ಪೆ ಬೀಚ್‌ ಹಾಗೂ ಸೆ.26ರಿಂದ ಸೇಂಟ್ ಮೇರಿಸ್‌ ದ್ವೀಪ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ.

ಮಳೆಗಾಲ ಹಾಗೂ ಕಡಲು ಪ್ರಕ್ಷುಬ್ಧಗೊಂಡಿದ್ದ ಕಾರಣಕ್ಕೆ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮೇ 15ರಿಂದ ಮಲ್ಪೆ ಬೀಚ್‌ಗೆ ಇಳಿಯಲು ಹಾಗೂ ಸೇಂಟ್‌ ಮೇರಿಸ್‌ ದ್ವೀಪಕ್ಕೆ ತೆರಳಲು ನಿರ್ಬಂಧ ವಿಧಿಸಲಾಗಿತ್ತು. ಬೀಚ್‌ನ 1 ಕಿ.ಮೀ ಉದ್ದದ ತೀರಕ್ಕೆ 6 ಅಡಿ ಎತ್ತರದ ಸುರಕ್ಷತಾ ತಡೆಬೇಲಿ ಹಾಕಲಾಗಿತ್ತು.

ಸಮುದ್ರಕ್ಕಿಳಿಯದಂತೆ ಹಲವೆಡೆ ಮುನ್ನೆಚ್ಚರಿಕೆ ಫಲಕಗಳು ಹಾಗೂ ಅಪಾಯದ ಮುನ್ಸೂಚನೆ ನೀಡುವ ಕೆಂಪು ಧ್ವಜಗಳನ್ನು ಹಾಕಲಾಗಿತ್ತು. ಪ್ರವಾಸಿಗರು ಮಲ್ಪೆ ಬೀಚ್‌ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿತ್ತು. ಜತೆಗೆ ಪ್ರಮುಖ ಆಕರ್ಷಣೆಯಾಗಿದ್ದ ವಾಟರ್ ಸ್ಪೋರ್ಟ್ಸ್‌ಗಳನ್ನು ನಿಲ್ಲಿಸಲಾಗಿತ್ತು.

ADVERTISEMENT

ಸದ್ಯ ಮಳೆ ಕಡಿಮೆಯಾಗಿದ್ದು, ಕಡಲು ಕೂಡ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಹಿಂದಿನಂತೆಯೇ ಪ್ರವಾಸಿಗರು ಬೀಚ್‌ನಲ್ಲಿ ಈಜಾಡಲು, ಮೋಜು ಮಸ್ತಿ ಮಾಡಲು ಹಾಗೂ ಸೇಂಟ್ ಮೇರಿಸ್ ದ್ವೀಪಕ್ಕೆ ತೆರಳಲು ಅವಕಾಶ ನೀಡಲಾಗುತ್ತಿದೆ.

ದ್ವೀಪದ ಸ್ವಚ್ಛತಾ ಕಾರ್ಯ

ಮಳೆಗಾಲದಲ್ಲಿ ಕಡಲಿನ ಒಡಲಿನೊಳಗಿನ ತ್ಯಾಜ್ಯ ದ್ವೀಪಕ್ಕೆ ಬಂದು ಬಂದಿರುವುದರಿಂದ ತ್ಯಾಜ್ಯ ತೆರವು ಕಾರ್ಯ ಬುಧವಾರದಿಂದ ಆರಂಭವಾಗಲಿದೆ. ಪ್ರವೇಶ ದ್ವಾರ ಸೇರಿದಂತೆ ದ್ವೀಪವನ್ನು ಸಂಫೂರ್ಣ ಸ್ವಚ್ಛಗೊಳಿಸಲಾಗುವುದು. ಮಲ್ಪೆ ಬೀಚ್‌ನಲ್ಲಿ ಹಾಕಲಾಗಿದ್ದ ರಕ್ಷಣಾತ್ಮಕ ತಡೆ ಬೇಲಿ ತೆರವುಗೊಳಿಸಿ ತೀರವನ್ನು ಸ್ವಚ್ಛಗೊಳಿಸಲಾಗುವುದು ಎಂದು ಮಲ್ಪೆ ಬೀಚ್‌ ನಿರ್ವಹಣಾ ಸಮಿತಿಯ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದರು.

ಮೋಜು ಮಸ್ತಿ

ಹಿಂದಿನಂತೆಯೇ ವಾಟರ್‌ ಸ್ಪೋರ್ಟ್ಸ್‌ಗಳು ಆರಂಭವಾಗುತ್ತಿದ್ದು ಬನಾನಾ ರೈಡ್‌, ಜೆಟ್‌ ಸ್ಕೀ ರೈಡ್‌, ಕಯಾಕಿಂಗ್, ಬೋಟಿಂಗ್, ಪ್ಯಾರಾ ಸೇಲಿಂಗ್‌, ಒಂಟೆ ಮೇಲಿನ ಸವಾರಿ ಸೇರಿದಂತೆ ಸಾಹಸ ಕ್ರೀಡೆಗಳು ಆರಂಭವಾಗಲಿವೆ. ಪ್ರವಾಸಿಗರ ಸುರಕ್ಷತೆಗೆ ಹಾಗೂ ವಿಭಿನ್ನ ಅನುಭವ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುದೇಶ್ ಶೆಟ್ಟಿ ವಿವರ ನೀಡಿದರು.

ಬೀಚ್‌ಗಿಳಿದಾಗ ನೀರಿನ ಸೆಳೆತಕ್ಕೆ ಸಿಲುಕಿದರೆ ರಕ್ಷಣೆಗೆ ದಾವಿಸಲು ಅಗತ್ಯ ಸಿಬ್ಬಂದಿ ಇದ್ದಾರೆ. ಪ್ರವಾಸಿಗರು ಮೋಜು ಮಸ್ತಿಯಲ್ಲಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬಾರದು. ಅಪಾಯಕಾರಿ ಸ್ಥಳಗಳಲ್ಲಿ, ಆಳವಾದ ಜಾಗದಲ್ಲಿ ಈಜಬಾರದು ಎಂದು ಮನವಿ ಮಾಡುತ್ತಾರೆ ರಕ್ಷಣಾ ಸಿಬ್ಬಂದಿ.

ಪ್ರವಾಸಿಗರ ಪಾಲಿನ ಕೌತುಕ ತಾಣ

ಮಲ್ಪೆ ಬೀಚ್‌ ಉಡುಪಿ ನಗರದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ‌ನಗರದ ಸಿಟಿ ಬಸ್‌ ನಿಲ್ದಾಣದಿಂದ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ, ಹಾಗೂ ನರ್ಮ್‌ ಬಸ್‌ಗಳು ಮಲ್ಪೆ ಬೀಚ್‌ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ಬೀಚ್‌ನಿಂದ ಅನತಿ ದೂರದಲ್ಲಿ ಸೇಂಟ್ ಮೇರಿಸ್ ದ್ವೀಪವಿದ್ದು ಪ್ರವಾಸಿಗರು ಬೋಟ್‌ಗಳಲ್ಲಿ ದ್ವೀಪಕ್ಕೆ ತೆರಳಬಹುದು. ವಿಭಿನ್ನ ಹಾಗೂ ವಿಶಿಷ್ಟ ಭೌಗೋಳಿಕ ಪರಿಸರವನ್ನು ಹೊಂದಿರುವ ದ್ವೀಪ ಪ್ರವಾಸಿಗರ ಪಾಲಿಗೆ ಕೌತುಕದ ತಾಣವಾಗಿದೆ. ಬೀಚ್‌ಗೆ ಹೊಂದಿಕೊಂತೆಯೇ ಸೀ ವಾಕ್ ಇದ್ದು ಪ್ರವಾಸಿಗರಿಗೆ ಸಮುದ್ರದ ನಡುವೆ ನಡೆದು ಸಾಗುವ ವಿಭಿನ್ನ ಅನುಭವ ನೀಡಲಿದೆ. ಸೀವಾಕ್ ಪಕ್ಕದಲ್ಲಿರುವ ಉದ್ಯಾನ ಮಕ್ಕಳ ಮನೋರಂಜನೆಯ ತಾಣವಾಗಿದೆ.

ಮಲ್ಪೆ ರಸ್ತೆ ಅವ್ಯವಸ್ಥೆ

ಮಲ್ಪೆ ಬೀಚ್‌ ಪ್ರವಾಸಿಗರಿಗೆ ಮುಕ್ತವಾಗುತ್ತಿದ್ದರೂ ಬೀಚ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯ ದುರಸ್ತಿ ಕಾರ್ಯ ಮಾತ್ರ ಇನ್ನೂ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆಪದಲ್ಲಿ ಐದಾರು ವರ್ಷಗಳಿಂದ ರಸ್ತೆಯ ಗುಂಡಿಗಳನ್ನು ಮುಚ್ಚಿಲ್ಲ. ಹೆದ್ದಾರಿಯಲ್ಲಿ ರಸ್ತೆಗಿಂತಲೂ ಗುಂಡಿಗಳೇ ಹೆಚ್ಚಾಗಿದ್ದು ಉಡುಪಿಯಿಂದ ಮಲ್ಪೆವರೆಗಿನ ಪ್ರಯಾಣ ವಾಹನ ಸವಾರರ ಪಾಲಿಗೆ ದುಸ್ತರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.