ADVERTISEMENT

ಉಡುಪಿ: ಪ್ರತಿದಿನ ಏರುತ್ತಿರುವ ಬೆಳ್ಳುಳ್ಳಿ ದರ

ಹೊರ ಜಿಲ್ಲೆ, ಹೊರ ರಾಜ್ಯಗಳ ಮೇಲೆ ಸಂಪೂರ್ಣ ಅವಲಂಬನೆ: ಕೆ.ಜಿ.ಗೆ ₹360

ಬಾಲಚಂದ್ರ ಎಚ್.
Published 2 ಫೆಬ್ರುವರಿ 2024, 5:49 IST
Last Updated 2 ಫೆಬ್ರುವರಿ 2024, 5:49 IST
ಬೆಳ್ಳುಳ್ಳಿ
ಬೆಳ್ಳುಳ್ಳಿ   

ಉಡುಪಿ: ಒಂದೂವರೆ ತಿಂಗಳಿನಿಂದ ಗಗನಮುಖಿಯಾಗಿರುವ ಬೆಳ್ಳುಳ್ಳಿ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ₹350ರಿಂದ ₹400ಕ್ಕೆ ತಲುಪಿದೆ. ನಿಧಾನವಾಗಿ ಪ್ರತಿದಿನವೂ ಬೆಳ್ಳುಳ್ಳಿ ದರ ಏರುಗತಿಯಲ್ಲಿ ಸಾಗುತ್ತಿದ್ದು ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿದ್ದು ಮೀನು, ಮಾಂಸಹಾರಿ ಖಾದ್ಯ ಹಾಗೂ ಮಸಾಲೆಗಳ ತಯಾರಿಕೆಗೆ ಬೆಳ್ಳುಳ್ಳಿ ಅಗತ್ಯವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು ಬೆಳ್ಳುಳ್ಳಿ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ಪೆಟ್ಟುಕೊಟ್ಟಿದೆ. ಜಿಲ್ಲೆಯಲ್ಲಿ ಬೆಳ್ಳುಳ್ಳಿ ಉತ್ಪಾದನೆ ಶೂನ್ಯವಾಗಿರುವುದರಿಂದ ಹೊರ ಜಿಲ್ಲೆ, ಹೊರ ರಾಜ್ಯಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದರಿಂದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದರ ಹೆಚ್ಚಾಗಿದೆ.

ಮಾಲ್‌ಗಳಲ್ಲಿ ಹೈಬ್ರೀಡ್ ಬೆಳ್ಳುಳ್ಳಿ ದರ ಕೆ.ಜಿಗೆ ₹340ರಿಂದ ₹360 ಇದ್ದರೆ, ನಾಟಿ ಬೆಳ್ಳುಳ್ಳಿ ₹380 ರಿಂದ ₹400ರವರೆಗೆ ಇದೆ. ಸಾಮಾನ್ಯವಾಗಿ ಅರ್ಧ ಕೆ.ಜಿ, ಒಂದು ಕೆ.ಜಿ ಲೆಕ್ಕದಲ್ಲಿ ಖರೀದಿಸುತ್ತಿದ್ದ ಗ್ರಾಹಕರು 100 ಗ್ರಾಂ, 200 ಗ್ರಾಂ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಮಹಮ್ಮದ್ ರಿಯಾಜ್‌.

ADVERTISEMENT

ರಾಜ್ಯಕ್ಕೆ ಮಧ್ಯಪ್ರದೇಶ, ರಾಜಸ್ತಾನ ಸೇರಿದಂತೆ ಹೊರರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಪೂರೈಕೆಯಾಗುತ್ತಿದ್ದು, ಸದ್ಯ ಬೇಡಿಕೆಯಷ್ಟು ಆಮದಾಗುತ್ತಿಲ್ಲ. ದರ 2 ತಿಂಗಳಿನಿಂದಲೂ ಗರಿಷ್ಠ ಮಟ್ಟದಲ್ಲಿರುವುದರಿಂದ 15 ದಿನಗಳಲ್ಲಿ ಮಾರುಕಟ್ಟೆಗೆ ಹೊಸ ಬೆಳ್ಳುಳ್ಳಿ ಪೂರೈಕೆಯಾಗುವ ನಿರೀಕ್ಷೆ ಇದ್ದು ದರ ಇಳಿಯುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ಅವರು.

ಈರುಳ್ಳಿ ದರ ಸ್ಥಿರವಾಗಿದ್ದು ಕೆ.ಜಿಗೆ ₹30 ರಿಂದ ₹35ಕ್ಕೆ ಮಾರಾಟವಾಗುತ್ತಿದೆ. ಟೊಮೆಟೊ ಕೆ.ಜಿ.ಗೆ ₹30, ಆಲೂಗಡ್ಡೆ ₹35, ಎಲೆಕೋಸು ₹15, ಹೂಕೋಸು ₹25, ಬೆಂಡೆಕಾಯಿ ₹40, ಕ್ಯಾರೆಟ್‌ ₹60, ಬೀನ್ಸ್‌ ₹50, ಬೀಟ್‌ರೂಟ್‌ ₹40, ಕ್ಯಾಪ್ಸಿಕಂ ₹60, ಬದನೆಕಾಯಿ ₹35, ಹೀರೆಕಾಯಿ ₹50, ಪಡವಲಕಾಯಿ ₹35, ಸಾಂಬಾರ್ ಸೌತೆ ₹30, ಸಿಹಿಕುಂಬಳ ₹30 ದರ ಇದೆ.

ಮೂಲಂಗಿ ₹40, ಬೆಂಗಳೂರು ಬದನೆ ₹30, ಚವಳಿಕಾಯಿ ₹50, ಗೆಡ್ಡೆಕೋಸು ₹40, ಕಾಯಿಮೆಣಸು ₹40, ತೆಂಗಿನಕಾಯಿ ₹25, ಗೆಣಸು ₹40, ಪಡವಲಕಾಯಿ ₹30, ಶುಂಠಿ ₹150, ಸುವರ್ಣ ಗೆಡ್ಡೆ ₹75 ದರ ಇದೆ.

ಹಣ್ಣಿನ ದರ: ಕಿತ್ತಳೆ ಬಳಿಕ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬರುತ್ತಿದ್ದು, ಹಸಿರು ದ್ರಾಕ್ಷಿ ಕೆ.ಜಿಗೆ ₹80 ಇದ್ದರೆ, ಕಪ್ಪು ದ್ರಾಕ್ಷಿ ₹120 ಇದೆ. ಕಿತ್ತಳೆ ₹80, ಮೂಸಂಬಿ ₹80, ಕಲ್ಲಂಗಡಿ ₹30, ಸಪೋಟ ₹50, ಅನಾನಸ್‌ ₹50, ಪಪ್ಪಾಯಿ ₹35, ಸೀಬೆ ₹85, ಏಲಕ್ಕಿ ಬಾಳೆ ₹70, ಪಚ್ಚಬಾಳೆ ₹40, ದಾಳಿಂಬೆ ಗಾತ್ರಕ್ಕೆ ಅನುಗುಣವಾಗಿ ₹160ರಿಂದ ₹200ರವರೆಗೆ ದರ ಇದೆ. ಸೇಬು ₹160ರಿಂದ ₹220ರವರೆಗೆ ಮಾರಾಟವಾಗುತ್ತಿದೆ. ಕೊತ್ತಂಬರಿ, ಸಬ್ಬಸ್ಸಿಗೆ, ಮೆಂತ್ಯ, ಕರಿಬೇಬು, ಪಾಲಕ್‌, ಅರಿವೆ, ಪುದೀನ ಸೇರಿದಂತೆ ಹಲವು ಬಗೆಯ ಸೊಪ್ಪು ಕಟ್ಟು ಒಂದಕ್ಕೆ ₹6ರಿಂದ ₹8ರವರೆಗೆ ದರ ಇದೆ.

ತರಕಾರಿ ಮಾರುಕಟ್ಟೆ

ಮಾಂಸ, ಮೊಟ್ಟೆ ದರ

ಚಿಲ್ಲರೆ ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಒಂದಕ್ಕೆ ₹ 7 ರಿಂದ ₹ 7.50 ಇದೆ. ಸಾಮಾನ್ಯವಾಗಿ 6ರ ಆಸುಪಾಸಿನಲ್ಲಿರುತ್ತಿದ್ದ ಮೊಟ್ಟೆ ಕಳೆದವಾರ ₹ 8 ತಲುಪಿತ್ತು. ಸದ್ಯ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಮಾಂಸ (ಚರ್ಮ ರಹಿತ) ಕೆ.ಜಿಗೆ 230 ಚರ್ಚ ಸಹಿತ 210 ಆಡು ಕುರಿ ಮಾಂಸ ಕೆ.ಜಿಗೆ 750 ರಿಂದ 800 ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.