ಉಡುಪಿ: ಹಣಕ್ಕಾಗಿ ತಾಯಿಯನ್ನು ಮಗ ಕತ್ತು ಹಿಸುಕಿ ಕೊಂದಿರುವ ಪ್ರಕರಣ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಣಿಪಾಲದ ತ್ರಿಶಂಕು ನಗರದಲ್ಲಿ ನೆಲೆಸಿದ್ದ, ಮೂಲತಃ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಪದ್ಮಾಬಾಯಿ (45) ಕೊಲೆಯಾದವರು. ಅವರ ಪುತ್ರ ಈಶ ನಾಯಕ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೂ. 18 ರಂದು ಈಶ ನಾಯಕ್, ಪದ್ಮಾಬಾಯಿ ಅವರ ತಂಗಿ ಶಿಲ್ಪ ಅವರಿಗೆ ಮೊಬೈಲ್ ಕರೆ ಮಾಡಿ, ಅಮ್ಮ ಮಲಗಿದಲ್ಲಿಯೇ ಇದ್ದಾರೆ, ಎದ್ದೇಳುತ್ತಿಲ್ಲ ಎಂದಿದ್ದ. ಬಳಿಕ ಪದ್ಮಾಬಾಯಿ ಅವರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಪದ್ಮಾಬಾಯಿ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಅವರ ಕುತ್ತಿಗೆ ಬಳಿ ಕೆಂಪಾಗಿದ್ದು ಕುತ್ತಿಗೆಯನ್ನು ಒತ್ತಿದ ರೀತಿಯಲ್ಲಿ ಕಂಡುಬಂದಿದೆ ಎಂದೂ ಹೇಳಿದ್ದರು.
ಪದ್ಮಾಬಾಯಿ ಸಾವಿನಲ್ಲಿ ಸಂಶಯ ಇರುವುದಾಗಿ ಆರೋಪಿಸಿ ಶಿಲ್ಪ ಅವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪದ್ಮಾಬಾಯಿ ಅವರನ್ನು ಯಾರೊ ಕೊಲೆ ಮಾಡಿರುವುದಾಗಿ ದೃಢಪಡಿಸಿದ್ದರು.
ಕೌಟುಂಬಿಕ ಕಲಹದಿಂದ ಹಾಗೂ ಹಣಕ್ಕಾಗಿ ಪದ್ಮಾಬಾಯಿ ಅವರನ್ನು ಅವರ ಮಗ ಈಶ ನಾಯಕ್‌ನೇ ಕೊಲೆ ಮಾಡಿರುವುದಾಗಿ ನಂತರದ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.