ADVERTISEMENT

ಉಡುಪಿ ನಗರಸಭೆ: ನಗರದ ರಸ್ತೆಗಳ ಹೊಂಡ ಮುಚ್ಚಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:11 IST
Last Updated 1 ಅಕ್ಟೋಬರ್ 2025, 7:11 IST
ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿದರು
ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿದರು   

ಉಡುಪಿ: ನಗರದಾದ್ಯಂತ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ಹೊಂಡ ಮುಚ್ಚಲು ಕ್ರಮ ವಹಿಸಬೇಕು ಎಂದು ನಗರಸಭೆ ಸದಸ್ಯರು ಆಗ್ರಹಿಸಿದರು.

ಇಲ್ಲಿನ ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ರಸ್ತೆ ಅವ್ಯವಸ್ಥೆಯನ್ನು ತೆರೆದಿಟ್ಟರು.

ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿ, ನಗರದ ನಹುತೇಕ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಅದಕ್ಕೆ ಕೋಲ್ಡ್‌ ಟಾರ್‌ ಹಾಕಿದರೆ ನಿಲ್ಲುವುದಿಲ್ಲ ದೊಡ್ಡ ಹೊಂಡಕ್ಕೆ ತಾತ್ಕಾಲಿಕವಾಗಿ ಇಂಟರ್‌ಲಾಕ್‌ ಹಾಕಬೇಕು ಎಂದು ಹೇಳಿದರು.

ADVERTISEMENT

ಅದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ರಮೇಶ್‌ ಕಾಂಚನ್‌, ಪರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ಉತ್ತಮ ವಿಷಯ ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕಾಮಗಾರಿ ನಡೆಸಲು ಮುಂದಾಗಬೇಕು ಎಂದರು.

ಸಂತೆಕಟ್ಟೆ ಕಲ್ಯಾಣಪುರದಲ್ಲಿ ಅಂಡರ್‌ಪಾಸ್‌ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಮಲ್ಪೆ– ಕರಾವಳಿ ಬೈಪಾಸ್‌ ರಾಷ್ಟ್ರೀಯ ಹೆದ್ದಾರಿ ತೀರಾ ಹದಗೆಟ್ಟಿದೆ. ಅಂಬಲಪಾಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಸರ್ವಿಸ್‌ ರಸ್ತೆಯ ಅವ್ಯವಸ್ಥೆಯಿಂದ ಈಗಾಗಲೇ ಜೀವಹಾನಿಯಾಗಿದೆ. ರಸ್ತೆ ದುರಸ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ರಸ್ತೆಗಳ ದುರಸ್ತಿ ಕಾರ್ಯ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಮಳೆಯಿಂದಾಗಿ ಸಾಧ್ಯವಾಗಿಲ್ಲ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಮಲ್ಪೆಯಿಂದ ಕರಾವಳಿ ಬೈಪಾಸ್‌ ವರೆಗಿನ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಶೀಘ್ರ ಆರಂಭವಾಗಲಿದೆ. ನಗರದ ಹದಗೆಟ್ಟಿರುವ ರಸ್ತೆಗಳ ಕುರಿತು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಮಾತ್ರ ಕಾಮಗಾರಿ ಸಾಧ್ಯ ಎಂದರು.

ಸದಸ್ಯ ಸಂತೋಷ್‌ ಮಾತನಾಡಿ, ನಿಟ್ಟೂರಿನ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ (ಎಸ್‌ಟಿಪಿ) ದುರ್ವಾಸನೆಯಿಂದ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಮೀಪ ನಿವಾಸಿಗಳ ಪರಿಸ್ಥಿತಿ ಹೇಳತೀರದಾಗಿದೆ ಎಂದು ಹೇಳಿದರು.

ಶಾಸಕ ಯಶ್‌ಪಾಲ್‌ ಸುವರ್ಣ ಪ್ರತಿಕ್ರಿಯಿಸಿ, ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.

ರಮೇಶ್‌ ಕಾಂಚನ್‌ ಮಾತನಾಡಿ, ಮಣಿಪಾದ ಈಶ್ವರನಗರ ಭಾಗದಲ್ಲೂ ರಾಜಕಾಲುವೆ ಒತ್ತುವರಿ ನಡೆದಿದೆ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಾರಾಹಿ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ಗಳು ಕಳಪೆಯಾಗಿದೆ ಎಂಬ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಯಶ್‌ಪಾಲ್‌ ಸುವರ್ಣ, ಪೈಪ್‌ಲೈನ್‌ನ ಗುಣಮಟ್ಟದ ಬಗ್ಗೆ ನಗರಸಭೆಯ ಎಂಜಿನಿಯರ್‌ಗಳು ಪರಿಶೀಲಿಸಬೇಕು ಎಂದು ಸೂಚಿಸಿದರು.

ಉಪಾಧ್ಯಕ್ಷೆ ರಜನಿ ಹೆಬ್ಬಾರ್‌, ಪೌರಾಯುಕ್ತ ಮಹಾಂತೇಶ ಹಂಗರಗಿ ಭಾಗವಹಿಸಿದ್ದರು.

ನಗರಸಭೆಯ ಹಿಂದಿನ ಪೌರಾಯುಕ್ತರು ಅಕ್ರಮ ಕಟ್ಟಡಗಳ ಬಗ್ಗೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಹಾಗೂ ಕಾನೂನು ಕ್ರಮಕ್ಕೆ ನಿರ್ಣಯ ಅಂಗೀಕರಿಸಬೇಕು
ಯಶ್‌ಪಾಲ್‌ ಸುವರ್ಣ ಶಾಸಕ
ವಾರಾಹಿ ಕುಡಿಯುವ ನೀರಿನ ಯೋಜನೆಯ ಪೈಪ್‌ಗಳಲ್ಲಿ ಸೋರಿಕೆಯಾಗುತ್ತಿದೆ. ಮೀಟರ್‌ ಅಳವಡಿಕೆಗಾಗಿ ಅಲ್ಲಲ್ಲಿ ರಸ್ತೆ ಅಗೆಯಲಾಗುತ್ತಿದೆ
ಸುಮಿತ್ರಾ ನಾಯಕ್‌ ಸದಸ್ಯೆ
ಮಲ್ಪೆ ಬೀಚ್‌ನಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೆ ಕಸ ರಾಶಿ ಬಿದ್ದಿದೆ. ಇದರಿಂದ ಪ್ರವಾಸಿಗರಲ್ಲಿ ಉಡುಪಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ
ಯೋಗೀಶ್‌ ಸಾಲ್ಯಾನ್‌ ಸದಸ್ಯ

ಸಿಬ್ಬಂದಿ ವಿರುದ್ಧ ಸದಸ್ಯರ ಆಕ್ರೋಶ

ಇ– ಖಾತೆ ಜನನ ಮರಣ ಪ್ರಮಾಣಪತ್ರ ವಿಭಾಗದ ಸಿಬ್ಬಂದಿ ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಕೆಲ ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯೆ ಕಲ್ಪನಾ ಸುಧಾಮ ಮಾತನಾಡಿ ಜನರು ಇ –ಖಾತೆ ತಿದ್ದುಪಡಿಗೆ ಬಂದರೆ ಮನವಿ ಕೊಡಿ ಎಂದು ಸಿಬ್ಬಂದಿ ಹೇಳುತ್ತಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಯಶ್‌ಪಾಲ್‌ ಸುವರ್ಣ ಟೈಪಿಂಗ್‌ ತಪ್ಪು ಮಾಡುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೌರಾಯುಕ್ತರಿಗೆ ಸೂಚಿಸಿದರು. ಕಚೇರಿ ಕಡತಗಳು ಕಳೆದುಹೋಗಿವೆ ಎನ್ನುವ ಸಿಬ್ಬಂದಿಯನ್ನು ಅಮಾನತು ಮಾಡಿ ಎಂದು ನಗರಸಭೆ ಅಧ್ಯಕ್ಷರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.