ADVERTISEMENT

ಉಡುಪಿ | ಭತ್ತ ಬೆಳೆಗಾರರಿಗೆ ಮಳೆ ಹೊಡೆತ: ಕಟಾವು ಕೆಲಸ ಸ್ಥಗಿತ; ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 4:48 IST
Last Updated 26 ಅಕ್ಟೋಬರ್ 2025, 4:48 IST
ಪಡುಬಿದ್ರಿ ವ್ಯಾಪ್ತಿಯ ಭತ್ತದ ಗದ್ದೆಯಲ್ಲಿ ಈಚೆಗೆ ಮಳೆ ನೀರು ತುಂಬಿತ್ತು
ಪಡುಬಿದ್ರಿ ವ್ಯಾಪ್ತಿಯ ಭತ್ತದ ಗದ್ದೆಯಲ್ಲಿ ಈಚೆಗೆ ಮಳೆ ನೀರು ತುಂಬಿತ್ತು   

ಉಡುಪಿ: ಜಿಲ್ಲೆಯಲ್ಲಿ ಭತ್ತದ ಕೊಯ್ಲು ಆರಂಭವಾಗಿದ್ದು, ಪ್ರತಿದಿನ ಮಳೆ ಸುರಿಯುತ್ತಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದೆರಡು ದಿನ ಮಳೆ ಬಂದರೂ ನಂತರ ಕಡಿಮೆಯಾಗುತ್ತಿತ್ತು, ಈ ಬಾರಿ ದೀಪಾವಳಿ ಹಬ್ಬ ಮುಗಿದರೂ ಮಳೆ ನಿಲ್ಲದಿರುವುದು ತುಂಬಾ ಸಮಸ್ಯೆ ಉಂಟು ಮಾಡಿದೆ ಎಂದು ರೈತರು ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದೆ. ಅದರ ನಡುವೆ ಕೃಷಿ ಮಾಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ಉಂಟಾಗಿದೆ ಎಂದೂ ಹೇಳುತ್ತಾರೆ.

ADVERTISEMENT

ಕೆಲ ದಿನಗಳ ಹಿಂದೆಯೇ ಜಿಲ್ಲೆಗೆ ಭತ್ತ ಕಟಾವು ಮಾಡುವ ಯಂತ್ರಗಳು ತಮಿಳುನಾಡು, ಗಂಗಾವತಿ, ಹಾವೇರಿ ಮೊದಲೆಡೆಯಿಂದ ಬಂದಿದ್ದವು. ಆರಂಭದಲ್ಲಿ ಯಂತ್ರದಿಂದ ಕಟಾವು ನಡೆಸಿದರೂ ಕಳೆದೊಂದು ವಾರದಿಂದ ಹಗಲು ಹೊತ್ತಿನಲ್ಲೂ ಮಳೆ ಸುರಿಯುತ್ತಿರುವುದರಿಂದ ಕಟಾವು ಕಾರ್ಯವನ್ನು ನಿಲ್ಲಿಸಲಾಗಿದೆ.

ಭತ್ತ ಕಟಾವು ಮಾಡುವ ಯಂತ್ರಗಳು ಕೆಲ ದಿನಗಳಿಂದ ಕೆಲಸವಿಲ್ಲದೆ ನಿಂತಿವೆ. ಹೀಗಾದರೆ ಯಂತ್ರದ ಬಾಡಿಗೆಯೂ ಹೆಚ್ಚಾಗುವ ಭೀತಿ ಕಾಡುತ್ತಿದೆ ಎನ್ನುತ್ತಾರೆ ಭತ್ತ ಬೆಳೆಗಾರ ಸುರೇಶ್‌.

ಜಿಲ್ಲೆಯ ಕೆಲವೆಡೆ ಭತ್ತದ ಪೈರು ಬಾಗಿ ನೆಲಕ್ಕೆ ಬಿದ್ದಿರುವುದರಿಂದ ಯಂತ್ರದ ಮೂಲಕ ಕಟಾವು ಮಾಡುವಾಗ ಭತ್ತ ಉದುರಿ ಗದ್ದೆಗೆ ಬೀಳುತ್ತಿದೆ. ಇದರಿಂದ ಇಳುವರಿ ಕುಸಿತವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

‘ಶೇ 30ರಷ್ಟು ಫಸಲು ನಷ್ಟ’

‘ಈಗಾಗಲೇ ಮಳೆಯಿಂದಾಗಿ ಕಟಾವು ನಡೆದ ಕಡೆ ಶೇ 30 ರಷ್ಟು ಫಸಲು ನಾಶವಾಗಿದೆ. ಇನ್ನೂ ಒಂದು ವಾರ ಮಳೆ ಮುಂದುವರಿದರೆ ಶೇ 50ರಷ್ಟು ಫಸಲು ನಾಶವಾಗುವ ಸಾಧ್ಯತೆ ಇದೆ’ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್‌ ತಿಳಿಸಿದ್ದಾರೆ. ‘ಭತ್ತದ ಕಟಾವು ಆರಂಭಿಸಲು ದೀಪಾವಳಿ ಹಬ್ಬ ಮುಗಿಯಲಿ ಎಂದು ಕಾದಿದ್ದ ಹಲವು ರೈತರಿಗೆ ಮಳೆಯಿಂದಾಗಿ ದಿಕ್ಕು ತೋಚದಂತಾಗಿದೆ. ಭತ್ತದ ಮಿಲ್‌ಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಭತ್ತವನ್ನು ಒಣಗಿಸುವ ಸೌಲಭ್ಯ ಇಲ್ಲದ ಕಾರಣ ಕಾಟಾವು ಮುಗಿದವರಿಂದಲೂ ಮಿಲ್‌ನವರು ಭತ್ತ ಖರೀದಿಸುತ್ತಿಲ್ಲ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.