ADVERTISEMENT

ಉಡುಪಿ | ಪಂಚಾಯಿತಿ ತ್ಯಾಜ್ಯ ತಿನ್ನುತ್ತಿವೆ ‘ಬಂಗಾರ ಹುಳು’

ಕುಂದಾಪುರ ತಾಲ್ಲೂಕಿನ ವಂಡ್ಸೆ ಗ್ರಾ.ಪಂ.ನಲ್ಲಿ ಪ್ರಾಯೋಗಿಕ ಘಟಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:29 IST
Last Updated 19 ಅಕ್ಟೋಬರ್ 2025, 6:29 IST
ವಂಡ್ಸೆ ಗ್ರಾಮ ಪಂಚಾಯಿತಿಯಲ್ಲಿ ಬಂಗಾರ ಹುಳುವಿನಿಂದ ತ್ಯಾಜ್ಯ ವಿಲೇವವಾರಿ ಮಾಡುವ ಘಟಕ
ವಂಡ್ಸೆ ಗ್ರಾಮ ಪಂಚಾಯಿತಿಯಲ್ಲಿ ಬಂಗಾರ ಹುಳುವಿನಿಂದ ತ್ಯಾಜ್ಯ ವಿಲೇವವಾರಿ ಮಾಡುವ ಘಟಕ   

ಉಡುಪಿ: ಮನೆ ಮನೆಗಳಿಂದ ಸಂಗ್ರಹಿಸುವ ಹಸಿ ತ್ಯಾಜ್ಯವನ್ನು ‘ಬಂಗಾರ ಹುಳು’ ಬಳಸಿ ಗೊಬ್ಬರವಾಗಿಸುವ ಪ್ರಾಯೋಗಿಕ ಘಟಕವು ಕುಂದಾಪುರ ತಾಲ್ಲೂಕಿನ ವಂಡ್ಸೆ ಗ್ರಾಮ ಪಂಚಾಯಿತಿ ಅಧೀನದಲ್ಲಿ ಕಾರ್ಯಾಚರಿಸುತ್ತಿದೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್‌ ಅವರ ಮಾರ್ಗದರ್ಶನದಲ್ಲಿ ಕಳೆದ ಒಂಬತ್ತು ತಿಂಗಳಿಂದ ಈ ಪ್ರಯೋಗವು ಯಶಸ್ವಿಯಾಗಿ ನಡೆಯುತ್ತಿದೆ.

ಇಂಗ್ಲಿಷ್‌ನಲ್ಲಿ ಬ್ಲ್ಯಾಕ್‌ ಸೋಲ್ಜರ್‌ ಫ್ಲೈ ಎಂಬುದಾಗಿ ಕರೆಯಲ್ಪಡುವ ಈ ಹುಳುಗಳು ಹಸಿ ತ್ಯಾಜ್ಯವನ್ನು ತಿಂದು ಅದನ್ನು ಗೊಬ್ಬರವಾಗಿ ಪರಿವರ್ತಿಸುತ್ತವೆ.

ADVERTISEMENT

ವಂಡ್ಸೆ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲೇ ಈ ಹುಳುಗಳಿಂದ ಗೊಬ್ಬರ ತಯಾರಿಸುವ ಘಟಕವನ್ನು ಆರಂಭಿಸಲಾಗಿದೆ. ಈ ಘಟಕದಲ್ಲಿ ವಂಡ್ಸೆ ಪಂಚಾಯಿತಿ ಮಾತ್ರವಲ್ಲದೆ ಚಿತ್ತೂರು, ಇಡೂರು ಕುಂಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ, ಕೆರಾಡಿ ಗ್ರಾಮ ಪಂಚಾಯಿತಿಗಳ ತ್ಯಾಜ್ಯವನ್ನೂ ವಿಲೇವಾರಿ ಮಾಡಲಾಗುತ್ತಿದೆ.

‘ರಾಜ್ಯದಲ್ಲಿ ಕೆಲವು ಖಾಸಗಿ ಕಂಪನಿಯವರು ಈ ಪ್ರಯತ್ನ ಮಾಡಿದ್ದರೂ ಗ್ರಾಮ ಪಂಚಾಯಿತಿಯಲ್ಲಿ ಇಂತಹ ಪ್ರಯೋಗ ಮಾಡುತ್ತಿರುವುದು ಇದೇ ಮೊದಲು’ ಎನ್ನುತ್ತಾರೆ ವಂಡ್ಸೆ ಗ್ರಾಮ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ. ಇವರ ನೇತೃತ್ವದಲ್ಲೇ ಬಂಗಾರ ಹುಳುವಿನಿಂದ ಗೊಬ್ಬರ ತಯಾರಿಸುವ ಘಟಕ ಕಾರ್ಯ ನಿರ್ವಹಿಸುತ್ತಿದೆ.

‘ಈ ಘಟಕದಲ್ಲಿ ಪ್ರತಿದಿನ ಎರಡು ಕ್ಷಿಂಟಲ್‌ನಷ್ಟು ಹಸಿ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಅದರಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಪಂಚಾಯಿತಿ ವತಿಯಿಂದ ಕೆ.ಜಿ.ಗೆ ₹12 ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ಉದಯ್‌ ಕುಮಾರ್‌ ಶೆಟ್ಟಿ ತಿಳಿಸಿದರು.

‘ಈ ಹುಳುಗಳನ್ನು ಬಳಸಿ ಹಸಿತ್ಯಾಜ್ಯ ವಿಲೇವಾರಿ ಮಾಡುವ ಪ್ರಕ್ರಿಯೆಯು ಸರಳವಾಗಿದ್ದು, ಅದರಿಂದ ಉತ್ಪತ್ತಿಯಾಗುವ ಗೊಬ್ಬರದಲ್ಲಿ ಸಾರಜನಕ, ರಂಜಕ, ಪೊಟ್ಯಾಷ್‌ನ ಪ್ರಮಾಣವು ಹೆಚ್ಚಿರುತ್ತದೆ ’ ಎಂದೂ ಅವರು ತಿಳಿಸಿದರು.

‘ಬಂಗಾರದ ಹುಳುಗಳು ನಾಲ್ಕು ಹಂತಗಳಲ್ಲಿ ಬೆಳೆಯುತ್ತವೆ. ಮೊದಲನೆಯದಾಗಿ ರೆಕ್ಕೆ ಇರುವ ಪ್ರೌಢ ಕೀಟಗಳು ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ. ಮೂರರಿಂದ ನಾಲ್ಕು ದಿನಗಳಲ್ಲಿ ಮೊಟ್ಟೆಯೊಡೆದು ಹುಳುಗಳು ಹೊರ ಬರುತ್ತವೆ. ನಾಲ್ಕೈದು ದಿನಗಳ ಬಳಿಕ ಹುಳುಗಳನ್ನು ಹಸಿ ತ್ಯಾಜ್ಯವಿರುವ ತೊಟ್ಟಿಗೆ ಹಾಕುತ್ತೇವೆ’ ಎನ್ನುತ್ತಾರೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್‌.

‘12 ರಿಂದ 15 ದಿನಗಳವರೆಗೆ ಹಸಿ ಕಸವನ್ನು ತಿನ್ನುವ ಹುಳುಗಳು ಅನಂತರ ಗೂಡಾಗಿ ಮಾರ್ಪಡುತ್ತವೆ. ಅದರೊಳಗಿನ ಕೀಟಗಳು ಹಾರಿ ಹೋಗುತ್ತವೆ. ಕೀಟಗಳು ಹಾರಿ ಹೋಗದಂತೆ ಸುತ್ತಲೂ ಬಲೆ ಅಳವಡಿಸಿದರೆ ಅವುಗಳು ಮತ್ತೆ ಅದೇ ತೊಟ್ಟಿಯಲ್ಲಿ ಮೊಟ್ಟೆ ಇಡುತ್ತವೆ. ಬಂಗಾರದ ಹುಳು ದರ ಕೆ.ಜಿ.ಗೆ ₹10 ಸಾವಿರ ಬೆಲೆ ಇದೆ’ ಎಂದೂ ಅವರು ವಿವರಿಸಿದರು.

ಬಂಗಾರ ಹುಳು
ಬಂಗಾರದ ಹುಳುಗಳು ಅದರ ದೇಹದ ತೂಕಕ್ಕಿಂತ 10 ಪಟ್ಟು ಹೆಚ್ಚು ಕಸವನ್ನು ತಿನ್ನುತ್ತವೆ. ಹಸಿ ಕಸ ವಿಲೇವಾರಿಗೆ ಇದೊಂದು ಪರಿಸರಕ್ಕೆ ಪೂರಕವಾದ ವಿಧಾನ.
ರೇವಣ್ಣ ರೇವಣ್ಣನವರ್‌ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ
ಬಂಗಾರದ ಹುಳು ಬಳಸಿ ತ್ಯಾಜ್ಯ ವಿಲೇವಾರಿ ಮಾಡುವ ಘಟಕವು ಯಶಸ್ವಿಯಾಗಿ ನಡೆಯುತ್ತಿದೆ. ಮುಂದೆ ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಚಿಂತನೆ ಇದೆ
ಉದಯ್‌ ಕುಮಾರ್‌ ಶೆಟ್ಟಿ ವಂಡ್ಸೆ ಗ್ರಾ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.