ಉಡುಪಿ: ಗಣೇಶ ಚತುರ್ಥಿ ಆಚರಣೆಗೆ ಜಿಲ್ಲೆಯಾದ್ಯಂತ ಭರದ ಸಿದ್ಧತೆ ನಡೆದಿದ್ದು, ಸಾರ್ವಜನಿಕ ಗಣೇಶೋತ್ಸವ ಪೆಂಡಲ್‌ಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಜಿಲ್ಲೆಯಾದ್ಯಂತ ಜಿಎಸ್‌ಬಿ ಸಮಾಜದವರು ಮಂಗಳವಾರ ಗೌರಿ ಹಬ್ಬವನ್ನು ಆಚರಿಸಿದರು. ಉಡುಪಿಯ ವೆಂಕಟರಮಣ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲೂ ಗೌರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿತು.
ಉಡುಪಿ ನಗರ ವ್ಯಾಪ್ತಿಯಲ್ಲಿ ಅಂಬಲಪಾಡಿ, ಕನ್ನರ್ಪಾಡಿ, ಕಡಿಯಾಳಿ, ಅಲೆವೂರು, ಬನ್ನಂಜೆ ಸೇರಿದಂತೆ ಹಲವೆಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ವತಿಯಿಂದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.
ಈ ಬಾರಿಯೂ ಕೆಲವು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಲ್ಲಿ ಮಂಗಳವಾರವೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಿದೆ. ಕನ್ನರ್ಪಾಡಿ– ಕಿನ್ನಿಮುಲ್ಕಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸೋಮವಾರದಿಂದಲೇ ಗಣೇಶೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿವೆ.
ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ವೇದಿಕೆಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಹೆಚ್ಚಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಬುಧವಾರ ಮೂರ್ತಿ ಪ್ರತಿಷ್ಠಾಪನೆ ಮಾಡಲಿವೆ.
ಗಣೇಶೋತ್ಸವ ಪೆಂಡಲ್‌ಗಳಿಗೆ ವಿದ್ಯುತ್‌ದೀಪ, ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಪರಿಸರಸ್ನೇಹಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲು ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸದಿರಲು ಜಿಲ್ಲಾಡಳಿತವು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮೂರ್ತಿಯನ್ನು ವಿಸರ್ಜಿಸುವಾಗ ಅದರ ಜೊತೆಗೆ ಹೂವಿನ ಮಾಲೆಗಳನ್ನು, ಪ್ಲಾಸ್ಟಿಕ್ ಅಲಂಕಾರದ ವಸ್ತುಗಳನ್ನೂ ನೀರಿಗೆ ಹಾಕುವುದರಿಂದ ನೀರು ಕಲುಷಿತಗೊಳ್ಳುವುದರಿಂದ ಆ ಕುರಿತೂ ಎಚ್ಚರಿಕೆ ವಹಿಸುವಂತೆ ಗಣೇಶೋತ್ಸವ ಸಮಿತಿಯವರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಕೂಡ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮಂಗಳವಾರ ದಿನವಿಡೀ ಬಿಟ್ಟು ಬಿಟ್ಟು ಮಳೆ ಸುರಿದಿರುವುದು ಗಣೇಶೋತ್ಸವದ ಸಿದ್ಧತೆಗಳ ಮೇಲೆ ಪರಿಣಾಮ ಬೀರಿತ್ತು.
‘ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ’:
ನಗರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆದಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಗಣೇಶೋತ್ಸವ ಪೆಂಡಲ್ ಪರಿಸರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. ನಗರಸಭೆಯು ಮೂರು ಕಡೆಗಳಲ್ಲಿ ಮೂರ್ತಿ ವಿಸರ್ಜನೆಗೆ ಜಾಗ ಗುರುತಿಸಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಕೆರೆ ಬಾವಿಗಳಿಗೆ ಮೂರ್ತಿ ವಿಸರ್ಜನೆ ಮಾಡಬಹುದು. ಉಡುಪಿಯಲ್ಲಿ ಪಿಒಪಿ ಗಣಪತಿ ಬಳಕೆ ಇಲ್ಲ ಎಂದು ಅವರು ಹೇಳಿದರು. ಗಣೇಶೋತ್ಸವ ಪೆಂಡಲ್‌ಗಳ ಪಕ್ಕ ಹಸಿ ಮತ್ತು ಒಣ ಕಸದ ಬುಟ್ಟಿಯನ್ನು ಇಡುವಂತೆ ಸಮಿತಿಯವರಿಗೆ ಸೂಚಿಸಲಾಗಿದೆ. ನಗರಸಭೆಯ ಆರೋಗ್ಯ ಅಧಿಕಾರಿಗಳೂ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಸಂಗ್ರಹವಾಗುವ ಕಸವನ್ನು ನಗರಸಭೆಯ ವಾಹನಗಳಲ್ಲಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಮದ್ಯ ಮಾರಾಟ ನಿಷೇಧ:
ಜಿಲ್ಲೆಯಾದ್ಯಂತ ಗಣೇಶ ಹಬ್ಬ ಆಚರಣೆಯ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಆಗಸ್ಟ್ 27ರಂದು ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಹಾಗೂ ಉಡುಪಿ ನಗರ ವ್ಯಾಪ್ತಿಯಲ್ಲಿ ಆಗಸ್ಟ್ 29 ಮತ್ತು 31ರಂದು ಮಧ್ಯಾಹ್ನ 2ರಿಂದ ರಾತ್ರಿ 12ರವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಮತ್ತು ರೆಸ್ಟೋರೆಂಟ್ ವೈನ್ ಶಾಪ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.