ಪಡುಬಿದ್ರಿ: ಪಲಿಮಾರು ಗ್ರಾ.ಪಂ. ವ್ಯಾಪ್ತಿಯ ಅವರಾಲು–ನಡಿಯಾರ್ ರಸ್ತೆ ಮಳೆಗಾಲ ಆರಂಭವಾಗುತ್ತಿದ್ದಂತೆ ಉಪಯೋಗವಿಲ್ಲದಂತೆ ಆಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ,
ಈ ರಸ್ತೆ ಪಡುಬಿದ್ರಿ, ಹೆಜಮಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಇಲ್ಲಿನ ಜನರು ಇದನ್ನೇ ಅವಲಂಬಿಸಿದ್ದಾರೆ. ಈ ಹಿಂದೆ ಶಾಲಾ ವಾಹನಗಳು ಈ ಮಾರ್ಗದ ಮೂಲಕವೇ ಅವರಾಲು ಮಟ್ಟು ನಡಿಯಾರ್ ಭಾಗಕ್ಕೆ ಬರುತ್ತಿದ್ದವು. ಆದರೆ, ಈಗ ಹದೆಗೆಟ್ಟ ರಸ್ತೆಯನ್ನು ನೋಡಿ ವಾಹನ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯ ದುಃಸ್ಥಿತಿ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ.
ಇದರಿಂದ ಹಲವರು ಕೈ–ಕಾಲು ಮುರಿತಕ್ಕೆ ಒಳಗಾಗಿದ್ದರೆ, ಇನ್ನೊಬ್ಬರು ಈ ರಸ್ತೆಯಿಂದ ತಪ್ಪಿಸಲು ನಡಿಯಾರ್ ಸೇತುವೆಯ ಮುಖಾಂತರ ದ್ವಿಚಕ್ರ ವಾಹನವನ್ನು ಕೊಂಡೊಯ್ಯುವ ಪ್ರಯತ್ನ ಮಾಡಿ, ವಾಹನದ ಸಮೇತ ನದಿಗೆ ಬಿದ್ದಿದ್ದರು. ಆದ್ದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸಬೇಕು.
-ನಡಿಯಾರು, ಗ್ರಾಮಸ್ಥರು.
ರಸ್ತೆಯಲ್ಲೇ ವಾಹನ ಪಾರ್ಕಿಂಗ್
ಉಡುಪಿ: ನಗರದ ವಿದ್ಯೋದಯ ಶಾಲೆಯ ಬಳಿ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ನಡುರಸ್ತೆಯಲ್ಲೇ ನಡೆದಾಡಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟವರು ಗಮನ ಹರಿಸಬೇಕು.
–ಸ್ಥಳೀಯರು
ಈಜು ಕೊಳದಂತಾದ ರಸ್ತೆ
ಉಡುಪಿ: ಮಲ್ಪೆ – ಪಂದುಬೆಟ್ಟು ಮುಖ್ಯ ರಸ್ತೆಯ ಬೃಹದಾಕಾರದ ಹೊಂಡಗಳಲ್ಲಿ ಮಳೆ ನೀರು ಸಂಗ್ರಹವಾಗಿ ಈಜು ಕೊಳದಂತಾಗಿದ್ದು ವಾಹನ ಸವಾರರಿಗೆ ಸಂಕಷ್ಟ ಉಂಟಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು ರಸ್ತೆ ಹದಗೆಟ್ಟು ಹಲವು ತಿಂಗಳುಗಳಾದರೂ ಸಂಬಂಧಪಟ್ಟವರು ಇದರ ದುರಸ್ತಿಗೆ ಮುಂದಾಗಿಲ್ಲ. ದ್ವಿಚಕ್ರ ವಾಹನದಲ್ಲಿನ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಸಂಬಂಧಪಟ್ಟವರು ಇನ್ನಾದರೂ ಈ ರಸ್ತೆಯ ದುರಸ್ತಿಗೆ ಮುತುವರ್ಜಿ ವಹಿಸಬೇಕು.
–ಅವಿನಾಶ್ ಪಂದುಬೆಟ್ಟು
‘ರಸ್ತೆ ಗುಂಡಿ ಮುಚ್ಚಿ’
ಉಡುಪಿ: ನಗರದ ಅಂಬಲಪಾಡಿ ಬೈಪಾಸ್‌ನ ಸರ್ವಿಸ್ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ವಾಹನ ಸವಾರರಿಗೆ ಅಪಾಯ ಆಹ್ವಾನಿಸುತ್ತಿದೆ. ತಾತ್ಕಾಲಿಕವಾಗಿಯಾದರೂ ಹೊಂಡಗಳನ್ನು ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು. ಮಳೆ ಬಂದರೆ ಈ ಹೊಂಡಗಳಲ್ಲಿ ನೀರು ನಿಂತು ತೋಡಿನಂತಾಗುತ್ತದೆ. –ಸಾರ್ವಜನಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.