
ಉಡುಪಿ: ನಗರದ ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಕರಾವಳಿ ಜಂಕ್ಷನ್ ವರೆಗೆಗಿನ ಸರ್ವಿಸ್ ರಸ್ತೆ ಬದಿಗೆ ರಾಶಿ ರಾಶಿ ಕಸ ಸುರಿಯುತ್ತಿದ್ದು, ಗಬ್ಬು ನಾರುತ್ತಿದೆ.
ರಸ್ತೆಯ ಬದಿಯಲ್ಲಿ ಕುರುಚಲು ಗಿಡಗಳಿದ್ದು ಅವುಗಳು ಮಧ್ಯೆ ಕಸ ಸುರಿಯಲಾಗುತ್ತಿದೆ. ಜೊತೆಗೆ ಪ್ಲಾಸ್ಟಿಕ್ ಚೀಲಗಳಲ್ಲೂ ಕಸವನ್ನು ತುಂಬಿಸಿ ಎಸೆಯಲಾಗುತ್ತಿದೆ. ಹಲವು ತಿಂಗಳುಗಳಿಂದ ಇಲ್ಲಿ ಕಸ ಎಸೆಯುತ್ತಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕಿನ್ನಿಮುಲ್ಕಿ ಸ್ವಾಗತ ಗೋಪುರದ ಅನತಿ ದೂರದಿಂದಲೇ ಸರ್ವಿಸ್ ರಸ್ತೆ ಬದಿ ಕಸದ ರಾಶಿ ತುಂಬಿದೆ. ಕೋಳಿ ಮಾಂಸದ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಎಸೆಯುತ್ತಿರುವುದರಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಸರ್ವಿಸ್ ರಸ್ತೆಯ ಬದಿ ಕಸ ರಾಶಿ ಬಿದ್ದರೂ ಸಂಬಂಧಪಟ್ವರು ಅದನ್ನು ಸ್ವಚ್ಛಗೊಳಿಸಲು ಮುಂದಾಗುತ್ತಿಲ್ಲ. ಸಮೀಪದಲ್ಲಿರುವ ಮನೆಯವರಿಗೂ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾತ್ರಿ ವೇಳೆ ವಾಹನಗಳಲ್ಲಿ ಬಂದು ಕಸ ಎಸೆಯಲಾಗುತ್ತಿದೆ. ಈ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕೆಂಬ ಜನರ ಬೇಡಿಕೆ ಇನ್ನೂ ಈಡೇರಿಲ್ಲ ಎಂದೂ ಹೇಳುತ್ತಾರೆ. ರಸ್ತೆ ಬದಿಯಲ್ಲಿ ಕಸ ಎಸೆಯುವವರಿಗೆ ಸಂಬಂಧಪಟ್ಟವರು ದಂಡ ವಿಧಿಸಬೇಕು ಎಂದೂ ಸ್ಥಳೀಯರು ಆಗ್ರಹಿಸಿದ್ದಾರೆ.
ಸರ್ವಿಸ್ ರಸ್ತೆ ಬದಿಯುದ್ದಕ್ಕೂ ಅಲ್ಲಲ್ಲಿ ಕಸ ಎಸೆಯಲಾಗುತ್ತಿದ್ದು, ಕೆಲವೆಡೆ ಚರಂಡಿ ಸ್ಲ್ಯಾಬ್ ಎದ್ದು ಹೋಗಿರುವಲ್ಲಿ ಚರಂಡಿಯೊಳಗೂ ಕಸ ತುಂಬಿಸಲಾಗಿದೆ ಎಂದೂ ಜನರು ದೂರಿದ್ದಾರೆ. ಚರಂಡಿಗೂ ಕಸ ತುಂಬಿಸುತ್ತಿರುವುದರಿಂದ ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿದು ಹೋಗದೆ ರಸ್ತೆಯಲ್ಲಿ ಹರಿಯುವ ಸಾಧ್ಯತೆ ಇದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಅಂಬಲಪಾಡಿ ಬೈಪಾಸ್‌ನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನಗಳೂ ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸುತ್ತಿವೆ. ಗಬ್ಬು ವಾಸನೆಯಿಂದ ವಾಹನ ಸವಾರರೂ ಮೂಗು ಮುಚ್ಚಿಕೊಳ್ಳುವಂತಾಗಿದೆ. ಕೆಲವು ಅಂಗಡಿ, ಹೋಟೆಲ್‌ನವರೂ ಕಸವನ್ನು ಇಲ್ಲಿ ತಂದು ಸುರಿಯುತ್ತಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.
‘ರಸ್ತೆ ಬದಿ ಕಸ ಎಸೆದರೆ ದಂಡ’
ನಗರಸಭೆ ವ್ಯಾಪ್ತಿಯಲ್ಲಿ ಬ್ಲ್ಯಾಕ್‌ಸ್ಪಾಟ್‌ಗಳೆಂದು ಗುರುತಿಸಿರುವ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿ ಕಸ ಎಸೆಯುವವರಿಗೆ ದಂಡ ವಿಧಿಸಿದ್ದೇವೆ. ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. ಕಸ ತಂದು ಸುರಿಯುವುದನ್ನು ನಿಯಂತ್ರಿಸಲು ಕಮ್ಯುನಿಟಿ ಮೊಬಿಲೈಸರ್‌ಗಳನ್ನು ನೇಮಕ ಮಾಡಿದ್ದು ಅವರು ಕಸ ಎಸೆಯುವವರನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ಹೇಳಿದರು.
ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಿನ್ನಿಮುಲ್ಕಿ ಸರ್ವಿಸ್ ರಸ್ತೆ ಬದಿಯಲ್ಲಿ ಸಿ.ಸಿ.ಟಿ.ವಿ. ಅಳವಡಿಸಿ ಕಸ ಎಸೆಯುವವರನ್ನು ಪತ್ತೆಹಚ್ಚಿ ದಂಡ ಹಾಕಬೇಕು–ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.