ಪೊಲೀಸರು ಬಿಡುಗಡೆ ಮಾಡಿರುವ ಶಂಕಿ ಆರೋಪಿಯ ಫೊಟೊ
ಉಡುಪಿ: ಐದು ವರ್ಷದ ಬಾಲಕಿಗೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
‘ನಗರ ವ್ಯಾಪ್ತಿಯಲ್ಲಿ ಐದು ವರ್ಷದ ಮಗುವೊಂದು ಸಂಬಂಧಿಕರ ಅಂಗಡಿ ಪಕ್ಕ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮಗುವಿಗೆ ಚಾಕೋಲೆಟ್ ನೀಡುವ ಆಮಿಷವೊಡ್ಡಿ, ಸಮೀಪದ ಗಲ್ಲಿಗೆ ಕರೆದುಕೊಂಡು ಹೋಗಿ ಮಗುವಿನ ಖಾಸಗಿ ಅಂಗವನ್ನು ಮುಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
‘ಈ ವೇಳೆ ಮಗು ಕಿರುಚಿದ್ದು, ಆರೋಪಿ ಪರಾರಿಯಾಗಿದ್ದಾನೆ. ಮಗುವಿನ ಕಿರುಚಾಟ ಕೇಳಿ ಸಂಬಂಧಿಕರು ಸ್ಥಳಕ್ಕೆ ಬಂದಾಗ ಮಗು ನಡೆದ ಘಟನೆಯನ್ನು ವಿವರಿಸಿದೆ’ ಎಂದು ಹೇಳಿದ್ದಾರೆ.
ಅಪರಿಚಿತ ವ್ಯಕ್ತಿಯ ದೃಶ್ಯವು ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿದೆ. ಆತನ ಫೋಟೊವನ್ನು ನೋಡಿದ ಸ್ಥಳೀಯರು, ಆತ ಬಿಕ್ಷೆ ಬೇಡಲು ಬಂದಿದ್ದು, ಕನ್ನಡ ಮತ್ತು ತುಳು ಭಾಷೆಯಲ್ಲಿ ಬಿಕ್ಷೆ ಕೇಳುತ್ತಿದ್ದ ಎಂದು ವಿವರಿಸಿರುವುದಾಗಿ ಎಸ್.ಪಿ. ತಿಳಿಸಿದ್ದಾರೆ.
ಆರೋಪಿಯ ಬಗ್ಗೆ ಮಾಹಿತಿ ಸಿಕ್ಕಿದರೆ ಸಾರ್ವಜನಿಕರು ಉಡುಪಿ ಪೊಲೀಸರನ್ನು ಸಂಪರ್ಕಿಸುವಂತೆಯೂ ಅವರು ಕೋರಿದ್ದಾರೆ.
ಬಾಲಕಿಯು ಚೇತರಿಸಿಕೊಳ್ಳುತ್ತಿದ್ದು, ಆಕೆಯ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದಿದ್ದಾರೆ.
ಈ ಕುರಿತು ನಗರದ ಮಹಿಳಾ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ತ್ವರಿತ ಕ್ರಮಕ್ಕೆ ಸಚಿವೆ ಸೂಚನೆ: ಬಾಲಕಿಗೆ ಅಪರಿಚಿತ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಕುರಿತು ತ್ವರಿತ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸೂಚನೆ ನೀಡಿದ್ದಾರೆ.
ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಘಟನೆಯ ಮಾಹಿತಿ ಪಡೆದಿದ್ದಾರೆ.
ಬಾಲಕಿಗೆ ಅಗತ್ಯವಾದ ಎಲ್ಲ ನೆರವನ್ನು ನೀಡಬೇಕು ಎಂದೂ ಸೂಚನೆ ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.