
ಉಡುಪಿ: ಶ್ರೀ ವಾಮನತೀರ್ಥ ಪರಂಪರೆಯ ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಶನಿವಾರ ವಿವಿಧೆಡೆಯಿಂದ ಜನಸಾಗರ ಹರಿದುಬಂದಿದೆ.
ಬೆಳಿಗ್ಗೆಯಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯದ ಕೊನೆಯ ದಿನವಾದ ಶನಿವಾರ ಭಕ್ತರಿಗೆ ವಿಶೇಷ ಭೋಜನ ಪ್ರಸಾದ ಏರ್ಪಡಿಸಲಾಗಿತ್ತು.
ಶ್ರೀಕೃಷ್ಣ ಮಠದ ರಾಜಾಂಗಣ, ರಥಬೀದಿಯಲ್ಲೂ ಜನ ಜಂಗುಳಿ ಇತ್ತು. ಸಂಜೆ 7 ಗಂಟೆಯ ನಂತರ ಭಕ್ತರ ಸಂಖ್ಯೆ ಅಧಿಕವಾಗಿತ್ತು. ನಗರ ಹಾಗೂ ಸುತ್ತಮುತ್ತ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದ ಕಾರಣ ಜನರು ದೂರದಿಂದ ನಡೆದುಕೊಂಡೇ ಬಂದರು. ಪರ್ಯಾಯ ಮೆರವಣಿಗೆ ಮಾರ್ಗದ ಸಮೀಪ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದ್ದವು.
ವಿವಿಧ ಸಂಘ–ಸಂಸ್ಥೆಗಳ ವತಿಯಿಂದ ಯಕ್ಷಗಾನ, ರಸಮಂಜರಿ ಕಾರ್ಯಕ್ರಮ, ನೃತ್ಯ, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಇವುಗಳು ಪರ್ಯಾಯಕ್ಕೆ ಮೆರುಗು ನೀಡಿದವು.
ರಥಬೀದಿಯಲ್ಲಿ ಸಂಜೆ ಶೀರೂರು ಪರ್ಯಾಯ ಸ್ವಾಗತ ಸಮಿತಿ ವತಿಯಿಂದ, ಪರ್ಯಾಯ ಪೂರ್ಣಗೊಳಿಸಿದ ಪುತ್ತಿಗೆ ಮಠಾಧೀಶ ಸುಗುಣೇಂದ್ರ ಶ್ರೀಪಾದರಿಗೆ ಮತ್ತು ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಪೌರ ಸನ್ಮಾನ ಕಾರ್ಯಕ್ರಮ ನೆರವೇರಿತು.
64 ವರ್ಷದ ಸುಗುಣೇಂದ್ರತೀರ್ಥರು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಚತುರ್ಥ ಪರ್ಯಾಯ ಪೂರೈಸಿದ್ದು, ಇದೇ 18 ರಿಂದ 20 ವರ್ಷದ ಶೀರೂರು ಮಠಾಧೀಶ ವೇದವರ್ಧನತೀರ್ಥ ಶ್ರೀಪಾದರು ಕೃಷ್ಣ ಪೂಜಾಧಿಕಾರ ಪಡೆದುಕೊಳ್ಳಲಿದ್ದಾರೆ.
ಉಡುಪಿ: ಪರ್ಯಾಯದ ಅಂಗವಾಗಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಶನಿವಾರ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಅಲ್ಲಿಗೆ ಶೀರೂರು ಮಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿ ಭೇಟಿ ನೀಡಿದರು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಪ್ರಮುಖರಾದ ಯತೀಶ್ ಕರ್ಕೇರ ಪ್ರಖ್ಯಾತ್ ಶೆಟ್ಟಿ ಮತ್ತಿತರರು ಶ್ರೀಗಳನ್ನು ಬರಮಾಡಿಕೊಂಡರು. ಆಸ್ಕರ್ ಫರ್ನಾಂಡಿಸ್ ಅಭಿಮಾನಿ ಬಳಗದ ವತಿಯಿಂದ ಕುಣಿತ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.