ADVERTISEMENT

ಉಡುಪಿ: ಬೇಸಿಗೆ ಆರಂಭದಲ್ಲೇ ಟ್ಯಾಂಕರ್‌ ನೀರಿಗೆ ಮೊರೆ

ಸಮರ್ಪಕ ನೀರು ಪೂರೈಕೆಯಾಗದೆ ಕಿದಿಯೂರು ಗರಡಿ ತೋಟ ನಿವಾಸಿಗಳಿಗೆ ಸಂಕಷ್ಟ

ನವೀನ್‌ಕುಮಾರ್ ಜಿ
Published 14 ಫೆಬ್ರುವರಿ 2026, 7:55 IST
Last Updated 14 ಫೆಬ್ರುವರಿ 2026, 7:55 IST
ಕಿದಿಯೂರು ಗರಡಿ ತೋಟ ನಿವಾಸಿಗಳು ಟ್ಯಾಂಕರ್‌ನಲ್ಲಿ ನೀರು ತರಿಸಿರುವುದು 
ಕಿದಿಯೂರು ಗರಡಿ ತೋಟ ನಿವಾಸಿಗಳು ಟ್ಯಾಂಕರ್‌ನಲ್ಲಿ ನೀರು ತರಿಸಿರುವುದು    

ಉಡುಪಿ: ಬೇಸಿಗೆ ಆರಂಭವಾಗುತ್ತಿದ್ದಂತೆ ನಗರದಿಂದ ಕೇವಲ ನಾಲ್ಕೈದು ಕಿ.ಮೀ. ದೂರದಲ್ಲಿರುವ ಅಂಬಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿದಿಯೂರು ಗರಡಿ ತೋಟ ನಿವಾಸಿಗಳು ಟ್ಯಾಂಕರ್‌ ನೀರಿಗೆ ಆಶ್ರಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು ಒಂದು ತಿಂಗಳಿನಿಂದ ಪಂಚಾಯಿತಿ ವತಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಮೂರ್ನಾಲ್ಕು ದಿನಗಳಿಗೊಮ್ಮೆ ಅಲ್ಪ ಪ್ರಮಾಣದ ನೀರಷ್ಟೇ ಪೂರೈಕೆಯಾಗುತ್ತದೆ ಎಂದು ಜನರು ದೂರಿದ್ದಾರೆ.

ಕಿದಿಯೂರು ಗರಡಿ ತೋಟ ಪ್ರದೇಶದ ಸುಮಾರು 40ರಷ್ಟು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಪ್ರದೇಶವು ಹೊಳೆಗೆ ಸಮೀಪವಾಗಿರುವುದರಿಂದ ಇಲ್ಲಿನ ಬಾವಿಗಳಲ್ಲಿ ಉಪ್ಪು ನೀರಿದ್ದು, ಅದು ಕುಡಿಯಲು ಯೋಗ್ಯವಿಲ್ಲ. ಈ ಕಾರಣಕ್ಕೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ADVERTISEMENT

ನೀರಿನ ಸಮಸ್ಯೆಯಿಂದಾಗಿ ಅಲ್ಲಿನ ಮನೆಯವರು ₹600ರಿಂದ ₹800 ಹಣ ನೀಡಿ ಸಣ್ಣ ಟ್ಯಾಂಕರ್‌ಗಳಲ್ಲಿ ನೀರು ಹಾಕಿಸುತ್ತಿದ್ದಾರೆ. ಒಂದು ಟ್ಯಾಂಕರ್‌ ನೀರು ಮೂರರಿಂದ ನಾಲ್ಕು ದಿನಗಳಿಗಷ್ಟೇ ಸಾಕಾಗುತ್ತಿದೆ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಈ ಪ್ರದೇಶದ ಗರಡಿಯ ಬಾವಿಯಲ್ಲಿ ಮಾತ್ರ ಸಿಹಿ ನೀರಿದ್ದು, ಅಲ್ಲಿಂದ ಕೊಡದಲ್ಲಿ ನೀರು ತರಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಜನರು.

‘ಕೆಲ ತಿಂಗಳ ಹಿಂದೆ ಗರಡಿ ತೋಟ ಪ್ರದೇಶದದಲ್ಲಿ ವಾರಾಹಿ ನೀರು ಸರಬರಾಜು ಮಾಡುವುದಕ್ಕಾಗಿ ಹೊಸ ಪೈಪ್‌ಲೈನ್ ಸ್ಥಾಪಿಸಿದ್ದರು. ಅನಂತರ ನೀರಿನ ಸಮಸ್ಯೆ ಉಂಟಾಗಿದೆ. ವಾರಾಹಿಯ ನೀರೂ ಬರುವುದಿಲ್ಲ. ಹಳೆಯ ಪೈಪ್‌ಲೈನ್‌ನ ಮೂಲಕವೂ ಸರಿಯಾಗಿ ನೀರು ಬರುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಆನಂದ ತಿಳಿಸಿದರು.

‘ಇಷ್ಟರವರೆಗೆ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಆದರೆ ಈ ಬಾರಿ ಜನವರಿ ತಿಂಗಳಿಂದಲೇ ಸಮಸ್ಯೆಯಾಗಿರುವುದು ಆತಂಕ ಉಂಟು ಮಾಡಿದೆ. ಟ್ಯಾಂಕರ್‌ ನೀರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳಲ್ಲಿ ಕೇಳಿದರೆ ನೀರಿನ ಕೊರತೆ ಉಂಟಾಗಿದೆ ಎನ್ನುತ್ತಾರೆ’ ಎಂದೂ ಅವರು ಹೇಳಿದರು.

‘ಪಂಚಾಯಿತಿಯವರು ಸಮರ್ಪಕವಾಗಿ ನೀರು ಪೂರೈಕೆ ಮಾಡದಿರುವುದರಿಂದ ಉಪ್ಪು ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಸಣ್ಣ ಮಕ್ಕಳು, ಹಿರಿಯರು ಇರುವ ಮನೆಗಳಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ. ಫೆಬ್ರುವರಿಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾದೆ ಇನ್ನು ಮೇ ತಿಂಗಳಾಗುವಾಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಪಂಚಾಯಿತಿಯವರು ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಲೀಲಾವತಿ ಆಗ್ರಹಿಸಿದ್ದಾರೆ.

‘ಸಮಸ್ಯೆ ಪರಿಹಾರವಾಗುವವರೆಗೆ ಗ್ರಾಮ ಪಂಚಾಯಿತಿಯವರೇ ಟ್ಯಾಂಕರ್‌ ಮೂಲಕವಾದರೂ ನೀರು ಪೂರೈಸಲಿ’ ಎಂದು ಅವರು ತಿಳಿಸಿದ್ದಾರೆ.

ಕಿದಿಯೂರು ಗರಡಿ ತೋಟ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ. ಕೂಡಲೇ ಸಮಸ್ಯೆ ಪರಿಹರಿಸಲಾಗುವುದು
ಶಿವರಾಜ್‌ ಎಂ. ಅಂಬಲಪಾಡಿ ಗ್ರಾ.ಪಂ. ಪ್ರಭಾರ ಪಿಡಿಒ
ಸುಮಾರು ಒಂದು ತಿಂಗಳಿನಿಂದ ನೀರಿನ ಸಮಸ್ಯೆ ತಲೆದೋರಿದೆ. ಈ ಕುರಿತು ಪಂಚಾಯಿತಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರೂ ಸ್ಪಂದಿಸುತ್ತಿಲ್ಲ
ಪ್ರಸಾದ್‌ ಕಿದಿಯೂರು ಗರಡಿ ತೋಟ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.