ADVERTISEMENT

ಉಡುಪಿ: ಪರೀಕ್ಷಾ ಕೇಂದ್ರ ಸೋಂಕು ಮುಕ್ತ, ಆತಂಕ ಬೇಡ

ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಿಗೆ ರವಾನೆ: ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 12:56 IST
Last Updated 10 ಜೂನ್ 2020, 12:56 IST
ಹೋಂ ಕ್ವಾರಂಟೈನ್‌ ನಿಯಮಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆಯಿತು.
ಹೋಂ ಕ್ವಾರಂಟೈನ್‌ ನಿಯಮಗಳ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆಯಿತು.   

ಉಡುಪಿ:ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ಧ ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಿಗೆ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಹೋಂ ಕ್ವಾರಂಟೈನ್ ನಿಯಮದ ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಹೊರ ರಾಜ್ಯಗಳಿಂದ ಬಂದು 14 ದಿನ ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ ಇಡಲು ಗ್ರಾಮೀಣ ಭಾಗದಲ್ಲಿ ಕೊರೊನಾ ಟಾಸ್ಕ್‌ಫೋರ್ಸ್‌ ಹಾಗೂ ನಗರ ಪ್ರದೇಶದಲ್ಲಿ ವಾರ್ಡ್‌ವಾರು ಕಮಿಟಿ ರಚಿಸಲಾಗಿದೆ. ಮೇಲುಸ್ತುವಾರಿಗೆ ಫ್ಲೈಯಿಂಗ್ ಸ್ಕ್ವಾಡ್‌ ನೇಮಿಸಲಾಗಿದೆ. ಕಂದಾಯ, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರತಿದಿನ ಸೀಲ್‌ಡೌನ್‌ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.

ADVERTISEMENT

ಹೋಂ ಕ್ವಾರಂಟೈನ್‌ ಸೀಲ್‌ ಇರುವ ವ್ಯಕ್ತಿ ಸಾರ್ವಜನಿಕ ಸ್ಥಳಗಳಿಗೆ ಭೇಟಿನೀಡಿದರೆ ತಕ್ಷಣ 100ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮನೆಬಿಟ್ಟು ಹೊರಬಂದರೂ ಅಕ್ಕಪಕ್ಕದ ಮನೆಯವರು ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.

ಹೊರ ರಾಜ್ಯಗಳಿಂದ ಜಿಲ್ಲೆಗೆ ಬರುವವರು ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ ಮಾಡಿಸಿಯೇ ಬರಬೇಕು. ಮುಂಬೈ ಹೊರತುಪಡಿಸಿ ಇತರೆಡೆಗಳಿಂದ ಬರುವವರಿಗೆ ತಕ್ಷಣಕ್ಕೆ ಅನುಮತಿ ಸಿಗಲಿದೆ. ಮುಂಬೈನಿಂದ ಬರುವವರ ಅರ್ಜಿಗಳನ್ನು ಜಿಲ್ಲಾಡಳಿತ ಪರಿಶೀಲಿಸಿ ನಿಗಧಿತ ದಿನದಂದು ಜಿಲ್ಲೆಗೆ ಬರಲು ಅನುಮತಿ ನೀಡಲಿದೆ ಎಂದರು.

ಹೊರ ರಾಜ್ಯಗಳಿಂದ ಬರುವವರು ಕಾಪು, ಬ್ರಹ್ಮಾವರ, ಬೈಂದೂರು, ಕಾರ್ಕಳ, ಉಡುಪಿ, ಕುಂದಾಪುರದಲ್ಲಿರುವ ಜಿಲ್ಲಾ ಸ್ವೀಕೃತ ಕೇಂದ್ರಗಳಿಗೆ ಮೊದಲು ಬರಬೇಕು. ಅಲ್ಲಿ ತಪಾಸಣೆ ನಡೆಸಿ, ಕೈಗೆ ಸೀಲ್‌ ಹಾಕಿ ಹೋಂ ಕ್ವಾರಂಟೈನ್‌ಗೆ ಕಳಿಸಲಾಗುವುದು. ರೋಗದ ಲಕ್ಷಣಗಳಿದ್ದರೆ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿ ವರದಿ ನೆಗೆಟಿವ್ ಬಂದರೆ ಹೋಂ ಕ್ವಾರಂಟೈನ್‌ಗೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಹೋಂ ಕ್ವಾರಂಟೈನ್‌ಗೆ ಬರುವವರು 14 ದಿನಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ಮೊದಲೇ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯ ಸದಸ್ಯರು ಕೂಡ ಈ ಅವಧಿಯಲ್ಲಿ ಮನೆಬಿಟ್ಟು ಹೊರಹೋಗುವಂತಿಲ್ಲ. ನಿಯಮ ಪಾಲಿಸಲು ಸಾಧ್ಯವಿಲ್ಲದಿದ್ದರೆ ಮುಂಬೈನಿಂದ ಯಾರನ್ನೂ ಕರೆಸಿಕೊಳ್ಳಬೇಡಿ. ಮನೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮಕ್ಕಳಿದ್ದರೂ ಸದ್ಯಕ್ಕೆ ಮುಂಬೈನಿಂದ ಕರೆಸಿಕೊಳ್ಳುವುದು ಬೇಡ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಮುಂಬೈನಿಂದ ಬಂದವರು ಪ್ರತ್ಯೇಕ ಕೋಣೆಯಲ್ಲಿ ವಾಸವಿರಬೇಕು. ಕೋಣೆಯ ವ್ಯವಸ್ಥೆ ಇಲ್ಲದಿದ್ದರೆ ಸರ್ಕಾರಿ ಕ್ವಾರಂಟೈನ್‌ನಲ್ಲಿ ಇರಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಎಎಸ್‌ಪಿ ಕುಮಾರ ಚಂದ್ರ, ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.