ADVERTISEMENT

ಕಾಮಗಾರಿ ಅಪೂರ್ಣ: ಜನತೆ ಹೈರಾಣ

ಬಿಸಿಲಲ್ಲಿ ಬಸವಳಿಯುವ ಪ್ರಯಾಣಿಕರು, ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ ಜಂಕ್ಷನ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 10:00 IST
Last Updated 3 ಫೆಬ್ರುವರಿ 2020, 10:00 IST
ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನೋಟ.
ಪಡುಬಿದ್ರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನೋಟ.   

ಪಡುಬಿದ್ರಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿಯಲ್ಲಿರುವ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿಂದ ಆವರಿಸಿಕೊಂಡಿರುವ ನಗರ ಪ್ರದೇಶ. ಸದಾ ವಾಹನಗಳು ಮತ್ತು ಜನರಿಂದ ಗಿಜಿಗುಡುವ ಇಲ್ಲಿ ಸಾಲು, ಸಾಲು ಸಮಸ್ಯೆಗಳು ಹಾಗೆಯೇ ಉಳಿದಿವೆ. ಮೊದಲೇ ಸಮಸ್ಯೆಗಳಿಂದ ಬಸವಳಿದಿದ್ದ ಪಡುಬಿದ್ರಿಯಲ್ಲಿ ಹತ್ತಾರು ಕಾಮಗಾರಿಗಳು ಅಪೂರ್ಣವಾಗಿ ನಿಂತಿದ್ದು, ಇವು ಜನರನ್ನು ಮತ್ತಷ್ಟು ಹೈರಾಣಾಗಿಸಿವೆ.

ಸಮರ್ಪಕ ಬಸ್‌ ನಿಲ್ದಾಣವಿಲ್ಲದೆ ಬಿಸಿಲಿನಲ್ಲಿ ಬಸ್‌ಗಳಿಗೆ ಕಾಯುವ ಪ್ರಯಾಣಿಕರು, ಸೇವಾ ರಸ್ತೆಯ ಅಪೂರ್ಣ ಕಾಮಗಾರಿಯಿಂದ ಸಮಸ್ಯೆ ಅನುಭವಿಸುತ್ತಿರುವ ವಾಹನ ಸವಾರರು, ಅರ್ಧಕ್ಕೆ ನಿಂತಿರುವ ಕಲ್ಸಂಕ ಕಿರು ಸೇತುವೆ ಕಾಮಗಾರಿ, ಅಪಾಯಗಳಿಗೆ ಆಹ್ವಾನ ನೀಡುತ್ತಿರುವ ಅಪಾಯಕಾರಿ ಪಡುಬಿದ್ರಿ ಜಂಕ್ಷನ್. ಹೀಗೆ ಪಡುಬಿದ್ರಿಯಲ್ಲಿ ಹತ್ತಾರು ಸಮಸ್ಯೆಗಳು ಪರಿಹಾರ ಕಾಣದೇ ಉಳಿದಿವೆ.

ಅಪೂರ್ಣ ಕಾಮಗಾರಿ

ADVERTISEMENT

ಸುರತ್ಕಲ್-ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಪಡುಬಿದ್ರಿಯಲ್ಲಿ ಮಾತ್ರ ಅಪೂರ್ಣವಾಗಿದೆ.ಎರ್ಮಾಳು ಕಲ್ಸಂಕ ಬಳಿ ಕಾಮಿನಿ ಹೊಳೆ ತೋಡಿಗೆ ಅಡ್ಡಲಾಗಿ ನಿರ್ಮಿಸಬೇಕಿದ್ದ ಕಿರು ಸೇತುವೆ ಕಾಮಗಾರಿಯು 2018ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಇಂದಿಗೂ ಕಾಮಗಾರಿ ಕುಂಟುತ್ತಾ, ತೆವಳುತ್ತಾ ಸಾಗುತ್ತಿದೆ.

ಒಂದು ಪಾರ್ಶ್ವದ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ. ಆದರೂ ಪೂರ್ಣಗೊಂಡ ರಸ್ತೆಯ ಗುಣಮಟ್ಟ ಸರಿಯಿಲ್ಲ ಎಂಬುದು ಸಾರ್ವಜನಿಕರ ದೂರು. ಇಲ್ಲಿ ನಿರ್ಮಿಸಲಾಗಿರುವ ಸೇತುವೆ ರಸ್ತೆಗೆ ಅಲ್ಲಲ್ಲಿ ತೇಪೆ ಹಾಕಲಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬುದು ಸವಾರರ ಅಳಲು.

ಇನ್ನೊಂದು ಪಾರ್ಶ್ವದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಆಗಾಗ ಇಲ್ಲಿ ಅಪಘಾತಗಳು ನಡೆಯುತ್ತಿದ್ದು, ನಾಗರಿಕರಲ್ಲಿ ಪ್ರಾಣಭಯ ಹುಟ್ಟಿಸಿದೆ.

ಅಪಾಯಕಾರಿ ಜಂಕ್ಷನ್

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಸಂಧಿಸುವ ಪಡುಬಿದ್ರಿ ಜಂಕ್ಷನ್ ಅಪಾಯಕಾರಿಯಾಗಿದೆ. ಪಡುಬಿದ್ರಿ ಪ್ರದೇಶದಲ್ಲಿ ತಲೆ ಎತ್ತಿರುವ ಬೃಹತ್ ಉದ್ದಿಮೆಗಳಿಗೆ ಬರುವ ದೊಡ್ಡ ವಾಹನಗಳು ಇದೇ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳ-ಕುದುರೆಮುಖ ರಾಜ್ಯ ಹೆದ್ದಾರಿಯೂ ಇದೇ ಜಂಕ್ಷನ್ ಮೂಲಕವೇ ಹಾದುಹೋಗಬೇಕು.

ಇದರಿಂದ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸುಗಮ ಸಂಚಾರ ಸಾಧ್ಯವಾಗುತ್ತಿಲ್ಲ. ಸಂಚಾರ ಪೊಲೀಸರು ದಟ್ಟಣೆ ನಿವಾರಿಸಲು ಪ್ರತಿದಿನ ಹರಸಾಹಸ ಪಡಬೇಕು. ಜತೆಗೆ, ಅಪಘಾತ ವಲಯವಾಗಿರುವ ಕಾರಣದಿಂದ ಜಂಕ್ಷನ್‌ಗೆ ಸಿಗ್ನಲ್ ವ್ಯವಸ್ಥೆ ಮಾಡಬೇಕು. ಪೂರ್ಣಕಾಲಿಕ ಸಂಚಾರ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬುದು ನಾಗರಿಕರ ಒತ್ತಾಯ.

ಅರೆಬರೆ ಸರ್ವೀಸ್ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಕೋರ್ಟ್ ಯಾರ್ಡ್‌ನಿಂದ ಬಿಲ್ಲವ ಸಂಘದವರೆಗೆ, ಡೌನ್‌ಟೌನ್‌ನಿಂದ ಅಯೋಧ್ಯ ಹೋಟೆಲ್‌ವರೆಗಿನ ಸೇವಾ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ನವರಂಗ್ ಹೋಟೆಲ್ ಬಳಿಯಿಂದ ಸನ್ನಿಧಿ ಮೆಡಿಕಲ್‌ವರೆಗೆ ಚರಂಡಿ ವ್ಯವಸ್ಥೆ ನಿರ್ಮಾಣ ಬಾಕಿ ಇದೆ.

ಸರ್ವೀಸ್‌ ರಸ್ತೆಗೆ ಜಲ್ಲಿ ಹಾಕಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಸಾರ್ವಜನಿಕರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ಜತೆಗೆ ನಿತ್ಯವೂ ದೂಳಿನಲ್ಲಿ ಸಂಚರಿಸಬೇಕಾಗಿದೆ.

ಬಸ್‌ ನಿಲ್ದಾಣವಿಲ್ಲ: ಪಡುಬಿದ್ರಿಯಿಂದ ಮಂಗಳೂರು ಕಡೆಗೆ, ಕಾರ್ಕಳ, ಉಡುಪಿಗಳಿಗೆ ತೆರಳುವ ಪ್ರಯಾಣಿಕರಿಗೆ ಸಮರ್ಪಕ ಬಸ್‌ ನಿಲ್ದಾಣಗಳ ವ್ಯವಸ್ಥೆ ಇಲ್ಲ. ಬಿಸಿಲಿನಲ್ಲಿ ನಿಂತು ಬಸ್ಸಿಗಾಗಿ ಕಾಯುವ ದಯನೀಯ ಸ್ಥಿತಿ ಇಲ್ಲಿ ಇದೆ. ಆಟೊ, ಟೂರಿಸ್ಟ್ ಕಾರು, ಟೆಂಪೊ ನಿಲ್ಲಿಸುವುದಕ್ಕೂ ನಿಲ್ದಾಣಗಳಿಲ್ಲ.

ಬಸ್‌ ನಿಲ್ದಾಣ ಎಲ್ಲಿ ನಿರ್ಮಾಣವಾಗಬೇಕು ಎಂಬ ಗೊಂದಲವಿದೆ. ಗ್ರಾಮ ಪಂಚಾಯಿತಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಜಾಗ ಗುರುತಿಸಿ ಬಸ್‌ ನಿಲ್ದಾಣ ಮಾಡಬೇಕು ಎಂದು ಒತ್ತಾಯಿಸುತ್ತಾರೆ ನಾಗರಿಕರು.

ಉರಿಯದ ದೀಪಗಳು: ಹೆದ್ದಾರಿಯ ವಿಭಜಕದಲ್ಲಿ ಬಿಲ್ಲವ ಸಂಘದಿಂದ ಕೋರ್ಟ್ ಯಾರ್ಡ್‌ವೆರೆಗೆ ದೀಪಗಳನ್ನು ಅಳವಡಿಸಿ ವರ್ಷ ಕಳೆದರೂ ಇನ್ನೂ ಉರಿಯುತ್ತಿಲ್ಲ. ಇದರಿಂದ ಪಡುಬಿದ್ರಿ ಪೇಟೆ ಭಾಗದಲ್ಲಿ ರಾತ್ರಿಯಾದರೆ ಜನರು ಓಡಾಡಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭರವಸೆ ಸಿಕ್ಕಿದೆ

ಪಡುಬಿದ್ರಿಯಲ್ಲಿ 30ಕ್ಕಿಂತಲೂ ಅಧಿಕ ಕಾರುಗಳಿವೆ.ಹೆದ್ದಾರಿ ವಿಸ್ತರಣೆಯ ಬಳಿಕ ಕಾರುಗಳ ನಿಲ್ದಾಣಕ್ಕೆ ವ್ಯವಸ್ಥೆ ಇಲ್ಲ. ಹೆದ್ದಾರಿ ಪ್ರಾಧಿಕಾರ, ನವಯುಗ ಕಂಪೆನಿ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿಗೆ ನಿಲ್ದಾಣ ನಿರ್ಮಿಸಿಕೊಡಲು ಮನವಿ ಮಾಡಲಾಗಿದೆ. ಭರವಸೆ ಮಾತ್ರ ದೊರಕಿದೆ. ಬೇಗ ಸರ್ವೀಸ್ ರಸ್ತೆ ಪೂರ್ಣಗೊಂಡಲ್ಲಿ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆಯಾಗಬಹುದು ಎಂಬ ನಿರೀಕ್ಷೆ ಪಡುಬಿದ್ರಿ ಕಾರು ಯೂನಿಯನ್ ಕಾರ್ಯದರ್ಶಿ ಕೌಸರ್ ಅವರದ್ದು.

ಒಂದು ವಾರದ ಗಡುವು

‘ಕಲ್ಸಂಕ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಅರೆಬರೆ ಚರಂಡಿ ಕಾಮಗಾರಿಯಿಂದ ಅಪಘಾತಗಳ ಆತಂಕ ಎದುರಾಗಿದ್ದು, ಪ್ರಾಣಹಾನಿ ಸಂಭವಿಸುವ ಮೊದಲು ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಈಗಾಗಲೇ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಪಡುಬಿದ್ರಿಯ ವಿವಿಧ ಸಂಘಟನೆಗಳನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು’ ಎನ್ನುತ್ತಾರೆ ಸಿಐಟಿಯು ಯುಪಿಸಿಎಲ್ ಎಂಪ್ಲಾಯಿಸ್ ಯೂನಿಯನ್ಅಧ್ಯಕ್ಷ ಲೋಕೇಶ್ ಹೆಜಮಾಡಿ.

ಕಾಮಗಾರಿ ವಿಳಂಬಕ್ಕೆ ಕಾರಣ

ಸುರತ್ಕಲ್-ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಡುಬಿದ್ರಿಯಲ್ಲಿ 3 ಕಿ.ಮೀ. ಬೈಪಾಸ್ ನಿರ್ಮಾಣಕ್ಕೆ ಮುಂದಾಗಿತ್ತು. ಈ ವೇಳೆ ಬೈಪಾಸ್ ನಿರ್ಮಾಣಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿದ್ದರಿಂದ ಹಲವು ವರ್ಷಗಳ ಕಾಲ ಹೆದ್ದಾರಿ ವಿಸ್ತರಣೆಯಾಗದೆ ಸಂಚಾರಕ್ಕೆ ಅನನುಕೂಲವಾಗಿತ್ತು.ಹಲವು
ಸುತ್ತಿನ ಸರ್ವೆ ಬಳಿಕ ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರವು ಈಗಿರುವ ಹೆದ್ದಾರಿಯನ್ನೇ ವಿಸ್ತರಣೆ ಮಾಡುವುದು ಸೂಕ್ತ ಎಂಬ ನಿರ್ಧಾರ ಕೈಗೊಂಡು 2015ರಲ್ಲಿ ಕಾಮಗಾರಿಗೆ ಚಾಲನೆ ನೀಡಿತು. ತೀರಾ ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಸಮಸ್ಯೆ ಸೃಷ್ಟಿಯಾಗಿದೆ.

ಪೂರ್ಣಗೊಳ್ಳಲು ಮೂರು ತಿಂಗಳು

ಮಂಗಳೂರಿನ ಪಂಪ್‌ವೆಲ್ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಪಡುಬಿದ್ರಿಯಲ್ಲಿ ಕಾಮಗಾರಿಗೆ ಚುರುಕು ನೀಡಲಾಗುವುದು. ಕಲ್ಸಂಕದಲ್ಲಿ ಈಗಾಗಲೇ ಕಾಮಗಾರಿಗಳು ಆರಂಭಗೊಂಡಿದ್ದು, ಮೂರು ತಿಂಗಳಲ್ಲಿ ಪಡುಬಿದ್ರಿಯ ಸರ್ವೀಸ್ ರಸ್ತೆ, ಚರಂಡಿ, ಬಸ್‌ ನಿಲ್ದಾಣ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.

‘ಬಸ್‌ ನಿಲ್ದಾಣಕ್ಕೆ ಜಾಗ ಗುರುತು’

ಪಡುಬಿದ್ರಿಯಲ್ಲಿ ಎರಡು ಬಸ್‌ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಈಗ ಇರುವ ನಿಲ್ದಾಣದ ಸಮೀಪದಲ್ಲಿಯೇ ನಿಲ್ದಾಣ ಮಾಡಲಾಗುವುದು. ಉಡುಪಿ, ಕಾರ್ಕಳಕ್ಕೆ ತೆರಳುವ ವಾಹನಗಳಿಗೆ ಸನ್ನಿಧಿ ಮೆಡಿಕಲ್ ಪಕ್ಕದಲ್ಲಿ ಜಾಗ ಗುರುತಿಸಲಾಗಿದೆ. ಸಾರ್ವಜನಿಕರು ಪಂಚಾಯಿತಿ ಕಟ್ಟಡದ ಮುಂದೆ ಇರುವ ಖಾಲಿ ಜಾಗದಲ್ಲಿ ಬಸ್‌ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ರಿಕ್ಷಾ ಹಾಗೂ ಕಾರು ಚಾಲಕರು ನಿಲ್ದಾಣಕ್ಕೆ ಮನವಿ ಸಲ್ಲಿಸಿದ್ದು, ಇನ್ನೂ ಜಾಗ ಗುರುತಿಸಿಲ್ಲ. ಬಸ್‌ ನಿಲ್ದಾಣಗಳು ನಿರ್ಮಾಣವಾದ ಬಳಿಕ ರಿಕ್ಷಾ ಹಾಗೂ ಕಾರು ನಿಲ್ದಾಣಕ್ಕೆ ಜಾಗ ಗುರುತಿಸಲಾಗುವುದು ಎನ್ನುತ್ತಾರೆ ಪಿಡಿಒಪಂಚಾಕ್ಷರಿ ಕೇರಿಮಠ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.