ADVERTISEMENT

ಕರಗುತ್ತಿರುವ ಕೋವಿಡ್ ಆತಂಕ: ಉಡುಪಿ ಪ್ರವಾಸೋದ್ಯಮ ಚೇತರಿಕೆ

ವಾರಾಂತ್ಯದಲ್ಲಿ ಜಿಲ್ಲೆಗೆ ಹರಿದು ಬರುತ್ತಿದ್ದಾರೆ ಪ್ರವಾಸಿಗರು: ಗಿಜಿಗುಡುತ್ತಿವೆ ಬೀಚ್‌ಗಳು, ಧಾರ್ಮಿಕ ಕ್ಷೇತ್ರಗಳು

ಬಾಲಚಂದ್ರ ಎಚ್.
Published 4 ಅಕ್ಟೋಬರ್ 2021, 22:45 IST
Last Updated 4 ಅಕ್ಟೋಬರ್ 2021, 22:45 IST
ಮಲ್ಪೆ ಬೀಚ್‌ನ ದೃಶ್ಯ
ಮಲ್ಪೆ ಬೀಚ್‌ನ ದೃಶ್ಯ   

ಉಡುಪಿ: ಕೇರಳ ಆತಂಕದ ನಡುವೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಸಾರ್ವಜನಿಕರಲ್ಲಿ ತುಸು ನೆಮ್ಮದಿ ಮೂಡಿಸಿದೆ. ತಿಂಗಳ ಹಿಂದಷ್ಟೆ ಮೂರಂಕಿಯ ಗಡಿ ದಾಟಿದ್ದ ಸೋಂಕಿತರ ಸಂಖ್ಯೆ ಪ್ರಸ್ತುತ ಒಂದಂಕಿಗೆ ಇಳಿಮುಖವಾಗಿದ್ದು, ನೆಲಕಚ್ಚಿದ್ದ ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ಆರ್ಥಿಕ ವಹಿವಾಟು ಚೇತರಿಕೆಯ ಹಾದಿಗೆ ಮರಳುತ್ತಿದೆ.

ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಧಾರ್ಮಿಕ ಕ್ಷೇತ್ರಗಳು, ಕರಾವಳಿಯ ಕಡಲ ಕಿನಾರೆಗಳು, ಹೊಟೆಲ್, ರೆಸ್ಟೊರೆಂಟ್‌ಗಳು ಗಿಜಿಗಿಡುತ್ತಿವೆ. ವಾರಾಂತ್ಯದಲ್ಲಿ ಪ್ರವಾಸಿ ತಾಣಗಳು ಭರ್ತಿಯಾಗುತ್ತಿದ್ದು, ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಕಾಣುತ್ತಿದೆ.

ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡು

ADVERTISEMENT

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬೀಚ್‌ಗಿಳಿಯಲು ಅಡ್ಡಿಯಾಗಿದ್ದ ನಿರ್ಬಂಧಗಳು ತೆರವಾಗಿರುವ ಹಿನ್ನೆಲೆಯಲ್ಲಿ ವಾರಾಂತ್ಯದ ಮೋಜು ಸವಿಯಲು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರ ದಂಡು ಮಲ್ಪೆಯತ್ತ ಮುಖ ಮಾಡಿದೆ. ವೀಕೆಂಡ್‌ನಲ್ಲಿ ಕನಿಷ್ಠ 5 ರಿಂದ 6 ಸಾವಿರ ಪ್ರವಾಸಿಗರು ಬೀಚ್‌ಗೆ ಭೇಟಿ ನೀಡುತ್ತಿದ್ದಾರೆ ಎನ್ನುತ್ತಾರೆ ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿ ನಿರ್ವಹಣಾಧಿಕಾರಿ ಸುದೇಶ್ ಶೆಟ್ಟಿ.

ನೆರೆಯ ಕೇರಳದಲ್ಲಿ ಕೋವಿಡ್‌ ಪ್ರಮಾಣ ಹೆಚ್ಚಳ ಹಾಗೂ ಕರಾವಳಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ ಪ್ರವಾಸೋದ್ಯಮ ಮಂಕಾಗಿತ್ತು. ಕಳೆದ ಒಂದು ವಾರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಮಲ್ಪೆ ಬೀಚ್‌ನಲ್ಲಿ ಮತ್ತೆ ವಾಟರ್ಸ್ ಸ್ಪೋರ್ಟ್ಸ್‌ಗಳು ಆರಂಭವಾಗಿವೆ. ಪ್ರತಿದಿನ ಸೇಂಟ್ ಮೇರಿಸ್ ದ್ವೀಪಕ್ಕೆ 8 ಬೋಟ್‌ಗಳು ತೆರಳುತ್ತಿವೆ ಎಂದು ಮಾಹಿತಿ ನೀಡಿದರು.

ಮತ್ತೊಂದೆಡೆ ಧಾರ್ಮಿಕ ಕ್ಷೇತ್ರಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪ್ರಸಿದ್ಧ ಉಡುಪಿಯ ಕೃಷ್ಣಮಠಕ್ಕೆ ಪ್ರತಿದಿನ 3000ಕ್ಕೂ ಹೆಚ್ಚು ಭಕ್ತರು ಭೇಟಿನೀಡಿ ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. ದೇವರ ದರ್ಶನಕ್ಕೆ ಹಿಂದಿದ್ದ ನಿರ್ಬಂಧಗಳನ್ನು ಸಡಿಸಲಾಗಿದ್ದು, ಪೂಜಾ ಸಮಯ ಹೊರತುಪಡಿಸಿ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೂ ಭಕ್ತರು ದೇವರ ದರ್ಶನ ಮಾಡಬಹುದು ಎನ್ನುತ್ತಾರೆ ಅದಮಾರು ಮಠದ ವ್ಯವಸ್ಥಾಪಕರಾದ ಗೋವಿಂದ್‌ರಾಜ್‌.

ಹಿಂದಿನಂತೆ, ಕೃಷ್ಣಮಠದಲ್ಲಿ ಎಲ್ಲ ಧಾರ್ಮಿಕ ಸೇವೆಗಳು ಆರಂಭವಾಗಿದ್ದು, ಭಕ್ತರಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಪ್ರಸಾದದ ವ್ಯವಸ್ಥೆ ಆರಂಭಿಸಲಾಗಿದೆ ಎಂದು ಗೋವಿಂದ್ ರಾಜ್ ಮಾಹಿತಿ ನೀಡಿದರು.

ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್‌, ಕಾಪು ಬೀಚ್‌, ಬೈಂದೂರಿನ ಮರವಂತೆ ಬೀಚ್‌ಗಳಿಗೂ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ. ಕಾರ್ಕಳ ತಾಲ್ಲೂಕಿನ ಗೊಮ್ಮಟಸ್ವಾಮಿ, ಚತುರ್ಮುಖ ಬಸದಿ, ನೇಮಿನಾಥ ಬಸದಿ, ಕರೆ ಬಸದಿ, ಶ್ರವಣ ಬಸದಿ, ಅತ್ತೂರು ಚರ್ಚ್‌, ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

‘ಬೀಚ್ ಸ್ವಚ್ಛತೆಗೆ ಒತ್ತು’

ಕೋವಿಡ್‌ ನಿರ್ಬಂಧಗಳ ಕಾರಣಕ್ಕೆ ಪ್ರವಾಸಿಗರನ್ನು ಸೆಳೆಯಲು ಕಾರ್ಯಕ್ರಮಗಳ ಆಯೋಜನೆ ಸಾಧ್ಯವಾಗುತ್ತಿಲ್ಲ. ಸದ್ಯ ಬೀಚ್‌ ಹಾಗೂ ಸೇಂಟ್ ಮೇರಿಸ್ ಐಲ್ಯಾಂಡ್‌ನ ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸೋಂಕು ಮತ್ತಷ್ಟು ಇಳಿಮುಖವಾದರೆ, ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ ಎನ್ನುತ್ತಾರೆ ಸುದೇಶ್ ಶೆಟ್ಟಿ

‘ಸೋಂಕು ಇಳಿಕೆ’

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿದರ ಇಳಿಕೆಯಾಗುತ್ತಿದ್ದು, ಮೂರಂಕಿ ದಾಟಿದ್ದ ಸೋಂಕಿತರ ಸಂಖ್ಯೆ ಇದೀಗ ಒಂದಂಕಿಗೆ ಇಳಿಕೆಯಾಗಿದೆ. ಕಳೆದ ಒಂದು ವಾರದ ಕೋವಿಡ್ ಅಂಕಿಅಂಶಗಳನ್ನು ನೋಡಿದರೆ ಸೆ.28ರಂದು 39, 29ರಂದು 6 30ರಂದು 77, ಅ.1ರಂದು 23, 2ರಂದು 23, 3ರಂದು 33, ಅ.4ರಂದು 6ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 103ಕ್ಕೆ ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಕೋವಿಡ್‌ನಿಂದ ಒಬ್ಬರೂ ಮೃತಪಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.