ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರುಗುತ್ತಿರುವ ‘ಉಡುಪಿ ಉಚ್ಚಿಲ ದಸರಾ 2024’ ಪ್ರಯುಕ್ತ ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಸಂಜೆ ಸ್ಥಳೀಯ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕುಸ್ತಿ ಟೂರ್ನಿಯಲ್ಲಿ ಬೇಂಗ್ರೆ ವೀರಭಾರತಿ ವ್ಯಾಯಾಮ ಶಾಲೆಯ ಅನನ್ಯ ಆನಂದ ಅಮೀನ್ ಬೇಂಗ್ರೆ ‘ಉಡುಪಿ ಉಚ್ಚಿಲ ದಸರಾ ಕೇಸರಿ’ ಪ್ರಶಸ್ತಿ, ಬೋಳಾರ ಶಿವಾಜಿ ಫಿಸಿಕಲ್ ತಂಡದ ಗಗನ್ ‘ಉಡುಪಿ ಉಚ್ಚಿಲ ದಸರಾ ಕುಮಾರ್’ ಹಾಗೂ ಅದೇ ತಂಡದ ಶೌರ್ಯ ‘ಉಡುಪಿ ಉಚ್ಚಿಲ ದಸರಾ ಕುವರಿ’ ಪ್ರಶಸ್ತಿ ಗಳಿಸಿದರು.
ಬೇಂಗ್ರೆ ಶ್ರೀ ವೀರಭಾರತಿ ವ್ಯಾಯಾಮ ಶಾಲೆಯು ಪುರುಷರ ತಂಡ, ಬೋಳಾರ ಶಿವಾಜಿ ಫಿಸಿಕಲ್ ಮಹಿಳೆಯರ ತಂಡ ಪ್ರಶಸ್ತಿ ಗಳಿಸಿದವು. 200 ಪುರುಷರು, 50 ಮಹಿಳೆಯರು ಭಾಗವಹಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಸ್ತಿ ಗುರುಗಳು, ತುಳುನಾಡು ಕೇಸರಿ ವಿಜೇತ ಸದಸ್ಯರನ್ನು ಸನ್ಮಾನಿಸಲಾಯಿತು.
ದ.ಕ. ಮೊಗವೀರ ಮಹಾಜನ ಸಂಘದ ಗೌರವಾಧ್ಯಕ್ಷ ಜಿ. ಶಂಕರ್, ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕುಸ್ತಿ ಗುರುಗಳು, ಪುಂಡಲೀಕ ಹೊಸಬೆಟ್ಟು, ವಿಜಯ ಸುವರ್ಣ ಬೇಂಗ್ರೆ ಇದ್ದರು.
ರಂಗೋಲಿ ಸ್ಪರ್ಧೆ: ಸಾಂಪ್ರದಾಯಿಕ, ಶಾಸ್ತ್ರೀಯ ಕಲೆ ರಂಗೋಲಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಮೊಗವೀರ ಭವನದಲ್ಲಿ ಏರ್ಪಡಿಸಿದ‌್ದ ರಂಗೋಲಿ ಸ್ಪರ್ಧೆಯಲ್ಲಿ ವಿವಿಧ ರೀತಿಯ ರಂಗೋಲಿ ಮೂಡಿಬಂದವು. ಪುರುಷರು, ಮಹಿಳೆಯರ ವಿಭಾಗದಲ್ಲಿ ನಡೆದ ಸ್ಪರ್ಧೆಯ ವಿಜೇತರಿಗೆ ಪ್ರಥಮ ₹5 ಸಾವಿರ, ದ್ವಿತೀಯ ₹3 ಸಾವಿರ, ತೃತೀಯ ₹2 ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು.
ಮಹಿಳೆಯರ ವಿಭಾಗದಲ್ಲಿ ತೃಷಾ ಯು. ಅಂಚನ್ ನಂದಿಕೂರು ಪ್ರಥಮ, ವಿದ್ಯಾ ವಿಶ್ವೇಶ್ ಮಣಿಪಾಲ, ಪ್ರಮೀಳಾ ಶೆಟ್ಟಿ ಬೆಳ್ಮಣ್ ದ್ವಿತೀಯ ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ ರಿಲಕ್ ಡಿ. ಪುತ್ರನ್ ಎರ್ಮಾಳು ಬಡಾ ಪ್ರಥಮ, ಅತುಲ್ ಮಂಗಳೂರು ದ್ವಿತೀಯ, ಪ್ರಣಮ್ ಟಿ. ಪುತ್ರನ್ ಎರ್ಮಾಳು ಬಡಾ ತೃತೀಯ ಬಹುಮಾನ ಪಡೆದರು.
ಇಂದಿನ ಕಾರ್ಯಕ್ರಮ: ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ, ಭಜನಾ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸ್ಥಳೀಯ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ನೃತ್ಯ ರಂಜನಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.