
ಉಡುಪಿ: ಈ ಬಾರಿ ಅಕ್ಟೋಬರ್ ತಿಂಗಳವರೆಗೂ ನಿರಂತರ ಮಳೆ ಸುರಿದಿರುವುದು ಹಾಗೂ ಅನಂತರ ಅತಿಯಾದ ಚಳಿಯ ವಾತಾವರಣದಿಂದಾಗಿ ತರಕಾರಿ ಬೆಳೆಗಳಲ್ಲೂ ವೈರಸ್ ಬಾಧೆ ಕಾಣಿಸಿಕೊಂಡು ಇಳುವರಿ ಕುಸಿತಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ನೂರಾರು ರೈತರು ಭತ್ತದ ಮೊದಲ ಬೆಳೆಯಾದ ನಂತರ ತರಕಾರಿ ಬೆಳೆಯುತ್ತಾರೆ. ಆದರೆ ಈ ಬಾರಿ ತರಕಾರಿ ಗಿಡಗಳಿಗೆ ರೋಗ ಬಾಧೆ ಉಂಟಾಗಿರುವುದರಿಂದ ಇಳುವರಿ ಕುಸಿತವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇಳುವರಿ ಕುಸಿತವಾಗಿರುವ ಕಾರಣ ಮಾರುಕಟ್ಟೆಗೆ ಸ್ಥಳೀಯ ತರಕಾರಿಗಳು ಬಾರದೆ, ತರಕಾರಿ ದರವು ಗಗನಮುಖಿಯಾಗಿಯೇ ಮುಂದುವರಿದೆ. ಹೀಗಾಗಿ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಪ್ರಮಣದಲ್ಲಿ ತರಕಾರಿಗಳು ಜಿಲ್ಲೆಗೆ ಬರುತ್ತಿವೆ.
ರೋಗ ಬಾಧೆಯಿಂದಾಗಿ ಬಳ್ಳಿಗಳಲ್ಲಿ ಬೆಳೆಯುವ ತೊಂಡೆಕಾಯಿ, ಮಂಗಳೂರು ಸೌತೆ, ಹೀರೆಕಾಯಿ, ಕುಂಬಳ ಮೊದಲಾದವುಗಳ ಇಳುವರಿ ಕುಸಿತವಾಗಿದೆ. ಹೀರೆಕಾಯಿ ಕೆ.ಜಿ.ಗೆ ₹80, ಮಂಗಳೂರು ಸೌತೆ ಕೆ.ಜಿ.ಗೆ ₹30, ಸ್ಥಳೀಯ ತೊಂಡೆಕಾಯಿ ದರ ಕೆ.ಜಿ.ಗೆ ₹80ಕ್ಕೆ ಏರಿಕೆಯಾಗಿದೆ. ಹರಿವೆ ಮೊದಲಾದ ಸೊಪ್ಪುಗಳಿಗೂ ವೈರಸ್ ರೋಗ ಬಾಧೆ ಉಂಟಾಗಿ ಕೃಷಿ ನಾಶವಾಗಿದೆ. ಅಲಸಂಡೆ ಬೆಳೆಗೂ ಹಾನಿ ಸಂಭವಿಸಿ, ಅಲಸಂಡೆ ದರ ಕೆ.ಜಿ.ಗೆ ₹80ಕ್ಕೆ ಏರಿಕೆಯಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ಭತ್ತದ ಬೆಳೆಯಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗಿರುವುದರಿಂದ ಎರಡನೇ ಬೆಳೆಯಾಗಿ ಜಿಲ್ಲೆಯ ರೈತರು ತರಕಾರಿ, ಶೇಂಗಾವನ್ನು ಬೆಳೆಯುತ್ತಾರೆ. ಪ್ರತಿ ವರ್ಷವೂ ಸಣ್ಣ ಪ್ರಮಾಣದಲ್ಲಿ ರೋಗಗಳು ಕಾಣಿಸಿಕೊಂಡರೂ ಈ ಬಾರಿ ಅದು ಹೆಚ್ಚಾಗಿದೆ ಎನ್ನುತ್ತಾರೆ ಬೆಳೆಗಾರರು.
‘ತರಕಾರಿ ಗಿಡಗಳ ಎಲೆಗಳ ಬಣ್ಣ ಮಾಸಿ ಒಣಗಿ ಹೋಗುತ್ತಿವೆ. ಇದರಿಂದ ಇಳುವರಿ ಕುಸಿತವಾಗಿದೆ. ಜೊತೆಗೆ ಇಂತಹ ಗಿಡಗಳ ತರಕಾರಿಗಳ ಬೆಳವಣಿಗೆಯೂ ಕುಂಠಿತವಾಗುತ್ತಿದೆ’ ಎನ್ನುತ್ತಾರೆ ಹಿರಿಯಡ್ಕದ ಬೊಮ್ಮರಬೆಟ್ಟಿನ ರೈತ ಸುರೇಶ್ ನಾಯಕ್.
‘ಸದ್ಯ ಸಮಾರಂಭಗಳು ಕಡಿಮೆಯಾಗಿವೆ, ಹೆಚ್ಚು ಸಮಾರಂಭಗಳು ಇದ್ದರೆ ತರಕಾರಿಗಳಿಗೆ ಇನ್ನಷ್ಟು ಬೇಡಿಕೆ ಬರುತ್ತದೆ ಮತ್ತು ದರವೂ ಹೆಚ್ಚಾಗುತ್ತದೆ’ ಎನ್ನುತ್ತಾರೆ ಅವರು.
‘ಈ ಬಾರಿ ಕಳೆದ ವರ್ಷಕ್ಕಿಂತಲೂ ಜಾಸ್ತಿ ಚಳಿ ಇತ್ತು. ಚಳಿಯ ವಾತಾವರಣವು ತರಕಾರಿ ಬೆಳೆಗೆ ಒಳ್ಳೆಯದಲ್ಲ. ತರಕಾರಿಗಳು ಹೂ ಬಿಡುವ ಸಂದರ್ಭದಲ್ಲಿ ರೋಗ ಕಾಣಿಸಿಕೊಂಡಿದ್ದು, ಹಲವು ಬಗೆಯ ತರಕಾರಿಗಳ ಗಿಡಗಳೇ ನಾಶವಾಗಿವೆ. ಕಲ್ಲಂಗಡಿ ಹಣ್ಣಿನ ಬೆಳೆಗೂ ಹಾನಿಯುಂಟಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ತರಕಾರಿ ಲಭ್ಯತೆ ಕೊರತೆ: ಹೆಚ್ಚಿದ ದರ ರೋಗ ಬಾಧೆಯಿಂದ ತರಕಾರಿ ಗಿಡಗಳಿಗೆ ಹಾನಿ
ರೋಗಬಾಧೆಯಿಂದಾಗಿ ಈ ಬಾರಿ ಬಳ್ಳಿಯಲ್ಲಿ ಬೆಳೆಯುವ ತರಕಾರಿಗಳ ಇಳುವರಿ ಕುಸಿತವಾಗಿದೆ. ತರಕಾರಿ ಕೃಷಿಗೆ ನಾವು ರಾಸಾಯನಿಕವನ್ನು ಸಿಂಪಡಿಸುವುದಿಲ್ಲ. ಬೇವಿನ ಎಣ್ಣೆ ಸಿಂಪಡಿಸಿದರೂ ಪ್ರಯೋಜನವಾಗಿಲ್ಲಸುರೇಶ್ ನಾಯಕ್ ತರಕಾರಿ ಬೆಳೆಗಾರ
ತರಕಾರಿ ಬೆಳೆಗೆ ರೋಗ ಬಾಧೆಯಾಗಲು ಅತಿಯಾದ ಚಳಿಯೂ ಒಂದು ಕಾರಣವಾಗಿರಬಹುದು. ಇಂತಹ ಸಂದರ್ಭದಲ್ಲಿ ಅತಿಯಾದ ರಾಸಾಯನಿಕಗಳನ್ನು ಬಳಸದೆ ರೈತರು ಎಚ್ಚರಿಕೆ ವಹಿಸಬೇಕುರಾಮಕೃಷ್ಣ ಶರ್ಮ ಬಂಟಕಲ್ಲು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.