ADVERTISEMENT

ಉಡುಪಿ | ಮಲಿನಗೊಳ್ಳುತ್ತಿದೆ ಜೀವಜಲ: ಕಾದಿದೆ ಆಪತ್ತು

ನದಿ, ತೋಡುಗಳ ಒಡಲು ಸೇರುತ್ತಿದೆ ತ್ಯಾಜ್ಯ: ಜಲಚರಗಳ ಬದುಕಿಗೂ ಕಂಟಕ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 8:31 IST
Last Updated 24 ಮಾರ್ಚ್ 2025, 8:31 IST
ಉಡುಪಿ ನಗರದಲ್ಲಿ ಇಂದ್ರಾಣಿ ನದಿಗೆ ಕಸ ಸುರಿದಿರುವುದು
ಉಡುಪಿ ನಗರದಲ್ಲಿ ಇಂದ್ರಾಣಿ ನದಿಗೆ ಕಸ ಸುರಿದಿರುವುದು   

ಉಡುಪಿ: ಬೇಸಿಗೆ ಆರಂಭವಾಗಿ ನದಿ, ತೋಡುಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಜನರು ಸುರಿಯುವ ತ್ಯಾಜ್ಯಗಳಿಂದ ಜಲ ಮೂಲಗಳು ಕಲುಷಿತಗೊಳ್ಳುತ್ತಿವೆ.

ಉಡುಪಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಹೊಳೆಗಳಿಗೆ ಕಸ ಸುರಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್‌ ಚೀಲಗಳಲ್ಲಿ ಕಸ ತುಂಬಿ ನದಿ, ತೋಡುಗಳಿಗೆ ಎಸೆಯಲಾಗುತ್ತಿದೆ. ಇದರಿಂದ ನೀರು ಮಲಿನವಾಗುವುದರ ಜೊತೆಗೆ ಗಬ್ಬೆದ್ದು ನಾರುತ್ತಿದೆ.

ಉಡುಪಿ ನಗರದಲ್ಲಿ ಹರಿಯುವ ಇಂದ್ರಾಣಿ ನದಿಗೆ ಅಲ್ಲಲ್ಲಿ ರಾಶಿ ರಾಶಿ ಕಸ ಸುರಿಯಲಾಗುತ್ತಿದೆ. ಕಲ್ಸಂಕ, ಕುಂಜಿಬೆಟ್ಟು ಮೊದಲಾದೆಡೆ ಪ್ಲಾಸ್ಟಿಕ್‌ ಕಸ ನದಿ ನೀರಲ್ಲಿ ತೇಲುತ್ತಿದ್ದು, ಪರಿಸರಕ್ಕೆ ಹಾನಿಕರವಾಗಿ ಪರಿಣಮಿಸಿವೆ. ಪ್ಲಾಸ್ಟಿಕ್‌ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ರಾತ್ರಿ ವೇಳೆ ನದಿ, ತೋಡುಗಳಿಗೆ ಸುರಿಯಲಾಗುತ್ತದೆ. ಸೇತುವೆಗಳಿರುವ ಕಡೆ ಈ ಪ್ರವೃತ್ತಿ ಹೆಚ್ಚಾಗುತ್ತಿದೆ. ರಾತ್ರಿ ವೇಳೆ ವಾಹನಗಳಲ್ಲಿ ತಂದು ಕಸವನ್ನು ನದಿಗೆ ಸುರಿಯಲಾಗುತ್ತಿದೆ ಎಂದೂ ಜನರು ದೂರುತ್ತಿದ್ದಾರೆ.

ADVERTISEMENT

ಉಡುಪಿಯ ಕಿದಿಯೂರು ರಸ್ತೆ ಮೂಲಕ ಮಲ್ಪೆ ಕಡೆಗೆ ತೆರಳುವಾಗ ಸಿಗುವ ತೋಡುಗಳಿಗೂ ಸೇತುವೆಯಿಂದ ರಾಶಿ ರಾಶಿ ಕಸ ಸುರಿಯಲಾಗುತ್ತಿದೆ. ಇದರಿಂದ ಸುತ್ತಲಿನ ಪರಿಸರವೇ ದುರ್ಗಂಧಮಯವಾಗಿದೆ.

ಹೊಳೆಗಳಿಗೆ ನಿರ್ಮಿಸಿರುವ ಕೆಲವು ಕಿಂಡಿ ಅಣೆಕಟ್ಟೆಗಳ ಮೇಲಿನಿಂದ ನದಿಗೆ ಕಸ ಸುರಿಯಲಾಗುತ್ತಿದೆ. ಇಂದರಿಂದ ಇಂತಹ ಕಿಂಡಿ ಅಣೆಕಟ್ಟುಗಳಲ್ಲಿ ಬೇಸಿಗೆ ಕಾಲದ ಬಳಕೆಗೆ ಸಂಗ್ರಹಗೊಂಡಿರುವ ನೀರು ಸಂಪೂರ್ಣ ಕಲುಷಿತವಾಗುತ್ತಿದೆ. ಅದರಲ್ಲಿರುವ ಜಲಚರಗಳು ನಿರ್ನಾಮವಾಗುತ್ತಿವೆ. ಕೆಲವು ಹೋಟೆಲ್‌ನವರು, ಕೋಳಿ ಅಂಗಡಿಯವರು ತ್ಯಾಜ್ಯವನ್ನು ನದಿಗೆ ಎಸೆಯುತ್ತಿದ್ದಾರೆ ಎಂಬ ಆರೋಪಗಳೂ ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ.

ಯಾವೆಲ್ಲ ಸೇತುವೆಗಳಿಂದ ಕಸ ಎಸೆಯುತ್ತಾರೋ ಅಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ, ಕಸ ಎಸೆಯುವವರನ್ನು ಪತ್ತೆ ಹಚ್ಚಿ ಸಂಬಂಧಪಟ್ಟವರು ದಂಡ ವಿಧಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ನದಿ, ತೋಡುಗಳಲ್ಲಿ ಸಂಗ್ರಹಗೊಂಡಿರುವ ನೀರು ಕಲುಷಿತಗೊಳ್ಳುವುದರಿಂದ ಸಮೀಪ ಪ್ರದೇಶಗಳ ಬಾವಿಗಳ ನೀರೂ ಮಲಿನಗೊಳ್ಳುತ್ತಿವೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಇದಕ್ಕೆ ಕಡಿವಾಣ ಹಾಕದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸಬೇಕಾಗಬಹುದು ಎನ್ನುತ್ತಾರೆ ನಾಗರಿಕರು.

ಪೂರಕ ಮಾಹಿತಿ: ವಾಸುದೇವ ಭಟ್‌, ಸುಕುಮಾರ್ ಮುನಿಯಾಲ್‌, ಹಮೀದ್‌ ಪಡುಬಿದ್ರಿ, ವಿಶ್ವನಾಥ ಆಚಾರ್ಯ

_________

ಹೆಬ್ರಿ ತಾಲ್ಲೂಕಿನ ಕುಚ್ಚೂರು ಮಠದಬೆಟ್ಟು ಸೇತುವೆ ಬಳಿ ಸೀತಾನದಿಗೆ ಕೋಳಿ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಬೇಕು. ಇಂತಹ ಘಟನೆ ಮರುಕಳಿಸಬಾರದು. ಸೀತಾನದಿ ಸಾವಿರಾರು ಮಂದಿಗೆ ಜೀವನದಿಯಾಗಿದೆ

-ಶ್ರೀಕಾಂತ್ ಪೂಜಾರಿ ಕುಚ್ಚೂರು ಸಾಮಾಜಿಕ ಹೋರಾಟಗಾರ

_________

ಕಾರ್ಕಳ ತಾಲ್ಲೂಕಿನ ಕಾಬೆಟ್ಟು ಚೋಲ್ಪಾಡಿಯಲ್ಲಿರುವ ತೋಡಿಗೆ ಆಟೋದಲ್ಲಿ ಸ್ಕೂಟರ್‌ನಲ್ಲಿ ಕಸ ತಂದು ಸುರಿಯಲಾಗುತ್ತದೆ. ಯಾರೂ ಕೇಳುವವರೇ ಇಲ್ಲ. ಮಳೆಗಾಲದಲ್ಲಿ ಇದರ ನೀರನ್ನು ಕೃಷಿಗೆ ಬಳಸಲಾಗುತ್ತದೆ

-ಸುಧಾಕರ ಪರಿಸರ ನಿವಾಸಿ

_________


ಉಡುಪಿ ನಗರದ ಕಲ್ಸಂಕದ ಬಳಿಯೇ ಇಂದ್ರಾಣಿ ನದಿಗೆ ಕಸ ಸುರಿಯಲಾಗುತ್ತಿದೆ. ಕಸ ಸುರಿಯುವವರ ವಿರುದ್ಧ ನಗರ ಸಭೆಯವರು ಕ್ರಮ ಕೈಗೊಳ್ಳಬೇಕು

-ಹರೀಶ್‌ ಗುಂಡಿಬೈಲು ನಿವಾಸಿ

_________


ಉಡುಪಿ ನಗರ ವ್ಯಾಪ್ತಿಯಲ್ಲಿ ನದಿ ತೋಡುಗಳಿಗೆ ಜನರು ರಾಶಿ ರಾಶಿ ಕಸ ಸುರಿಯುತ್ತಿದ್ದಾರೆ. ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಬಾವಿಗಳ ನೀರು ಕಲುಷಿತವಾಗಬಹುದು

-ಶ್ರೀನಿವಾಸ್‌ ಕಿದಿಯೂರು

‘ಜನರು ವಿವೇಚನೆಯಿಂದ ವರ್ತಿಸಬೇಕು’

ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಿದರೂ ಮತ್ತೆ ಮತ್ತೆ ಕಸ ಎಸೆಯಲಾಗುತ್ತಿದೆ. ಇಂದ್ರಾಣಿ ನದಿಗೂ ಕಸ ಸುರಿಯಲಾಗುತ್ತದೆ. ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಜನರು ಪರಿಸರಕ್ಕೆ ಹಾನಿಯುಂಟು ಮಾಡದೆ ವಿವೇಚನೆಯಿಂದ ವರ್ತಿಸಬೇಕು. ನಗರಸಭೆ ವತಿಯಿಂದ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತದೆ. ಜನರು ಕಸವನ್ನು ಅವರಿಗೆ ನೀಡಬೇಕು. ರಸ್ತೆ ಬದಿ ನದಿಗಳಿಗೆ ಎಸೆಯಬಾರದು. ಇಂದ್ರಾಣಿ ನದಿಯಲ್ಲಿನ ಕಸ ಕಡಲು ಸೇರದಂತೆ ಬಲೆ ಅಳವಡಿಸಲಾಗಿದೆ. ಅದರಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ ಬಾಟಲಿ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.

ಶಾಂಭವಿ ನದಿಗೂ ತ್ಯಾಜ್ಯ

ಕಾಪು: ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಪಡುಬಿದ್ರಿ ಕಲ್ಸಂಕದಲ್ಲಿ ಕೋಳಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಈ ಬಗ್ಗೆ ಎರ್ಮಾಳು ತೆಂಕ ಗ್ರಾಮ ಪಂಚಾಯಿತಿ ಎಚ್ಚರಿಕೆ ಫಲಕ ಅಳವಡಿಸಿದ್ದರೂ ದೂರದ ಊರುಗಳಿಂದ ಬರುವ ಜನರು ವಾಹನಗಳಲ್ಲಿ ಕೋಳಿ ಕುರಿ ಮಾಂಸಗಳ ತ್ಯಾಜ್ಯ ತಂದು ಸುರಿಯುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಲವು ಬಾರಿ ಕಸ ಎಸೆಯುವವರನ್ನು ಹಿಡಿದು ದಂಡ ವಿಧಿಸಿದರೂ ಮತ್ತೆ ಪುನರಾವರ್ತನೆಯಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಫಲಿಮಾರು ಗ್ರಾಮ ಪಂಚಾಯಿತಿಯ ಶಾಂಭವಿ ನದಿಗೂ ತ್ಯಾಜ್ಯ ಸುರಿಯುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದರಿಂದ ನದಿ ನೀರು ಮಲಿನವಾಗುವುದಲ್ಲದೆ ಪರಿಸರಕ್ಕೆ ಮಾರಕವಾಗಿದೆ ಎಂದು ದೂರಿದ್ದಾರೆ.

ಕಲುಷಿತಗೊಳ್ಳುತ್ತಿದೆ ಸೀತಾನದಿ

ಹೆಬ್ರಿ: ತಾಲ್ಲೂಕಿನ ಬಹುತೇಕ ರಸ್ತೆಗಳ ಬದಿಗೆ ಗೋಣಿ ಚೀಲಗಳಲ್ಲಿ ಕೋಳಿ ತ್ಯಾಜ್ಯ ತುಂಬಿ ಎಸೆಯಲಾಗುತ್ತಿದೆ. ಹೆಚ್ಚಾಗಿ ರಾತ್ರಿ ಹೊತ್ತಿನಲ್ಲೇ ಬಂದು ಎಸೆದು ಹೋಗಲಾಗುತ್ತಿದೆ. ಅಲ್ಲಲ್ಲಿ ತ್ಯಾಜ್ಯ ಎಸೆಯದಂತೆ ಗ್ರಾಮ ಪಂಚಾಯಿತಿ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಎಸೆಯುವುದು ಮಾಮೂಲಿಯಾಗಿದೆ. ಈಚೆಗೆ ಹೆಬ್ರಿಯ ಸೀತಾನದಿಗೆ ಕುಚ್ಚೂರು ಮಠದಬೆಟ್ಟು ಸೇತುವೆ ಬಳಿ ಕೋಳಿ ತ್ಯಾಜ್ಯ ಎಸೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸೀತಾನದಿ ಹೆಬ್ರಿ ಪರಿಸರದ ಜನರಿಗೆ ಜೀವನದಿಯಾಗಿದ್ದು ಕುಡಿಯಲು ಕೂಡ ಇದರ ನೀರನ್ನೇ ಉಪಯೋಗಿಸಲಾಗುತ್ತದೆ. ಹೆಬ್ರಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ಈ ನದಿಯ ನೀರನ್ನೇ ಬಳಸಲಾಗುತ್ತಿದೆ. ತ್ಯಾಜ್ಯ ಸುರಿಯುತ್ತಿರುವುದರಿಂದ ನೀರು ದುರ್ಗಂಧ ಬೀರುತ್ತಿದ್ದು ಬಳಸಲು ಸಾಧ್ಯವಾಗದಂತಾಗಿದೆ ಎನ್ನುತ್ತಾರೆ ಸ್ಥಳೀಯರು. ಗ್ರಾಮ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಅರಣ್ಯ ಇಲಾಖೆ ಅಥವಾ ಸಂಬಂಧಿಸಿದ ಇಲಾಖೆಯವರು ಕೋಳಿ ಅಂಗಡಿಯವರನ್ನು ಕರೆದು ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನದಿಯ ಒಡಲಿಗೆ ಘನ ತ್ಯಾಜ್ಯ

ಕಾರ್ಕಳ: ತಾಲ್ಲೂಕಿನ ಕಾಬೆಟ್ಟು ಚೋಲ್ಪಾಡಿಯಲ್ಲಿರುವ ಮುಗ್ಗೇರ ಗುಂಡಿಯಲ್ಲಿ ತೋಡಿಗೆ ಆಹಾರ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿ ಬಟ್ಟೆ ಸೇರಿದಂತೆ ಕಸ ಸುರಿಯಲಾಗುತ್ತಿದೆ. ಈ‌ ತ್ಯಾಜ್ಯಭರಿತ ನೀರು ಹರಿದು ಪಳ್ಳಿ ಗ್ರಾಮದ ನದಿಗೆ ಹೋಗಿ ಸೇರುತ್ತದೆ. ಪುರಸಭೆ ವ್ಯಾಪ್ತಿಗೆ ಸೇರುವ ಈ ತೊರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವತ್ತ ಆಡಳಿತ ಮುತುವರ್ಜಿ ವಹಿಸದಿದ್ದರೆ ಮುಂದೆ ರೋಗ ರುಜಿನ ಪಸರಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.

ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಕೆ

ಬೈಂದೂರು: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಿಜೂರು ಸೌಪರ್ಣಿಕಾ ನದಿ ತೀರದಲ್ಲಿ ಈ ಹಿಂದೆ ಕೋಳಿ ತ್ಯಾಜ್ಯ ಪ್ಲಾಸ್ಟಿಕ್ ಕಸ ಎಸೆಯಲಾಗುತ್ತಿತ್ತು. ಈ ಭಾಗದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದ ಬಳಿಕ ಸ್ವಲ್ಪ ಹತೋಟಿಗೆ ಬಂದಿದೆ. ‘ಈಗಾಗಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 14 ಕಡೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ ಮಯ್ಯಾಡಿ ಮದ್ದೋಡಿ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ ಎಸೆಯುವವರ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.