ಉಡುಪಿ: ಏಕ ವಿನ್ಯಾಸ ನಕ್ಷೆ ನೀಡುವಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಒಬಿಸಿ ಮೋರ್ಚಾ ವತಿಯಿಂದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಸರ್ಕಾರ ಗುರಿಯಾಗಿಸುತ್ತಿದೆ. ಬಡವರು ಮನೆ ಕಟ್ಟಲು ಹೋದರೆ 9/11, ಏಕವಿನ್ಯಾಸ ನಕ್ಷೆ ಹೆಸರಿನಲ್ಲಿ ಸಮಸ್ಯೆ ಅನುಭವಿಸುವಂತಾಗಿದೆ. ಇದರಿಂದ ಕಾರ್ಮಿಕರಿಗೂ ದುಡಿಮೆ ಇಲ್ಲದಂತಾಗಿದೆ ಎಂದರು.
ಇಲ್ಲಿನ ಜನರು ಎಷ್ಟೇ ಪ್ರತಿಭಟನೆ ಮಾಡಿದರೂ ಸಚಿವರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ. ಅವರ ಕಣ್ಣು ತೆರೆಸುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಹೇಳಿದರು.
9/11, ಏಕ ವಿನ್ಯಾಸ ನಕ್ಷೆ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದ ಐವರು ಶಾಸಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. 9/11 ನೀಡುವ ಅಧಿಕಾರವನ್ನು ಮತ್ತೆ ಪಂಚಾಯಿತಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಬಡವರು ಮನೆ ಕಟ್ಟದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದರು.
ಕಾಂಗ್ರೆಸ್‌ನವರು ಪಂಚ ಗ್ಯಾರಂಟಿಗಳನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ಗ್ಯಾರಂಟಿ ಬಿಟ್ಟು ಬೇರೆ ಯಾವುದನ್ನೂ ಕೊಡುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದೂ ಹೇಳಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ಏಕ ವಿನ್ಯಾಸ ನಕ್ಷೆ ವಿಚಾರದಲ್ಲಿ ಗ್ರಾಮೀಣ ಸ್ಥಳೀಯಾಡಳಿತದ ಹಕ್ಕನ್ನು ಸರ್ಕಾರವು ನಗರಾಡಳಿತಕ್ಕೆ ನೀಡಿದೆ. ಇದರಿಂದಾಗಿ ಜನಸಮಾನ್ಯರು ಐದಾರು ತಿಂಗಳು ಕಚೇರಿಗಳಿಗೆ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಮಟ್ಟಾರು ರತ್ನಾಕರ ಹೆಗ್ಡೆ, ಉದಯ್ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ವಿಜಯ್ ಕೊಡವೂರು ಉಪಸ್ಥಿತರಿದ್ದರು.
ಕರಾವಳಿಯ ಮೂರು ಜಿಲ್ಲೆಗಳ ಹೆಚ್ಚಿನ ಜನರಲ್ಲಿ ತುಂಡು ಭೂಮಿಯಿದ್ದು 9/11 ಏಕ ವಿನ್ಯಾಸ ನಕ್ಷೆ ಸಿಗುವುದು ವಿಳಂಬವಾಗುತ್ತಿರುವುದರಿಂದ ಜನರಿಗೆ ಮನೆ ಕಟ್ಟಲು ಸಮಸ್ಯೆಯಾಗುತ್ತಿದೆ– ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.