ADVERTISEMENT

ಸಂತ್ರಸ್ತರಿಗೆ ಏಕರೂಪದ ಪರಿಹಾರ ಸಿಗಲಿ: ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 7:17 IST
Last Updated 12 ಜೂನ್ 2021, 7:17 IST
ಎಂಡೋ ಸಲ್ಫಾನ್ ಬಾಧಿತ ವ್ಯಕ್ತಿ
ಎಂಡೋ ಸಲ್ಫಾನ್ ಬಾಧಿತ ವ್ಯಕ್ತಿ   

ಉಡುಪಿ: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಸರ್ಕಾರದ ಸೌಲಭ್ಯ ನೀಡಲು ದೋಷ ರಹಿತ ಸಮಗ್ರ ಕ್ರಿಯಾ ಯೋಜನೆ ರೂಪಿಸುವಂತೆ ‘ಮಾನಸಿಕ ಅಸ್ವಸ್ಥರು ಹಾಗೂ ಅಂಗವಿಕಲರ ಕಾನೂನು ನೆರವು ಯೋಜನೆ 2015ರ’ ಅನುಷ್ಠಾನದ ಹೊಣೆ ಹೊತ್ತಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನಕ್ಕೆ ತಿಳಿಸಿದರು.

ಈಚೆಗೆ ಕರಾವಳಿ ಮೂರು ಜಿಲ್ಲೆಗಳ ಕಾನೂನು ಪ್ರಾಧಿಕಾರದ ಕಾರ್ಯದರ್ಶಿಗಳ ಜತೆ ವಿಡಿಯೊ ಕಾನ್ಫರೆನ್ಸ್‌ ನಡೆಸಿದ ಅವರು ಎಂಡೋ ಸಂತ್ರಸ್ತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.

ಕರಾವಳಿ ಮೂರು ಜಿಲ್ಲೆಗಳಲ್ಲಿ ಎಂಡೋ ಸಂತ್ರಸ್ತರಿಗೆ ಪರಿ ಹಾರ, ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವಲ್ಲಿ ಅಸಮಾನತೆ ಇದ್ದು, ಏಕರೂಪತೆ ಇರಬೇಕು. ಎಂಡೋಸಲ್ಫಾನ್ ಕೀಟನಾಶಕದಿಂದ ರೋಗಗ್ರಸ್ತರಾಗಿ ನರಳುತ್ತಿರುವ ಹಲವರನ್ನು ಸಂತ್ರಸ್ತರ ಪಟ್ಟಿಗೆ ಸೇರಿಸಿಲ್ಲ. ಪರಿಣಾಮ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂದು ಸಭೆಯಲ್ಲಿ ಫಣೀಂದ್ರ ಅವರ ಗಮನಕ್ಕೆ ತರಲಾಯಿತು.

ADVERTISEMENT

1980ರಿಂದ 20 ವರ್ಷಗಳ ಕಾಲ ಗೇರು ಅಭಿವೃದ್ಧಿ ನಿಗಮದಿಂದ ಟನ್‍ಗಟ್ಟಲೆ ಎಂಡೋಸಲ್ಫಾನ್ ಸುರಿದ ಪರಿಣಾಮ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳ 450ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ 8,600ಕ್ಕೂ ಹೆಚ್ಚು ಮಂದಿ ಬಾಧಿತರಾಗಿದ್ದಾರೆ. ಸಾವಿರಾರು ಮಕ್ಕಳು ಹುಟ್ಟಿನಿಂದಲೇ ಅಂಗವಿಕಲರಾಗಿ ಜನಿಸಿದ್ದಾರೆ. ಹಲವರು ಕ್ಯಾನ್ಸರ್, ಅಸ್ತಮಾ, ಮೂರ್ಛೆರೋಗ, ಖಿನ್ನತೆ ಹಾಗೂ ಹಾರ್ಮೋನ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಚರ್ಚೆಯಾಯಿತು.

ಪಾಲನಾ ಕೇಂದ್ರ ತೆರೆದಿಲ್ಲ: ಸಂತ್ರಸ್ತರ ಪಾಲನೆ ಪೋಷಣೆಗೆ ಹಳ್ಳಿಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಪುನರ್ವಸತಿಗಾಗಿ ಪಾಲನಾ ಕೇಂದ್ರ ತೆರೆಯುವಂತೆ 2013ರಲ್ಲಿ ಸರ್ಕಾರ ಆದೇಶಿಸಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಹೈಕೋರ್ಟ್‌ 2014ರಲ್ಲಿ ನೀಡಿದ ತೀರ್ಪಿನಂತೆ ಶೇ 25ರಿಂದ 60ರಷ್ಟು ಅಂಗವಿಕಲತೆ ಹೊಂದಿದ್ದರೆ ಮಾಸಿಕ ₹ 1500, ಶೇ 60ಕ್ಕಿಂತಲೂ ಹೆಚ್ಚಿನ ಅಂಗವಿಕಲತೆ ಉಳ್ಳವರಿಗೆ ಮಾಸಿಕ ₹ 3000 ಸಹಾಯಧನ ನೀಡಲು ಸೂಚಿಸಲಾಗಿತ್ತು.

ಆದರೆ, 2000 ಕ್ಕಿಂತಲೂ ಹೆಚ್ಚಿನ ಎಂಡೋ ಸಂತ್ರಸ್ತರು ಕ್ಯಾನ್ಸರ್, ಮೂರ್ಛೆರೋಗ, ಸ್ಕಿಜೋಫ್ರೇನಿಯಾ, ಖಿನ್ನತೆ, ಮಾರಕ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಅಂಗವಿಕಲತೆ ಪ್ರಮಾಣ ಶೇ 25ಕ್ಕಿಂತಲೂ ಕಡಿಮೆ ಇರುವ ಕಾರಣ ಮಾಸಾಶನದಿಂದ ವಂಚಿತರಾಗಿದ್ದಾರೆ. ಇವರಿಗೂ ಮಾಸಾಶನ ನೀಡಬೇಕು ಎಂಬ ಅಂಶವನ್ನು ಸಮಿತಿ ಒಪ್ಪಿಕೊಂಡಿತು. ಜತೆಗೆ ಪ್ರಸ್ತಾವ ಸಲ್ಲಿಸುವಂತೆ ಮಾನಸಿಕ ವೈದ್ಯ ಡಾ.ಚಂದ್ರಶೇಖರ್ ಅವರಿಗೆ ತಿಳಿಸಲಾಯಿತು.

ಸಂತ್ರಸ್ತರಿಗೆ ಫಿಸಿಯೋ ಚಿಕಿತ್ಸೆ ನೀಡಲು ಸಂಚಾರಿ ಕ್ಲಿನಿಕ್‌ಗಳಿದ್ದು, ಇವುಗಳ ಬದಲಿಗೆ 5 ಅಥವಾ 6 ಹಳ್ಳಿಗಳಿಗೆ ಒಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋ ಥೆರಪಿ ಉಪಕರಣಗಳನ್ನು ಹಾಕಿ ಚಿಕಿತ್ಸೆ ನೀಡುವಂತೆ ಮನವಿ ಮಾಡಲಾಯಿತು.

ಏಕರೂಪ ಇಲ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 25ರಿಂದ 59ರಷ್ಟು ಅಂಗವಿಕಲತೆ ಇದ್ದವರಿಗೆ ₹ 1500 ಹಾಗೂ ಶೇ 60ಕ್ಕಿಂತ ಹೆಚ್ಚಿನ ಅಂಗವಿಕಲತೆ ಇದ್ದರೆ ₹ 3000 ಮಾಸಾಶನ ಸಿಗುತ್ತಿದ್ದು, ಉಡುಪಿಯಲ್ಲಿ ಮಾತ್ರ ಶೇ 61ರಷ್ಟು ಅಂಗವಿಕಲತೆ ಇದ್ದವರಿಗೆ ಮಾತ್ರ 3000 ಮಾಸಾಶನಕ್ಕೆ ಶಿಫಾರಸು ಮಾಡಲಾಗುತ್ತಿದೆ. ಈ ತಾರತಮ್ಯ ಬಗೆಹರಿಸುವಂತೆ ಸಭೆಯಲ್ಲಿ ಪ್ರತಿಷ್ಠಾನ ಮನವಿ ಮಾಡಿತು.

ಸಂತ್ರಸ್ತರ ವಿವರಕ್ಕೆ ಆಹ್ವಾನ

ಸೂಕ್ತ ಪರಿಹಾರ ಸಿಗದೆ ಅನ್ಯಾಯಕ್ಕೊಳಗಾಗಿರುವ ಉಡುಪಿ, ಕಾರವಾರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಎಂಡೋ ಸಂತ್ರಸ್ತರು ಶೀಘ್ರ ರೋಗ ವಿವರಗಳನ್ನು ವೈದ್ಯರ ದೃಢಪತ್ರ ಸಹಿತ ಡಾ. ರವೀಂದ್ರನಾಥ ಶಾನುಭಾಗ್ (8971033582), ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರು, ಮೊದಲ ಮಹಡಿ, ವೈಕುಂಠ ಬಾಳಿಗಾ ಕಾನೂನು ಕಾಲೇಜು, ಕುಂಜಿಬೆಟ್ಟು, ಉಡುಪಿ-576 102 ವಿಳಾಸಕ್ಕೆ ಕಳುಹಿಸಬಹುದು.

ಮಾಸಾಶನ ಹೆಚ್ಚಳಕ್ಕೆ ಒಪ್ಪಿಗೆ

ಎಂಡೋ ಸಂತ್ರಸ್ತರಿಗೆ 2014 ರಲ್ಲಿ ನಿಗದಿಪಡಿಸಿದ್ದ ಮಾಸಾಶನವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ತಿಂಗಳಿಗೆ ₹ 1500 ಪಡೆಯುತ್ತಿದ್ದ ಸಂತ್ರಸ್ತರಿಗೆ ₹ 2000 ಹಾಗೂ ₹ 3000 ಪಡೆಯುತ್ತಿದ್ದವರಿಗೆ ₹ 4000ಕ್ಕೆ ಹೆಚ್ಚಿಸಲಾಗಿ. ಶೇ 60 ಅಂಗವಿಕಲತೆ ಇರುವ ಮೂರೂ ಜಿಲ್ಲೆಗಳ ಎಂಡೋ ಸಂತ್ರಸ್ತರು ₹ 4000 ಮಾಸಾಶನ ಪಡೆಯಲು ಅರ್ಹರು ಎಂದು ಸಭೆಯಲ್ಲಿ ಪಿಂಚಣಿ ಇಲಾಖೆಯ ಕಮೀಷನರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.