ADVERTISEMENT

ಬೈಂದೂರು: ಸಂಭ್ರಮದ ಉಪ್ಪುಂದ ಕೊಡಿಹಬ್ಬ

ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ: ವಾರ್ಷಿಕ ಮನ್ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 7:04 IST
Last Updated 6 ಡಿಸೆಂಬರ್ 2025, 7:04 IST
ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು.
ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು.   

ಬೈಂದೂರು: ಉಪ್ಪುಂದದ ಇತಿಹಾಸ ಪ್ರಸಿದ್ದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಮನ್ಮಹಾರಥೋತ್ಸವ ‘ಉಪ್ಪುಂದ ಕೊಡಿಹಬ್ಬ’ ಶುಕ್ರವಾರ ಸಂಭ್ರಮದಿಂದ ಜರುಗಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಪ್ರಭಾರ ಕಾರ್ಯನಿರ್ವಹಣಾಕಾರಿ ರಮೆಶ ಆರ್. ಜೆ. ಅವರ ಉಸ್ತುವಾರಿ ಹಾಗೂ ತಂತ್ರಿ ಗೋಕರ್ಣ ಶ್ರೀನಿವಾಸ ಅಡಿಗ ಮಾರ್ಗದರ್ಶನದಲ್ಲಿ ಉಪ್ಪುಂದ ದೇವಳದ ಪ್ರಧಾನ ಅರ್ಚಕ ಪ್ರಕಾಶ ಉಡುಪ ನೇತೃತ್ವದ ವೈದಿಕ ತಂಡದವರಿಂದ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಭೂತಬಲಿ, ರಥಶುದ್ಧಿ ಹೋಮ ನಂತರ ರಥಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ನಡೆದವು.

ದೇವಳದ ಸಭಾಭವನದಲ್ಲಿ ಮಧ್ಯಾಹ್ನ ಸಾವಿರಾರು  ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ರಥ ಎಳೆದು ಸಂಭ್ರಮಿಸಿದರು.

ADVERTISEMENT

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ಖಾರ್ವಿ, ರಾಮ ಎಸ್., ಲಲಿತಾ ಅರುಣ್‌ಕುಮಾರ್ ಶೆಟ್ಟಿ, ಅಂಬಿಕಾ ದೇವಾಡಿಗ, ಯು. ರವೀಂದ್ರ ಪ್ರಭು, ಜನಾರ್ದನ ಮಾಚ ಪೂಜಾರಿ, ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಗ್ರಾ.ಪಂ. ಅಧ್ಯಕ್ಷ ಮೋಹನಚಂದ್ರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಗ್ರಾಮದೇವತೆ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ನ.30ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ದೇವಳದ ಮನವಿ ಮೇರೆಗೆ ಊರಿನ ವರು, ಭಕ್ತಾದಿಗಳು ಸೇರಿ ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು.

ಉಪ್ಪುಂದ ಜಾತ್ರೆಯು ಉಪ್ಪುಂದ ಕೊಡಿಹಬ್ಬ ಎಂದೇ ಪ್ರಸಿದ್ದಿ ಪಡೆದಿದ್ದು, ಈ ಕೊಡಿಹಬ್ಬದಲ್ಲಿ ಕಬ್ಬಿನ ಜಲ್ಲೆಗಳನ್ನು ಮನೆಗೆ ಒಯ್ಯುವ ಸಂಪ್ರದಾಯವಿದೆ ಅದರಂತೆ ನೂತನ ದಂಪತಿಗಳು ಕಬ್ಬಿನ ಜಲ್ಲೆಗಳನ್ನು ಖರೀದಿಸಿ ಸಂಭ್ರಮಿಸಿದರು.

ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಕುಂದಾಪುರ ಡಿವೈಎಸ್‌ಪಿ ಎಚ್. ಡಿ. ಕುಲಕರ್ಣಿ ಮಾರ್ಗದರ್ಶನದಲ್ಲಿ ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ. ಎನ್. ಮತ್ತು ನವೀನ್ ಬೋರ್ಕರ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಶನಿವಾರ ರಾತ್ರಿ ದೇವರ ಅವಭೃತಸ್ನಾನ ನಡೆಯಲಿದ್ದು, ಭಾನುವಾರ ಧ್ವಜಾಅವರೋಹಣದ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

Highlights - ರಥೋತ್ಸವದಲ್ಲಿ ನೂರಾರು ಭಕ್ತರು ಭಾಗಿ ರಥ ಎಳೆದು ಸಂಭ್ರಮಿಸಿದ ಜನ

ಮೀನುಗಾರರ ಆರಾಧ್ಯ ದೇವತೆ

ಕರಾವಳಿಯ ತೀರ ಪ್ರದೇಶದಲ್ಲಿರುವ ಈ ದೇವಸ್ಥಾನಕ್ಕೆ ಮೀನುಗಾರರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.  ಎಲ್ಲಿಯೇ ನೆಲೆಸಿದ್ದರೂ ವಾರ್ಷಿಕ ಜಾತ್ರೆಗೆ  ಬಂದು ದೇವಿಯ ದರ್ಶನ ಮಾಡುವ ಸಂಪ್ರದಾಯವನ್ನು ಇಲ್ಲಿನ ಹೆಚ್ಚಿನ ಮೀನುಗಾರರು ರೂಢಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.