ADVERTISEMENT

ಪರ್ಕಳ ಹೆದ್ದಾರಿ ಕಾಮಗಾರಿ ಶೀಘ್ರ ಮುಗಿಸಿ

ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 15:51 IST
Last Updated 8 ಫೆಬ್ರುವರಿ 2023, 15:51 IST
ಉಡುಪಿ ತಾಲ್ಲೂಕು ಕಚೇರಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿದರು.
ಉಡುಪಿ ತಾಲ್ಲೂಕು ಕಚೇರಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿದರು.   

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ‘ಎ’ ತೀರ್ಥಹಳ್ಳಿ-ಉಡುಪಿ ಚತುಷ್ಪಥ ರಸ್ತೆ ಕಾಮಗಾರಿಗೆ ಪರ್ಕಳ ವ್ಯಾಪ್ತಿಯಲ್ಲಿ ಎದುರಾಗಿರುವ ಎಲ್ಲ ಅಡೆತಡೆಗಳನ್ನು ಶೀಘ್ರದಲ್ಲಿ ಬಗೆಹರಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ ನೀಡಿದರು.

ಉಡುಪಿ ತಾಲ್ಲೂಕು ಕಚೇರಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ಸಂಬಂಧ ನಡೆದ ಸಭೆಯಲ್ಲಿ ಪರ್ಕಳ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಸದಂತೆ ನ್ಯಾಯಾಲಯದಿಂದ ತಡೆ ತರಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕಾಮಗಾರಿ ಅನುಷ್ಠಾನಕ್ಕೆ ಈಗಾಗಲೇ ಸಾರ್ವಜನಿಕ ಹಣವನ್ನು ವ್ಯಯಿಸಲಾಗಿದೆ. ಕಾಮಗಾರಿ ಸ್ಥಗಿತಗೊಂಡರೆ ಮಳೆಗಾಲ ಶುರುವಾಗಿ ಇದುವರೆಗೆ ಮಾಡಿರುವ ಕಾಮಗಾರಿ ಹಾಳಾಗಲಿದೆ. ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ವಕೀಲರ ಮೂಲಕ ಕಾನೂನಾತ್ಮಕ ವಿಚಾರಗಳನ್ನು ಚರ್ಚಿಸಿ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಿ, ಕಾಮಗಾರಿ ಸುಗಮವಾಗಿ ನಡೆಯಲು ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ADVERTISEMENT

169 ‘ಎ’ ತೀರ್ಥಹಳ್ಳಿ-ಉಡುಪಿ ಚತುಷ್ಪಥ ರಸ್ತೆ ಕಾಮಗಾರಿಯ ಭೂ-ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಮಿ ಮಾಲೀಕರಿಗೆ ಸೂಕ್ತ ಪರಿಹಾರದ ಮೊತ್ತವನ್ನು ಆದ್ಯತೆಯಲ್ಲಿ ನೀಡಬೇಕು. ಭೂ-ಸ್ವಾಧೀನಕ್ಕೆ ಸಂಬಂಧಪಟ್ಟ ದಾಖಲೆಗಳಲ್ಲಿ ದೋಷಗಳಿದ್ದಲ್ಲಿ ತಕ್ಷಣ ಇತ್ಯರ್ಥಪಡಿಸಬೇಕು ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.

ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಕಾಮಗಾರಿ ನಡೆಸಲು ಇದ್ದ ಸಮಸ್ಯೆಗಳು ಇತ್ಯರ್ಥಗೊಂಡಿದ್ದು, ಕಾಮಗಾರಿ ನಿರ್ವಹಣೆಗೆ ಒಂದು ವಾರದಲ್ಲಿ ಆದೇಶ ಬರಲಿದೆ. ಮಾರ್ಚ್ ಒಳಗೆ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಸಭೆಗೆ ತಿಳಿಸಿದರು.

ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಉಡುಪಿ ತಹಶೀಲ್ದಾರ್ ಭೀಮಸೇನ, ಪೌರಾಯುಕ್ತ ಡಾ.ಉದಯ್ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ 169 ಎ ಎಂಜಿನಿಯರ್ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.