ADVERTISEMENT

ಸುದ್ದಿಯಲ್ಲಿ ವಾಸ್ತವಾಂಶ, ಜವಾಬ್ದಾರಿ ಇರಲಿ: ಜಯಪ್ರಕಾಶ ಹೆಗ್ಡೆ

ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ತಶಸ್ತಿ ಪ್ರದಾನ ಸಮಾರಂಭದಲ್ಲಿ ಜಯಪ್ರಕಾಶ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 7:02 IST
Last Updated 5 ಜನವರಿ 2026, 7:02 IST
ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.   

ಬ್ರಹ್ಮಾವರ: ಪತ್ರಿಕೆ, ಮಾಧ್ಯಮಗಳು ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತವೆ. ಆದ್ದರಿಂದ ಸಮಾಜಕ್ಕೆ ತೊಂದರೆಯಾಗದ ರೀತಿಯಲ್ಲಿ ನೈಜತೆಯ ಸುದ್ದಿಯನ್ನು ನೀಡಬೇಕು. ಬರವಣಿಗೆಯಲ್ಲಿ ಜವಾಬ್ದಾರಿ ಮತ್ತು ವಾಸ್ತವಾಂಶ ಇರಬೇಕು ಎಂದು ಮುಖಂಡ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಸಾಸ್ತಾನ ಪಾಂಡೇಶ್ವರದ ಕೋಸ್ಟಲ್ ಪ್ಯಾರಡೈಸ್ ಅನುಗ್ರಹ ಸಭಾಂಗಣದಲ್ಲಿ ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ವಡ್ಡರ್ಸೆ ಅವರು ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದರು ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಪತ್ರಿಕಾ ರಂಗಕ್ಕೆ ಮೌಲ್ಯ ತಂದು ಕೊಟ್ಟವರು. ಇಂದಿನ ಪತ್ರಕರ್ತರಿಗೆ ಮಾದರಿ, ಪ್ರೇರಕರಾಗಿದ್ದಾರೆ ಎಂದು ಹೇಳಿದರು.

ADVERTISEMENT

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಣತೆ ವಹಿಸಿದ್ದರು. ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಯ್ದ ಪತ್ರಕರ್ತರನ್ನು ಗೌರವಿಸಲಾಯಿತು. ಚಿದಂಬರ ಬೈಕಂಪಾಡಿ ಅವರು ‘ಮುಂಗಾರು’ವಿನ ನೆನಪುಗಳನ್ನು ಬಿಚ್ಚಿಟ್ಟರು. ಉಪನ್ಯಾಸಕ ಪ್ರಶಾಂತ್ ನೀಲಾವರ ಅವರು ಹಳೆಯ ‘ಮುಂಗಾರು’ ಪತ್ರಿಕೆ ಕೊಡುಗೆ ನೀಡಿದರು.

ಬ್ರಹ್ಮಾವರ ಬಂಟರ ಸಂಘದ ಸಂಚಾಲಕ‌ ಬಿ. ಭುಜಂಗ ಶೆಟ್ಟಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರತಿನಿಧಿ ಆಸ್ಟ್ರೊ ಮೋಹನ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,‌ ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ
ಭಾಗವಹಿಸಿದ್ದರು.

ಕಾರ್ಯಕ್ರಮ ಸಂಚಾಲಕ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ ಕಿರಣ್ ತುಂಗ ವಂದಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.

ಪತ್ರಿಕೋದ್ಯಮ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತದೆ
ಯಶ್‌ಪಾಲ್ ಸುವರ್ಣ ಶಾಸಕ