ADVERTISEMENT

ಕಾರ್ಕಳ | ‘ವನಗಿರಿಯ ರಂಗು’ ಚಿತ್ರಕಲೆ, ಪರಿಸರ‌ ಪಾಠ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಕಲಾವಿದೆ ರಕ್ಷಾ ಪೂಜಾರಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 6:29 IST
Last Updated 21 ಸೆಪ್ಟೆಂಬರ್ 2024, 6:29 IST
ಸರ್ಕಾರಿ ಶಾಲೆಯೊಂದರಲ್ಲಿ ಚಿತ್ರಕಲೆ ಕಲಿಸುತ್ತಿರುವ ರಕ್ಷಾ ಪೂಜಾರಿ
ಸರ್ಕಾರಿ ಶಾಲೆಯೊಂದರಲ್ಲಿ ಚಿತ್ರಕಲೆ ಕಲಿಸುತ್ತಿರುವ ರಕ್ಷಾ ಪೂಜಾರಿ   

ಕಾರ್ಕಳ: ಕುದುರೆಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ‘ವನಗಿರಿಯ ರಂಗ’ ಕಾರ್ಯಕ್ರಮದ ಮೂಲಕ ಉಚಿತವಾಗಿ ಚಿತ್ರಕಲೆ ಜೊತೆಗೆ ಪರಿಸರ ಪಾಠ ಕಲಿಸಿಕೊಡುವ ಹೊಸ ವಿಧಾನವೊಂದನ್ನು ಯುವತಿಯೊಬ್ಬರು ಕಂಡುಕೊಂಡಿದ್ದಾರೆ.

ಚಿತ್ರ ಕಲಾವಿದೆ ರಕ್ಷಾ ಪೂಜಾರಿ ಅವರು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಿಂದುಳಿದಿರುವ ಶಾಲೆಗಳಿಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಈ ವಿನೂತನ ವಿಧಾನದ ಮೂಲಕ ಚಿತ್ರಕಲೆ ಬಗ್ಗೆ ಆಸಕ್ತಿ‌ ಮೂಡಿಸುತ್ತಿದ್ದಾರೆ. ಈಗಾಗಲೇ ಕುಂದಾಪುರ ತಾಲ್ಲೂಕಿನ ಹಾಲಾಡಿ ಕೆಳಸುಂಕ ಶಾಲೆಯಲ್ಲಿ ‘ವನಗಿರಿ ರಂಗು’ ಬಣ್ದಣ ಗರಿಗಳನ್ನು ತೆರೆದುಕೊಂಡು ಚಾಲನೆಗೊಂಡಿದೆ.

ಚಿತ್ರಕಲೆ ಮಕ್ಕಳ ಕಲಿಕಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾ ಶಕ್ತಿ ಹೆಚ್ಚಿಸಲು ಸಹಕಾರಿ. ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳಾದ ಕಾರ್ಕಳ ತಾಲ್ಲೂಕಿನ ಶಿರ್ಲಾಲು, ಅಜೆಕಾರು, ಕೆರ್ವಾಶೆ, ಮಾಳ, ನೂರಾಲ್ಬೆಟ್ಟು, ನಾರಾವಿ, ಹೊಸ್ಮಾರು, ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿ, ಹೆಬ್ರಿ ತಾಲ್ಲೂಕಿನ ಹೆಬ್ರಿ, ನಾಡ್ಪಾಲು, ಮುದ್ರಾಡಿ, ಕಬ್ಬಿನಾಲೆ, ಮುನಿಯಾಲು, ಮುಟ್ಲುಪಾಡಿ, ಅಂಡಾರು, ಕುಂದಾಪುರ ತಾಲ್ಲೂಕಿನ ಅಮಾಸೆ ಬೈಲು, ಚಿಕ್ಕಮಗಳೂರಿನ ಕುದುರೆಮುಖ, ಕಳಸ, ಜಾಂಬಳೆ, ಸಂಸೆ, ಹೊರನಾಡು, ಶೃಂಗೇರಿ, ಕೊಗೆರೆ, ಕಿಗ್ಗ, ಶಿವಮೊಗ್ಗ ಜಿಲ್ಲೆಯ ಆಗುಂಬೆ ಹೊಸನಗರ ತಾಲ್ಲೂಕಿನ ಭಾಗಗಳ ಸರ್ಕಾರಿ ಶಾಲೆಗಳಿಗೆ ತೆರಳಿ ಚಿತ್ರಕಲೆ, ಪರಿಸರದ ಪಾಠ ಕಲಿಸಲು ಯೋಜನೆ ಹಾಕಿಕೊಂಡಿದ್ದಾರೆ.

ADVERTISEMENT

ಗ್ರಾಮೀಣ ಪ್ರದೇಶದ ಸರ್ಕಾರಿ‌ ಶಾಲಾ ಮಕ್ಕಳು ಚಿತ್ರಕಲೆಯಂತಹ ವಿಷಯಗಳಿಂದ ವಂಚಿತವಾಗಬಾರದು ಎಂಬುದು ಇವರ ಉದ್ದೇಶ. ಈಗಾಗಲೇ ರಕ್ಷಾ ಪೂಜಾರಿ ಬೆಂಗಳೂರು, ಮೈಸೂರು, ಕೊಲ್ಕತ್ತಾ ಸೇರಿದಂತೆ ದೇಶದಾದ್ಯಂತ ರಾಷ್ಟ್ರೀಯ ಮಟ್ಟದಲ್ಲಿ ನೂರಾರು ಕಲಾಕೃತಿಗಳ ಪ್ರದರ್ಶನ ನೀಡಿದ್ದಾರೆ. ವಿವಿಧ ಕಲಾಕೃತಿಗಳನ್ನು ರಚಿಸಿ ಮಾರಾಟ ಮಾಡುತ್ತಾರೆ. ಆಯಿಲ್ ಪೈಂಟಿಗ್, ವಾಲ್ ಮ್ಯೂರಲ್ಸ್, ವಾಲ್ ಪೈಂಟಿಂಗ್ ರಚನೆಯಲ್ಲಿ ಅವರು ಎತ್ತಿದ ಕೈ.

ಸಾಸ್ತಾನದ ವನ್ಯಜೀವಿ ಛಾಯಾಗ್ರಾಹಕ ಮನೋಜ್ ಭಂಡಾರಿ ಅವರು ತೆಗೆದಿರುವ ವಿವಿಧ ಕಾಡು ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣಾ ಪ್ರಬಂಧ ರಚನೆಯ ಮಾಹಿತಿ ಕಾರ್ಯಾಗಾರ ನಡೆಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರ, ಕಲಾಕೃತಿ ರಚನೆ ಕಾರ್ಯಾಗಾರಗಳು ಅವರ ಮನೋವಿಕಾಸಕ್ಕೂ ಕಾರಣವಾಗುತ್ತಿವೆ.

ರಕ್ಷಾ ಅವರು ಕಾಪು ರಮೇಶ್, ಶಶಿಕಲಾ ದಂಪತಿ ಪುತ್ರಿ. 500 ಶಾಲೆಗಳನ್ನು ತಲುಪುವ ಗುರಿ ಹೊಂದಿರುವ ಈಕೆ ಸ್ವಂತ ಖರ್ಚಿನಿಂದ ಚಿತ್ರಕಲೆಗೆ ಅವಶ್ಯವಾದ ವಸ್ತುಗಳನ್ನು ಖರೀದಿಸುತ್ತಿದ್ದು, ದಾನಿಗಳ ಸಹಾಯ ನಿರೀಕ್ಷಿಸುತ್ತಾರೆ.

ನನ್ನ ಕಲಾಪ್ರೇಮಕ್ಕೆ ತಂದೆ ತಾಯಿ ಸ್ಫೂರ್ತಿ. ಗೆಳೆಯರ ಪ್ರೋತ್ಸಾಹದಿಂದ ರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿಗಳ ಪ್ರದರ್ಶನ ನೀಡಲು ಸಾಧ್ಯವಾಗಿದೆ. ರಾಜ್ಯದ 80ಕ್ಕೂ ಹೆಚ್ಚು ಕಡೆ ಚಿತ್ರಕಲಾ ಶಿಬಿರ ಏರ್ಪಡಿಸಿದ್ದೇನೆ.
ರಕ್ಷಾ ಪೂಜಾರಿ, ಕಲಾವಿದೆ
ನಮ್ಮ ಮಗಳು ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲೆ ಕಲಿಸುವುದಕ್ಕೆ ಪೂರ್ಣ ಸಹಕಾರವಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಪರಿಸರ ಕಾಳಜಿ ಚಿತ್ರಕಲೆ ಕಲಿಸಿಕೊಡುವ ವಿನೂತನ ಪ್ರಯತ್ನ ಸಾಹಸದ ಬಗ್ಗೆ ಹೆಮ್ಮೆಯಿದೆ.
ರಮೇಶ್, ರಕ್ಷಾ ತಂದೆ
ವನಸಿರಿಯ ರಂಗು ಚಿಕ್ಕಮಕ್ಕಳಿಗೆ ಪಾಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.