ADVERTISEMENT

ಅಭಯ ನೀಡುವ ವೀರ ಮಾರುತಿ- 15 ಅಡಿ ಎತ್ತರದ ಬೃಹತ್ ಏಕಶಿಲಾ ವಿಗ್ರಹ ಮೂರ್ತಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 6:21 IST
Last Updated 6 ನವೆಂಬರ್ 2022, 6:21 IST
ಕಾರ್ಕಳ ವೆಂಕಟರಮಣ ದೇವಸ್ಥಾನದ ಎದುರಿನ ವೀರ ಮಾರುತಿ ದೇವಸ್ಥಾನ
ಕಾರ್ಕಳ ವೆಂಕಟರಮಣ ದೇವಸ್ಥಾನದ ಎದುರಿನ ವೀರ ಮಾರುತಿ ದೇವಸ್ಥಾನ   

ಕಾರ್ಕಳ: ಪಡು ತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ಎದುರು ವೀರ ಮಾರುತಿ ದೇವಸ್ಥಾನ ಇದ್ದು, ಕಾರ್ಕಳದ ಪಾವನ ಖ್ಯಾತಿಗೆ ಈ ದೇವಾಲಯವೂ ಕಾರಣವಾಗಿದೆ.

ದೇಗುಲದ ಮಹಿಮೆ: ರಾಮ ಭಕ್ತ ಹನುಮಂತನ ಸುಮಾರು 15 ಅಡಿ ಎತ್ತರದ ಬೃಹತ್ ಏಕಶಿಲಾ ವಿಗ್ರಹ ಮೂರ್ತಿಯು ಪ್ರಾಚೀನ ಮೂರ್ತಿಯಾಗಿದೆ. ಬಲಗೈಯನ್ನು ಮೇಲಕ್ಕೆತ್ತಿ ಎಡಗೈಯನ್ನು ಸೊಂಟದ ಮೇಲಿಟ್ಟು ನಡೆಯುವ ಭಂಗಿಯಲ್ಲಿದ್ದು ಬೀಸುವ ಗಾಳಿಗೆ ಜಡೆಯು ಹಾರಾಡುತ್ತಿದೆ. ಯಜ್ಞೋಪವೀತವು ಸ್ಫುಟವಾಗಿ ಗೋಚರಿಸುತ್ತಿದೆ. ರಾಮಾಯಣದ ಕಾಲದಲ್ಲಿ ತನ್ನ ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿದ ವೀರ ಮಾರುತಿಯು ತನ್ನನ್ನು ಆಶ್ರಯಿಸಿ ಬಂದ ಭಕ್ತರಿಗೆ ಅಭಯವನ್ನು ಕಲ್ಪಿಸುತ್ತಾನೆ. ಈ ವಿಗ್ರಹದ ಕಾಲ ಸುಮಾರು ಕ್ರಿ.ಶ. 1539. ಇಮ್ಮಡಿ ಭೈರರಸ ರಾಜನ ಕಾಲದಲ್ಲಿ ಇದು ಪ್ರತಿಷ್ಠೆಗೊಂಡಿರ ಬೇಕು ಎನ್ನುವುದು ಸಂಶೋಧಕರ ಊಹೆ.

ಪ್ರಸ್ತುತ ಇರುವ ವೀರ ಮಾರುತಿ ವಿಗ್ರಹ ಸ್ಥಳೀಯ ಆನೆಕೆರೆಯ ಭೂಮಿಯನ್ನು ಅಗೆಯುವಾಗ ದೊರಕಿದ್ದು ಎನ್ನುವುದು ಐತಿಹ್ಯ. ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಜೋಶಿ ಕುಟುಂಬದ ಆಡಳಿತಕ್ಕೆ ಒಳಪಟ್ಟಿದೆ. ಈ ವೀರ ಮಾರುತಿಯ ಮಹಿಮೆಗೆ ಮಣಿದು ಟಿಪ್ಪು ಸುಲ್ತಾನನು ಬೆಳ್ಳಿಯ ಆಭರಣವನ್ನು ಮಾಡಿಸಿಕೊಟ್ಟಿದ್ದ ಎನ್ನುವುದಕ್ಕೆ ಸಾಕ್ಷಿಯಾಗಿ ಇಂದಿಗೂ ವೀರ ಮಾರುತಿಯ ಕೊರಳಲ್ಲಿ ಆಭರಣವಿದೆ.

ADVERTISEMENT

ಇಂದಿಗೂ ಶುಭಶೋಭನಾದಿ ಕಾರ್ಯಗಳಿಗೆ ಹೊರಡುವಾಗ ಮಾರುತಿಯಲ್ಲಿ ಪ್ರಾರ್ಥನೆಯಿಟ್ಟು ಮುನ್ನಡೆದಲ್ಲಿ ಆ ಕಾರ್ಯ ಜಯ ಎಂದರ್ಥ. ಪ್ರಸ್ತುತ ದೇವಾಲಯದಲ್ಲಿ ವರ್ಷಂಪ್ರತಿ ಹಗಲು ರಾತ್ರಿ ಅಹರ್ನಿಶಿ ಸಪ್ತಾಹ ಭಜನಾ ಕಾರ್ಯಕ್ರಮ ನಡೆಯುತ್ತದೆ. ವೀರ ಮಾರುತಿ ದೇವಸ್ಥಾನದ ನವೀಕೃತ ಶಿಖರ ಪುನಃಪ್ರತಿಷ್ಠಾ ಕಾರ್ಯವನ್ನು ಕಾಶಿ ಮಠಾಧೀಶ ಸುಧೀಂದ್ರ ತೀರ್ಥರು ಮಾಡಿದ್ದಾರೆ.
ಕಾರ್ಕಳಕ್ಕೆ ಭೇಟಿ ನೀಡುವ ಪ್ರವಾಸಿಗಳು ವೀರ ಮಾರುತಿಯ ದರ್ಶನ ಪಡೆಯುತ್ತಾರೆ. ನಂಬಿದ ಭಕ್ತರಿಗೂ ಇದು ಇಂಬು ನೀಡುವ ಕ್ಷೇತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.