ADVERTISEMENT

‘ವಿಶ್ವಕರ್ಮರ ಜ್ಞಾನ ಮುಂದಿನ ಪೀಳಿಗೆಗೆ ತಲುಪಲಿ’

ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಯಶ್‌ಪಾಲ್‌ ಆಶಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 4:34 IST
Last Updated 18 ಸೆಪ್ಟೆಂಬರ್ 2025, 4:34 IST
ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕ ಯಶ್‌ಪಾಲ್‌ ಸುವರ್ಣ ಉದ್ಘಾಟಿಸಿದರು
ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕ ಯಶ್‌ಪಾಲ್‌ ಸುವರ್ಣ ಉದ್ಘಾಟಿಸಿದರು   

ಉಡುಪಿ: ಸರ್ವರ ಆರಾಧ್ಯ ದೈವ ವಿಶ್ವಕರ್ಮರ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಸರ್ಕಾರ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ 18 ವಿವಿಧ ಕುಲ ಕಸುಬುಗಳನ್ನು ಒಂದೆಡೆ ಸೇರಿಸಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿ ಮಾಡಲಾಗಿದೆ. ವಿಶ್ವಕರ್ಮ ಸಮಾಜದ ಪರಂಪರಾಗತ ಜ್ಞಾನವನ್ನು ಮುಂದಿನ ಪೀಳಿಗೆಗೆ ತಿಳಿಸಿ ಕೊಡುವ ನಿಟ್ಟಿನಲ್ಲಿ, ದೇಶದ ಪಾರಂಪರಿಕ ಕುಲ ಕಸುಬುಗಳಿಗೆ ಬಲ ತುಂಬುವಲ್ಲಿ ಈ ಯೋಜನೆ ಸಹಕಾರಿಯಾಗಲಿದೆ ಎಂದರು.

ಕರಾವಳಿಯ ಅಭಿವೃದ್ಧಿಯಲ್ಲಿಯೂ ಈ ಸಮಾಜದ ಕೊಡುಗೆ ಬಹಳಷ್ಟಿದೆ. ಇಲ್ಲಿನ ದೇಗುಲಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಕಾರ್ಯಗಳಲ್ಲಿ ಈ ಸಮಾಜದವರ ಕರಕುಶಲತೆ ಎದ್ದು ಕಾಣುತ್ತದೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಅಕ್ಕಸಾಲಿಗ, ಕುಂಬಾರ, ಬಡಗಿ, ಮಡಿವಾಳ, ನೇಕಾರ ಸೇರಿದಂತೆ ಹಲವು ಕುಲ ಕಸುಬುಗಳು ಅಳಿವಿನತ್ತ ಸಾಗುತ್ತಿದ್ದು ಅವುಗಳ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವ ಕರ್ಮ ಯೋಜನೆ ಜಾರಿಗೊಳಿಸಿದ್ದು ಮುಂದಿನ ಜನಾಂಗವನ್ನು ಈ ಕ್ಷೇತ್ರಗಳತ್ತ ಆಕರ್ಷಿಸುವ ಕಾರ್ಯ ನಡೆಯುತ್ತಿದೆ ಎಂದರು.

ಹರ್ಷವರ್ಧನ ನಿಟ್ಟೆ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು. ಅಕ್ಟೋಬರ್‌ 2 ರವರೆಗೆ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ನಡೆಯಲಿರುವ ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. 

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್. ಕದ್ರೋಳ್ಳಿ, ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸುಬ್ರಮಣ್ಯ ಶೆಟ್ಟಿ, ವಿಶ್ವಕರ್ಮ ಒಕ್ಕೂಟದ ಉಡುಪಿ ಮತ್ತು ದಕ್ಷಿಣ ಕನ್ನಡ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಮಾ ಜಯಪ್ರಕಾಶ್ ಆಚಾರ್ಯ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT