ADVERTISEMENT

ಭಾರತ ರಾಷ್ಟ್ರೀಯ ವಾಲಿಬಾಲ್ ತಂಡದ ನಾಯಕಿ ಶಗುನ್‌ಗೆ ಹುಟ್ಟೂರ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:24 IST
Last Updated 18 ಡಿಸೆಂಬರ್ 2025, 6:24 IST
ಚೀನಾದ ಶಾಂಗ್ಲೋದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಶ್ವಶಾಲಾ ಮಕ್ಕಳ ಬಾಲಕಿಯರ ವಿಭಾಗದ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, ಹಿಂತಿರುಗಿದ ಭಾರತ ರಾಷ್ಟ್ರೀಯ ತಂಡದ ನಾಯಕಿ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು
ಚೀನಾದ ಶಾಂಗ್ಲೋದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಶ್ವಶಾಲಾ ಮಕ್ಕಳ ಬಾಲಕಿಯರ ವಿಭಾಗದ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, ಹಿಂತಿರುಗಿದ ಭಾರತ ರಾಷ್ಟ್ರೀಯ ತಂಡದ ನಾಯಕಿ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು   

ಕಾರ್ಕಳ: ಚೀನಾದ ಶಾಂಗ್ಲೋದಲ್ಲಿ ಸ್ಕೂಲ್ ಗೇಮ್ಸ್ ಫೆಡರೇಷನ್‌ ಈಚೆಗೆ ನಡೆಸಿದ 15ರ ವಯೋಮಿತಿಯ ಅಂತರರಾಷ್ಟ್ರೀಯ ವಿಶ್ವಶಾಲಾ ಮಕ್ಕಳ ಬಾಲಕಿಯರ ವಿಭಾಗದ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ, ಹಿಂತಿರುಗಿದ ಭಾರತ ರಾಷ್ಟ್ರೀಯ ತಂಡದ ನಾಯಕಿ, ಇಲ್ಲಿನ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಶಗುನ್ ಎಸ್. ವರ್ಮ ಹೆಗ್ಡೆ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ಶಿಕ್ಷಣ ಸಂಸ್ಥೆ, ಕಾರ್ಕಳದ ನಾಗರಿಕರು ಮತ್ತು ಕ್ರೀಡಾಭಿಮಾನಿಗಳ ವತಿಯಿಂದ ಕಾರ್ಕಳ ಅನಂತಶಯನ ವೃತ್ತದಿಂದ ಶಿಕ್ಷಣ ಸಂಸ್ಥೆ‌ ತನಕ ಶಗುನ್ ಅವರನ್ನು ತೆರೆದ ಜೀಪಿನಲ್ಲಿ ಚೆಂಡೆ, ಬ್ಯಾಂಡ್ ಘೋಷಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಶುಭದರಾವ್ ಮಾತನಾಡಿ, ‘ಸಣ್ಣ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಶಗುನ್ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ನಿರಂತರ ಶ್ರಮ, ಬದ್ಧತೆ, ತಂದೆ–ತಾಯಿಯರ ಪ್ರೋತ್ಸಾಹ, ತರಬೇತುದಾರರ ತರಬೇತಿಗಳಿಂದ ಶಗುನ್ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಭಾರತ ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ಒದಗಿ ಬರಲಿ’ ಎಂದರು.

ADVERTISEMENT

ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಶಗುನ್ ಸಾಧನೆ ಅವಳ ನಿರಂತರ ಪರಿಶ್ರಮಕ್ಕೆ ದೊರೆತ ಫಲ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಒಂದೆರಡು ತಿಂಗಳ ಪರಿಶ್ರಮ ಸಾಕಾಗುವುದಿಲ್ಲ, ವರ್ಷಾನುಗಟ್ಟಲೆ ಪರಿಶ್ರಮ ಇದ್ದರೆ ಮಾತ್ರ ಇಂತಹ ಸಾಧನೆ ಸಾಧ್ಯ. ಈ ಸಾಧನೆ ನಮ್ಮ ಕಾರ್ಕಳಕ್ಕೆ ಹೆಮ್ಮೆಯ ವಿಷಯ ಎಂದರು.

ಸಂಸ್ಥೆಯ ವತಿಯಿಂದ ಶಗುನ್ ಅವರಿಗೆ ವಾಲಿಬಾಲ್‌ಗಳನ್ನು ನೆನಪಿನ ಕಾಣಿಕೆಯಾಗಿ ನೀಡಿ, ಸನ್ಮಾನಿಸಲಾಯಿತು. ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಶಗುನ್ ಅವರ ತಂದೆ ಸಂದೇಶ್ ವರ್ಮ, ತಾಯಿ ಶ್ರುತಿರಾಜ್, ತರಬೇತುದಾರರಾದ ಸಂತೋಷ್ ಡಿಸೋಜ, ಜೀವನ್ ಡಿಸಿಲ್ವಾ, ಜೈರಾಜ್ ಪೂಜಾರಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್, ಸಂಸ್ಥೆಯ ಪದವಿಪೂರ್ವ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಮುಖ್ಯ ಶಿಕ್ಷಕ ಪ್ರೌಢಶಾಲಾ ವಿಭಾಗದ ಜ್ಯೋತ್ಸ್ನಾ, ಸ್ನೇಹಲತಾ, ಪ್ರಾಥಮಿಕ ವಿಭಾಗದ ರುಡಾಲ್ಫ್ ಕಿಶೋರ್ ಲೋಬೊ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.